Advertisement

ಪಂಚ ದಾಸೋಹ ಪೀಠವಾಗಿ ಅಭಿವೃದ್ಧಿ

12:14 PM May 21, 2019 | Suhan S |

ದಾವಣಗೆರೆ: ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಜಗದ್ಗುರು ಪೀಠವು ಅಕ್ಷರ, ಅನ್ನ, ಆಶ್ರಯ, ಆರೋಗ್ಯ, ಆಧ್ಯಾತ್ಮ… ಪಂಚ ದಾಸೋಹಗಳ ಮಾದರಿ ಪೀಠವಾಗಲಿದೆ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ವಚನಾನಂದ ಸ್ವಾಮೀಜಿ ತಿಳಿಸಿದರು.

Advertisement

ಸೋಮವಾರ ಶಾಮನೂರು ರಸ್ತೆಯ ಬಾಪೂಜಿ ಬ್ಯಾಂಕ್‌ ಸಮುದಾಯ ಭವನದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಹರ ಸೇವಾ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಬಾಂಧವರ 16ನೇ ವರ್ಷದ ಸಾಮೂಹಿಕ ವಿವಾಹ ಮಹೋತ್ಸವ ಹಾಗೂ ಸಮಾಜದ ಗಣ್ಯರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ತಾವು ಅಧಿಕಾರ ವಹಿಸಿಕೊಂಡ ಒಂದು ವರ್ಷದಲ್ಲಿ ಹರಿಹರದ ಜಗದ್ಗುರು ಪೀಠ ಬಹಳ ಬೆಳೆದಿದೆ. ಮುಂದಿನ ದಿನಗಳಲ್ಲಿ ಜಗತ್ತಿಗೆ ಮಾದರಿ ಪೀಠವಾಗಿ ಬೆಳೆಯಲು ಸಮಾಜದ ಬಾಂಧವರು ಸಹಕರಿಸಬೇಕು ಎಂದರು.

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಜಗದ್ಗುರು ಪೀಠದ ಅಧಿಕಾರ ವಹಿಸಿಕೊಂಡ ಮರು ದಿನದಿಂದಲೇ ಪೀಠದಲ್ಲಿ ನಿತ್ಯ ಅನ್ನದಾಸೋಹ ನಡೆಸಲಾಗುತ್ತಿದೆ. ಹೊರನಾಡು, ಧರ್ಮಸ್ಥಳದ ಮಾದರಿಯಲ್ಲೇ ಅದನ್ನು ಮುಂದುವರೆಸಲಾಗುವುದು. ಸಿದ್ದಗಂಗೆಯ ಮಠ ಅಕ್ಷರ, ಅನ್ನ, ಆಶ್ರ¿ದ ತ್ರಿವಿಧ ದಾಸೋಹ ಮಠವಾದರೆ ಹರಿಹರದ ಪೀಠ ಅನ್ನ, ಅಕ್ಷರ, ಆಶ್ರಯದ ಜೊತೆಗೆ ಆರೋಗ್ಯ, ಆಧಾತ್ಮ ಒಳಗೊಂಡಂತೆ ಪಂಚ ದಾಸೋಹ ಪೀಠವಾಗಲಿದೆ ಎಂದು ತಿಳಿಸಿದರು.

ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಬಾಂಧವರು ಮೊದಲು ಜಗದ್ಗುರು ಪೀಠಕ್ಕೆ ಬರಬೇಕು. ಪೀಠಕ್ಕೆ ಬರುವಂತಹವರು ಹಾರ, ತುರಾಯಿ ತರುವ ಅಗತ್ಯವೇ ಇಲ್ಲ. ಹಾರ-ತುರಾಯಿ ಬದಲಿಗೆ ಅಕ್ಕಿ, ಜೋಳ, ರಾಗಿ, ಬೆಲ್ಲ, ಉಪ್ಪು ಮುಂತಾದವನ್ನು ತರಬೇಕು. ಭಕ್ತಾದಿಗಳು ನೀಡುವಂತಹ ಚಿಟಿಕೆ ಉಪ್ಪು ಯಾರಿಗಾದರೂ ಉಪಯೋಗ ಆಗಲಿದೆ. ಸಮಾಜ ಬಾಂಧವರು ಪೀಠದ ಅಭಿವೃದ್ಧಿಗೆ ತನು-ಮನ-ಧನದ ಸಹಕಾರ ನೀಡಬೇಕು ಎಂದು ತಿಳಿಸಿದರು.

ಈಚೆಗೆ ತಮ್ಮನ್ನು ಭೇಟಿಯಾದ ಶಿಕ್ಷಕರೊಬ್ಬರು ತಮ್ಮ ವೇತನದಲ್ಲಿ ಪ್ರತಿ ತಿಂಗಳು 500 ರೂಪಾಯಿಯನ್ನು ಪೀಠಕ್ಕೆ ನೀಡುವುದಾಗಿ ಹೇಳಿ 500 ರೂಪಾಯಿ ತಮಗೆ ಕೊಡಲು ಬಂದರು. ನಾವು ನಮಗೆ ಕ್ಯಾಷ್‌ ಬೇಡ ಎಂದು ಹೇಳಿ, ಬ್ಯಾಂಕ್‌ ಖಾತೆ ನೀಡಿ, ಅದರಲ್ಲಿ ಪಾವತಿಸುವಂತೆ ಹೇಳಿದೆವು. ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಜಗದ್ಗುರು ಪೀಠ ಇನ್ನು ಮುಂದೆ ಆನ್‌ಲೈನ್‌ ಪೀಠ ಆಗಲಿದೆ. ಸಮಾಜ ಬಾಂಧವರು, ಭಕ್ತರು ಆನ್‌ಲೈನ್‌ ಮೂಲಕವೇ ಧನ ಸಹಾಯ ಮಾಡಬೇಕು. ಪಾರದರ್ಶಿಕತೆ ಕಾಪಾಡುಕೊಳ್ಳುವ ಉದ್ದೇಶದಿಂದ ಈ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

Advertisement

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಜಗದ್ಗುರು ಪೀಠದಲ್ಲಿ ಪ್ರತಿ ಅಮಾವಾಸ್ಯೆಗೆ ವಿಶೇಷ ಪೂಜೆ, ಪುನಸ್ಕಾರ ನಡೆಸಲಾಗುತ್ತಿದೆ. ವಿದೇಶಿಯರು ಪೀಠಕ್ಕೆ ಆಗಮಿಸಿ, ಸ್ವಚ್ಛತೆ, ಯೋಗ, ಧ್ಯಾನ, ಪ್ರಾಣಾಯಾಮದಲ್ಲಿ ತೊಡಗಿಸಿಕೊಳ್ಳುತ್ತಿರುವುದನ್ನ ನೋಡಿದರೆ ಹರಿಹರದ ಪೀಠಕ್ಕೆ ಜಗತ್ತೇ ಹರಿದು ಬರುತ್ತಿದೆ.

ಪೀಠದಲ್ಲಿ ನ್ಯಾಯಪೀಠ ಪ್ರಾರಂಭಿಸಬೇಕು ಎಂಬ ಅಪೇಕ್ಷೆಯೂ ಇದೆ. ಒಟ್ಟಾರೆಯಾಗಿ ಹರಿಹರ ಪೀಠವನ್ನು ಸಮಾಜದ ಆದರ್ಶ ಪೀಠ, ಧರ್ಮಕ್ಷೇತ್ರವನ್ನಾಗಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು.

ದಾವಣಗೆರೆಯ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ, ಹರ ಸೇವಾ ಸಂಸ್ಥೆ ಕಳೆದ 15 ವರ್ಷದಿಂದ ಸಾಮೂಹಿಕ ವಿವಾಹ ಮಹೋತ್ಸವ ನಡೆಸಿಕೊಂಡು ಬರುತ್ತಿದೆ. ಮುಂದಿನ ವರ್ಷದಿಂದ ಹರಿಹರ ಪೀಠದಲ್ಲಿ ಸಾಮೂಹಿಕ ವಿವಾಹ ಮಹೋತ್ಸವ ನಡೆಸಲಾಗುವುದು ಎಂದು ತಿಳಿಸಿದರು.

ಹಗರಿಬೊಮ್ಮನಹಳ್ಳಿ ಶಾಖಾ ಪೀಠದ ಶ್ರೀಮಹಾಂತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅನೇಕರ ಮಹಾನ್‌ ತ್ಯಾಗದ ಫಲವಾಗಿಯೇ ಪೀಠ ಬೆಳೆಯುತ್ತಿದೆ. ಹರಿಹರದ ಪೀಠ ಹೊರನಾಡು, ಶೃಂಗೇರಿ ಮಾದರಿಯಲ್ಲಿ ಪ್ರತಿ ನಿತ್ಯ ದಾಸೋಹ ನಡೆಯುವ ಸ್ಥಳವಾಗಬೇಕು. ಸಮಾಜದ ಪ್ರತಿಯೊಬ್ಬರು ಚಾರಿತ್ರ್ಯವಂತರಾಗಬೇಕು. ಪೀಠದ ಮಾರ್ಗದರ್ಶನದಲ್ಲಿ ಬಲಿಷ್ಠ ಸಮಾಜವನ್ನ ನಿರ್ಮಾಣ ಮಾಡಬೇಕು ಎಂದು ಆಶಿಸಿದರು.

ಹರ ಸೇವಾ ಸಂಸ್ಥೆ ಅಧ್ಯಕ್ಷ ಬಿ.ಸಿ. ಉಮಾಪತಿ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಮಾಜಿ ಅಧ್ಯಕ್ಷರಾದ ಬಾವಿ ಬೆಟ್ಟಪ್ಪ, ಬಸವರಾಜ್‌ ದಿಂಡೂರ್‌, ಜಿ.ಪಿ. ಪಾಟೀಲ್, ಹನಸಿ ಸಿದ್ದೇಶ್‌, ಮಲ್ಲಣ್ಣ ಬೊಮ್ಮಸಾಗರ, ಹದಡಿ ನಟರಾಜ್‌, ಮಂಜುನಾಥ್‌ ಪುರವಂತರ್‌, ರಶ್ಮಿ ಕುಂಕೋದ್‌, ಡಾವಳಗಿ ಬಕ್ಕಪ್ಪ, ಅಜಯ್‌ಕುಮಾರ್‌, ಶಿವಣ್ಣ ಅಕ್ಕಿ ಇತರರು ಇದ್ದರು.

ಎನ್‌.ಜಿ. ನಾಗನಗೌಡರ್‌, ಡಾ| ಕೆ. ವಿಕಾಸ್‌, ಡಾ| ಜಿ.ಎನ್‌. ಗಿರೀಶ್‌ ಒಳಗೊಂಡಂತೆ ಅನೇಕರನ್ನು ಸನ್ಮಾನಿಸಲಾಯಿತು. ಕ್ರಿಯಾಶೀಲ ಸಂಘಟನಾ ಚತುರ- ಚತುರೆ ಪ್ರಶಸ್ತಿ ಪ್ರದಾನ ಮಾಡಲಾಯಿತು. 22 ಜೋಡಿಗಳ ವಿವಾಹ ನೆರವೇರಿತು. ಬಾದಾಮಿ ಕರಿಬಸಪ್ಪ, ಡಿ.ಎಂ. ಕಾಶೀನಾಥಶಾಸ್ತ್ರಿ ಕನ್ನಡದಲ್ಲೇ ವಿವಾಹ ಮಹೋತ್ಸವ ವಿಧಿ-ವಿಧಾನ ನಡೆಸಿಕೊಟ್ಟರು

Advertisement

Udayavani is now on Telegram. Click here to join our channel and stay updated with the latest news.

Next