Advertisement

ಸವಾಲು ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಿ

12:33 PM Jul 09, 2018 | |

ರಾಯಚೂರು: ಯಾವ ವಿದ್ಯಾರ್ಥಿ ಶಾಲೆಗಳಲ್ಲಿ ಶಿಸ್ತಿನಿಂದ, ಕಷ್ಪಪಟ್ಟು ಅಧ್ಯಯನ ಮಾಡುತ್ತಾನೋ ಆತ ಎಂಥ ಸವಾಲುಗಳನ್ನಾದರೂ ಎದುರಿಸುವ ಶಕ್ತಿ ಹೊಂದುತ್ತಾನೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಕಿಶೋರಬಾಬು ಹೇಳಿದರು.

Advertisement

ಆಶೀರ್ವಾದ ಫೌಂಡೇಶನ್‌ನಿಂದ ರವಿವಾರ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಒಬ್ಬ ವಿದ್ಯಾರ್ಥಿ ತನ್ನ ವ್ಯಾಸಂಗ ಮುಗಿಸಿ ಹೊರ ಬಂದಾಗ ಸವಾಲುಗಳು ಅವನನ್ನು ಸ್ವಾಗತಿಸುತ್ತದೆ. ಅವಕಾಶಗಳು ತೆರೆದುಕೊಳ್ಳುತ್ತವೆ. ಹೀಗಾಗಿ ಓದುವಾಗಲೇ ಯಾರು ಮಾನಸಿಕವಾಗಿ ತಮ್ಮನ್ನು ತಾವು ಸಿದ್ಧಗೊಳಿಸಬೇಕು. ಅಂದಾಗ ಮಾತ್ರ ಎಂಥ ಸವಾಲು ಬಂದರೂ ಸುಲಭವಾಗಿ ಎದುರಿಸಬಹುದು ಎಂದರು.

ಕೇವಲ ಓದುವುದನ್ನಷ್ಟೇ ಮಾಡಬೇಡಿ. ಕೌಶಲ್ಯ ಬೆಳೆಸಿಕೊಳ್ಳಬೇಕು. ಈ ಯುಗದಲ್ಲಿ ಮಾಹಿತಿ ಪ್ರವಾಹವೇ ಹರಿಯುತ್ತಿದೆ. ಆದರೆ, ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ವಿಚಾರ ನಿಮಗೆ ಗೊತ್ತಿರಬೇಕು. ಹಾಗೆಯೇ ಓದುವುದೆಂದರೆ ಬೇಕಾದ್ದನ್ನು ಓದುವುದಲ್ಲ. ನಮಗೆ ಏನು ಅಗತ್ಯ ಎಂಬುದನ್ನು ಅರಿತು ಅಧ್ಯಯನ ಮಾಡಿ. ಇಲ್ಲವಾದರೆ ವೃಥಾ ಕಾಲ ಹರಣವಾಗುತ್ತದೆ ಎಂದರು.
 
ಭಾರತೀಯ ಸೇನೆಯ ಕರ್ನಲ್‌ ಎನ್‌.ಎಚ್‌.ಮಹೇಶ್ವರ ಹೊಸಮನಿ ವಿಶೇಷ ಉಪನ್ಯಾಸ ನೀಡಿ, ಯಾರು ತಮ್ಮನ್ನು ತಾವು ಹೆಚ್ಚು ಪರೀಕ್ಷೆಗೊಳಿಪಡಿಸುತ್ತಾರೋ ಅವರು ಹೆಚ್ಚು ಸದೃಢಗೊಳ್ಳುತ್ತಾರೆ. ವಿದ್ಯಾರ್ಥಿಗಳಿಗೆ ಬಾಲ್ಯದಲ್ಲೇ ಗುರಿ ಇರಬೇಕು. ಮುಂದೆ ನಾನು ಇದನ್ನೇ ಆಗಬೇಕು ಎಂಬ ಗುರಿಯೊಂದಿಗೆ ಶ್ರಮ ಹಾಕಿದರೆ ಗೆಲುವು ಖಚಿತ ಎಂದರು.

ಸದೃಢತೆ ಎಂದರೆ ಕೇವಲ ಶಾರೀರಿಕ ಮಾತ್ರವಲ್ಲದೇ, ಮಾನಸಿಕ, ಬೌದ್ಧಿಕ, ಸದೃಢತೆ ಕೂಡ ಮುಖ್ಯ. ಸಾಕಷ್ಟು ವಿದ್ಯಾರ್ಥಿಗಳು ಗುರಿ ಇಲ್ಲದೇ ಓದುವವರಿದ್ದಾರೆ. ಅದರಿಂದ ಮುಂದೆ ಕಷ್ಟ ಎದುರಿಸಬೇಕಾಗಬಹುದು. ಇಂದು ಪಾಲಕರು ಕೂಡ ಮಕ್ಕಳನ್ನು ಬೆಳೆಸುವ ರೀತಿ ಸರಿಯಾಗಿಲ್ಲ. ಮಕ್ಕಳು ಕೇಳಿದ್ದನ್ನು ಕೊಡಿಸುವುದಷ್ಟೇ ಕರ್ತವ್ಯವಲ್ಲ. ಅವರ ಆಸಕ್ತಿಗೆ ಬೆನ್ನೆಲುಬಾಗಿ ನಿಲ್ಲುವುದು ಮುಖ್ಯ ಎಂದರು. ಬಿಜೆಪಿ ಮುಖಂಡ ಎನ್‌.ಶಂಕ್ರಪ್ಪ ಮಾತನಾಡಿದರು. 

ಆಶೀರ್ವಾದ ಫೌಂಡೇಶನ್‌ ಅಧ್ಯಕ್ಷ ಡಾ| ಬಸನಗೌಡ ಪಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ಎಲ್ಲ ಸಮುದಾಯಗಳ ಸುಮಾರು 300ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸತ್ಕರಿಸಲಾಯಿತು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ರಾಧಾಬಾಯಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next