Advertisement

ಸವಾಲು ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಿ

08:51 PM Jan 29, 2020 | Team Udayavani |

ಮೈಸೂರು: 4ನೇ ತಂಡದ ಮಹಿಳಾ ಪೊಲೀಸ್‌ ಕಾನ್ಸ್‌ಟೇಬಲ್‌ ತರಬೇತಿ ಪಡೆದ 239 ಮಂದಿ ಪ್ರಶಿಕ್ಷಾಣಾರ್ಥಿಗಳ ತಂಡ ಆಕರ್ಷಕ ನಿರ್ಗಮನ ಪಥ ಸಂಚಲನ ಪ್ರದರ್ಶಿಸಿದರು.

Advertisement

ಜ್ಯೋತಿನಗರದ ಡಿಎಆರ್‌ ಕವಾಯತು ಮೈದಾನದಲ್ಲಿ ಬುಧವಾರ ಪೊಲೀಸ್‌ ತರಬೇತಿ ಶಾಲೆ ವತಿಯಿಂದ 4ನೇ ತಂಡದ ಮಹಿಳಾ ನಾಗರಿಕ ಪೊಲೀಸ್‌ ಕಾನ್‌ಸ್ಟೆಬಲ್‌, ರೈಲ್ವೇಸ್‌ ಮತ್ತು ಕೆಎಸ್‌ಐಎಸ್‌ಎಫ್ ಪ್ರಶಿಕ್ಷಣಾರ್ಥಿಗಳ ಪಥ ಸಂಚಲನದಲ್ಲಿ 194 ಮಂದಿ ಮಹಿಳಾ ನಾಗರಿಕ ಪೊಲೀಸ್‌ ಕಾನ್‌ಸ್ಟೆಬಲ್‌, 27 ಮಂದಿ ರೈಲ್ವೇಸ್‌ ಮಹಿಳಾ ಪೊಲೀಸ್‌ ಕಾನ್‌ಸ್ಟೆಬಲ್‌ ಹಾಗೂ 18 ಮಂದಿ ಕೆಎಸ್‌ಐಎಸ್‌ಎಫ್ ಕಾನ್‌ಸ್ಟೆಬಲ್‌ ಪ್ರಶಿಕ್ಷಾಣಾರ್ಥಿಗಳು ನಿರ್ಗಮನ ಪಥಸಂಚಲನ ನಡೆಸಿಕೊಟ್ಟರು.

ಅಚ್ಚು ಕಟ್ಟಾಗಿ ಕೆಲಸ ನಿರ್ವಹಿಸಬೇಕು: ಪ್ರಶಿಕ್ಷಾಣಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ತರಬೇತಿ ವಿಭಾಗದ ಪೊಲೀಸ್‌ ಮಹಾ ನಿರ್ದೇಶಕ ಎಸ್‌. ರವಿ ಮಾತನಾಡಿ, ಕಳೆದ ಎಂಟು ತಿಂಗಳಿನಿಂದ ಸೂಕ್ತ ತರಬೇತಿ ಪಡೆದು, ಕೆಲಸಕ್ಕೆ ನಿಯುಕ್ತಿಗೊಂಡ ಮೇಲೆ ಶ್ರೇಷ್ಠ ಕಾರ್ಯ ವೈಖರಿ ಮೂಲಕ ಅಚ್ಚು ಕಟ್ಟಾಗಿ ಕೆಲಸ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಧೈರ್ಯ ಮತ್ತು ಸಾಹಸ ಪ್ರವೃತ್ತಿ ಇರಲಿ: ಪೊಲೀಸ್‌ ಇಲಾಖೆ ತುಂಬಾ ಕಟ್ಟುನಿಟ್ಟಾದ ಇಲಾಖೆಯಾಗಿದ್ದು, ಇಲ್ಲಿ ಕೆಲಸ ಮಾಡಲು ಬರುವವರು ಧೈರ್ಯ ಮತ್ತು ಸಾಹಸ ಪ್ರವೃತ್ತಿ ಮನೋಭಾವ ಹೊಂದಿರುವವರಾಗಿರಬೇಕು. ಜೊತೆಗೆ ತರಬೇತಿಯಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಮಾನಸಿಕ ಹಾಗೂ ದೈಹಿಕ ಶಕ್ತಿಯನ್ನು ತುಂಬಲಾಗುತ್ತದೆ. ನೀವುಗಳು ಕೆಲಸಕ್ಕೆ ನಿಯುಕ್ತಿಯಾದ ನಂತರ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಲು, ಜ್ಞಾನ, ಕೌಶಲ್ಯ, ಮೌಲ್ಯ ಹಾಗೂ ಸರಿಯಾದ ಮನೋಭಾವವನ್ನು ತರಬೇತಿಯಲ್ಲಿ ತಿಳಿಸಿಕೊಡಲಾಗಿದೆ. ಈ ನಾಲ್ಕು ಅಂಶಗಳನ್ನು ಗಮನದಲ್ಲಿರಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.

ಇತರರಂತೆ ಸಮರ್ಥವಾಗಿ ಕೆಲಸ ನಿರ್ವಹಿಸಿ: ಕರ್ತವ್ಯಕ್ಕೆ ಸೇರ್ಪಡೆಯಾದ ನಂತರ ಮಹಿಳಾ ಪೇದೆಗಳು ಸರಳ ಕೆಲಸಗಳಾದ ಸೆಂಟ್ರಿ, ವೈರ್‌ಲೆಸ್‌ ಹಾಗೂ ಕಂಪ್ಯೂಟರ್‌ ವಿಭಾಗಗಳಲ್ಲಿ ಕೆಲಸ ಮಾಡಲು ಹೆಚ್ಚು ಉತ್ಸುಕರಾಗುತ್ತಾರೆ ಎಂಬ ಅಪವಾದಗಳು ಇವೆ. ನೀವುಗಳು ಈ ಪ್ರವೃತ್ತಿಯನ್ನು ಬಿಟ್ಟು ಇತರರಂತೆ ಸಮರ್ಥವಾಗಿ ಕೆಲಸ ನಿರ್ವಹಿಸಬೇಕು. ರಾತ್ರಿ ಪಾಳಿ ಎಂದು ಹಿಂಜರಿಯದೇ ಇಲಾಖೆಯ ಎಲ್ಲಾ ಕೆಲಸಗಳಲ್ಲೂ ಭಾಗಿಯಾಗಿ ಎಂದು ಕಿವಿಮಾತು ಹೇಳಿದರು.

Advertisement

ಹೊಣೆಗಾರಿಕೆ ನಿಮ್ಮ ಮೇಲಿದೆ: ಕೆಎಸ್‌ಐಎಸ್‌ಎಫ್ ವಿಭಾಗವು ಹೊಸದಾಗಿದ್ದು, ಈ ಕೆಲಸ ಸವಾಲಿನದ್ದಾಗಿದೆ. ಇಲ್ಲಿ ಕೆಲಸ ಮಾಡುವವರು ಮೈಯೆಲ್ಲ ಕಣ್ಣಾಗಿ ಕಾರ್ಯನಿರ್ವಹಿಸಬೇಕು. ಮೆಟ್ರೋ ರೈಲ್ವೇ ಸ್ಟೇಷನ್‌ನಂತಹ ಸ್ಥಳಗಳಲ್ಲಿ ನಿಮ್ಮನ್ನು ನಿಯುಕ್ತಿಗೊಳಿಸಲಾಗುತ್ತದೆ. ಜೊತೆಗೆ ರೈಲ್ವೇ ವಿಭಾಗದ ಪೊಲೀಸರಿಗೂ ಹೆಚ್ಚು ಸವಾಲುಗಳಿವೆ. ಲಕ್ಷಾಂತರ ಜನರು ಪ್ರತಿನಿತ್ಯ ಸಂಚರಿಸುವ ರೈಲು ಹಾಗೂ ನಿಲ್ದಾಣಗಳಲ್ಲಿ ಕೆಲಸ ಮಾಡುವುದು ಸುಲಭವಲ್ಲ. ಪ್ರತಿ ಕೆಲಸಗಳಲ್ಲೂ ಸವಾಲುಗಳು ಇರುತ್ತವೆ. ಆದರೆ ಅದನ್ನು ಸಮರ್ಥವಾಗಿ ನಿಭಾಯಿಸುವ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದರು.

ಕೌಶಲ್ಯಗಳನ್ನು ಪ್ರತಿನಿತ್ಯವೂ ಮುಂದುವರೆಸಿ: ಇಲಾಖೆಗೆ ಸೇರಿದ ಮೇಲೆ ಕರ್ತವ್ಯಕ್ಕೆ ಎಷ್ಟು ಒತ್ತು ನೀಡುತ್ತೀರೋ ಹಾಗೆಯೇ ವೈಯಕ್ತಿಕ ಜೀವನದತ್ತಲೂ ಗಮನ ಹರಿಸಬೇಕು. ಸುಂದರವಾಗಿ ಬದುಕು ನಡೆಸಲು ವೈಯಕ್ತಿಕ ಜೀವನವನ್ನು ಸರಿಯಾದ ರೀತಿ ರೂಪಿಸಿಕೊಳ್ಳಿ. ಹಾಗೆಯೇ ತರಬೇತಿಯಲ್ಲಿ ಪಡೆದುಕೊಂಡ ವ್ಯಾಯಾಮ, ಇತರೆ ಕೌಶಲ್ಯಗಳನ್ನು ಪ್ರತಿನಿತ್ಯವೂ ಮುಂದುವರೆಸಿ ಎಂದು ಹೇಳಿದರು. ಪೊಲೀಸ್‌ ತರಬೇತಿ ಶಾಲೆಯ ಪ್ರಾಂಶುಪಾಲರಾದ ಡಾ. ಧರಣಿದೇವಿ ಮಾಲಗತ್ತಿ ಇದ್ದರು.

ಪ್ರಶಸ್ತಿ ವಿಜೇತರ ವಿವರ: 4ನೇ ತಂಡದ ಮಹಿಳಾ ಪೊಲೀಸ್‌ ಕಾನ್ಸ್‌ಟೇಬಲ್‌ ತರಬೇತಿಯಲ್ಲಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದವರಿಗೆ ಬಹುಮಾನ ವಿತರಿಸಲಾಯಿತು.

ಅತ್ಯತ್ತಮ ಪ್ರಶಿಕ್ಷಣಾರ್ಥಿ: ಬಳ್ಳಾರಿ ಜಿಲ್ಲೆಯ ರಾಧಾ ಅತ್ಯುತ್ತಮ ಪ್ರಶಿಕ್ಷಣಾರ್ಥಿಯಾಗಿ ಹೊರಹೊಮ್ಮಿದ್ದು ಸರ್ವೋತ್ತಮ ಪ್ರಶಸ್ತಿಯನ್ನು ಪಡೆದುಕೊಂಡರು.

ಒಳಾಂಗಣ ವಿಭಾಗ: ರೈಲ್ವೇಸ್‌ ಪೊಲೀಸ್‌ ಕಾನ್‌ಸ್ಟೆಬಲ್‌ ಪ್ರಬೀತಾ ಜಿ.ಎಲ್‌. ಅವರು ಒಳಾಂಗಣದಲ್ಲಿ ಪ್ರಥಮ ಬಹುಮಾನ ಪಡೆದರೆ, ಬಳ್ಳಾರಿ ಜಿಲ್ಲೆಯ ರಾಧ ದ್ವಿತೀಯ ಹಾಗೂ ರಾಯಚೂರು ಜಿಲ್ಲೆಯ ಶೇಖವ್ವ ತೃತೀಯ ಸ್ಥಾನ ಪಡೆದುಕೊಂಡರು.

ಹೊರಾಂಗಣ ವಿಭಾಗ: ಬಳ್ಳಾರಿ ಜಿಲ್ಲೆಯ ಎಂ. ದುರ್ಗಾ ಹೊರಾಂಗಣ ವಿಭಾಗದಲ್ಲಿ ಪ್ರಥಮ, ವಾಣಿಶ್ರೀ ಕೊಳ್ಳಿ ದ್ವಿತೀಯ, ಬೀದರ್‌ ಜಿಲ್ಲೆಯ ಸೋನಾಲಿ ದ್ವಿತೀಯ, ಲಕ್ಷ್ಮೀ ಪ್ರಕಾಶ್‌ ಗಡಾದ ತೃತೀಯ ಬಹುಮಾನ ಪಡೆದುಕೊಂಡರು.

ಫೈರಿಂಗ್‌ ವಿಭಾಗ: ರಾಯಚೂರು ಜಿಲ್ಲೆಯ ಅಂಬಿಕಾ ಫೈರಿಂಗ್‌ನಲ್ಲಿ ಪ್ರಥಮ, ಶೋಭಾ ಸಂಗಪ್ಪ ಬಳವಾಡ ದ್ವಿತೀಯ ಹಾಗೂ ಎಂ. ದುರ್ಗ ತೃತೀಯ ಬಹುಮಾನ ಪಡೆದರು. ಕೆಎಸ್‌ಐಎಸ್‌ಎಫ್ ವಿಭಾಗದಲ್ಲಿ ಶಿವಲೀಲಾ ಕೊಟ್ಟೂರು ಅತ್ಯುತ್ತಮ ಪ್ರಶಿಕ್ಷಣಾರ್ಥಿ ಪ್ರಶಸ್ತಿ ಪಡೆದುಕೊಂಡರು. ನಿರ್ಗಮನ ಪಥಸಂಚಲನ ನೋಡಲು ಪ್ರಶಿಕ್ಷಣಾರ್ಥಿಗಳ ಪೋಷಕರು ದೂರದ ಊರುಗಳಿಂದ ಆಗಮಿಸಿ ಆಕರ್ಷಕ ಪಥ ಸಂಚಲನವನ್ನು ವೀಕ್ಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next