Advertisement

ಅಭಿವೃದ್ಧಿ ಮಂತ್ರಕ್ಕೆ ಜಯ

12:39 PM Nov 11, 2020 | Suhan S |

ಬೆಂಗಳೂರು: ವ್ಯವಸ್ಥಿತ ಪೂರ್ವ ಸಿದ್ಧತೆ, ಗೊಂದಲ  ಮುಕ್ತ ಅಭ್ಯರ್ಥಿ ಆಯ್ಕೆ, ಆರಂಭದಲ್ಲೇ ಅತೃಪ್ತಿ ಉಪಶಮನ, ಸಾಮೂಹಿಕ ನಾಯಕತ್ವ, ಯೋಜಿತ ಪ್ರಚಾರ, ವಸ್ತುಸ್ಥಿತಿಗೆ ಪೂರಕ ಸಂಘಟಿತ ಕಾರ್ಯ ತಂತ್ರ, ಅಭಿವೃದ್ಧಿ ಮಂತ್ರ… ಇವು ರಾಜರಾಜೇಶ್ವರಿ ನಗರ ಹಾಗೂ ಶಿರಾ ಕ್ಷೇತ್ರದಲ್ಲಿ ಕಮಲ ಅರಳಲು ನೆರವಾದ ಪ್ರಮುಖ ಅಂಶಗಳೆನಿಸಿವೆ.

Advertisement

ಉಪಚುನಾವಣೆಯಲ್ಲಿ ಬಿಜೆಪಿ ಜಯ ದಾಖಲಿಸುವ ಮೂಲಕ ವಿಧಾನಸಭೆಯಲ್ಲಿ ಸಂಖ್ಯಾಬಲವನ್ನು 119ಕ್ಕೆ ಹಿಗ್ಗಿಸಿಕೊಂಡಿದೆ. ಜತೆಗೆ ಹಳೇ ಮೈಸೂರು ಭಾಗದಲ್ಲೂ ಶಕ್ತಿ ವೃದ್ಧಿಸಿಕೊಂಡಿದೆ. ಉಪಚುನಾವಣೆ ಘೋಷಣೆಗೂ ಮೊದಲೇ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಕೈಗೊಂಡಿದ್ದ ಪೂರ್ವ ಸಿದ್ಧತೆ ಗೆಲುವಿನ ಹಾದಿಗೆ ಆರಂಭದಲ್ಲೇ ಉತ್ತಮ ತಳಪಾಯ ಒದಗಿಸಿದಂತಿತ್ತು. ಅನರ್ಹಗೊಂಡಿ ದ್ದರೂ ಮುನಿರತ್ನ‌ ಅವರು ಕೋವಿಡ್‌ ಸಂದರ್ಭದಲ್ಲಿ ಕ್ಷೇತ್ರದ ಬಡವರು, ಆರ್ಥಿಕವಾಗಿ

ಹಿಂದುಳಿದವರಿಗೆ ನೆರವಾಗಿದ್ದು, ಅಧಿಕಾರದಲ್ಲಿರದಿದ್ದರೂ ಸಮಸ್ಯೆಗೆ ಸ್ಪಂದಿಸಿದ ವಿಶ್ವಾಸ ವನ್ನು ಜನರಲ್ಲಿ ಮೂಡಿಸಿತ್ತು. ಅದೇ ರೀತಿ ಶಿರಾ ಕ್ಷೇತ್ರದಲ್ಲೂ ಬಿಜೆಪಿ ವಿಧಾನ ಪರಿಷತ್‌ ಸದಸ್ಯರಾದ ಎನ್‌. ರವಿಕುಮಾರ್‌ ಅವರು ಉಪಚುನಾವಣೆ ಘೋಷಣೆಗೂ ಮೊದಲೇ ಅಂದರೆ ಸೆಪ್ಟೆಂಬರ್‌ ಆರಂಭದಲ್ಲೇ ಹತ್ತಾರು ದಿನ ನಿರಂತರ ಸಭೆ ನಡೆಸಿದ್ದರು. 264 ಬೂತ್‌ ಮಟ್ಟದ ಸಮಿತಿ, ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿ ತಳಮಟ್ಟದಲ್ಲಿ ಕಾರ್ಯಕರ್ತರ ಪಡೆಯನ್ನು ಸಜ್ಜುಗೊಳಿಸಿದ್ದು, ಸಂಘಟನೆಯ ಬಲ ಹೆಚ್ಚಿಸಿತ್ತು.

ಮುನಿರತ್ನ ಅವರಿಗೆ ಟಿಕೆಟ್‌ ನೀಡುವ ಮೂಲಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಬಿಜೆಪಿ ಕೊಟ್ಟ ಮಾತು ಉಳಿಸಿಕೊಂಡಂತಾಯಿತು. ಜತೆಗೆ ಗೊಂದಲಗಳಿಗೆ ತೆರೆ ಎಳೆಯಲಾಯಿತು. ಶಿರಾ ಕ್ಷೇತ್ರದಲ್ಲೂ ಜೆಡಿಎಸ್‌ನಲ್ಲಿದ್ದ ಡಾ.ರಾಜೇಶ್‌ ಗೌಡ ಪಕ್ಷ ಸೇರ್ಪಡೆಗೂ ಮೊದಲೇ ವರಿಷ್ಠರಿಗೆ ಅವರ ಹೆಸರು ಶಿಫಾರಸು ಮಾಡಲಾಗಿತ್ತು. ಜತೆಗೆ ಅಸಮಾಧಾನಗೊಂಡಿದ್ದ ಹಿಂದಿನ ಚುನಾವಣೆಗಳ ಪರಾಜಿತ ಅಭ್ಯರ್ಥಿಗಳನ್ನು ವಿಶ್ವಾಸದಲ್ಲಿಟ್ಟುಕೊಂಡು ಸಂಘಟಿತವಾಗಿ ಪ್ರಚಾರದಲ್ಲಿ ತೊಡಗುವಂತೆ ಮಾಡುವ ಮೂಲಕ ಗೊಂದಲವಿಲ್ಲದಂತೆ ಆಯ್ಕೆ ಪ್ರಕ್ರಿಯೆ ಮುಗಿಸಿದ್ದು ಫ‌ಲ ನೀಡಿದಂತಿದೆ.

ಹಿರಿಯ- ಕಿರಿಯರಿಗೆ ಉಸ್ತುವಾರಿ: ಎರಡೂ ಕ್ಷೇತ್ರಗಳಿಗೆ ಹಿರಿಯ ಅನುಭವಿ ನಾಯಕರ ಜತೆಗೆ ಯುವ ಉತ್ಸಾಹಿ ಮುಖಂಡರನ್ನು ಉಸ್ತುವಾರಿಗಳನ್ನಾಗಿ ನಿಯೋಜಿಸಲಾಗಿತ್ತು. ಜತೆಗೆ ಆ ಕ್ಷೇತ್ರಗಳ ಪ್ರಮುಖ ಸಮುದಾಯಗಳ ನಾಯಕರು ಉಸ್ತುವಾರಿಗಳ ಪಟ್ಟಿಯಲ್ಲಿರುವಂತೆ ನೋಡಿಕೊಂಡಿದ್ದು ಎಲ್ಲ ವರ್ಗದವರನ್ನು ಸೆಳೆಯಲು ಸಹಕಾರಿಯಾದಂತಾಯಿತು. ಹಿರಿಯ ನಾಯಕರು ಸಾಂಪ್ರದಾಯಿಕ ಸಂಘಟನಾ ತಂತ್ರಗಳನ್ನು ಬಳಸಿದರೆ ಯುವಮುಖಂಡರು ಹೊಸ ತಲೆಮಾರಿನ ಕೌಶಲ್ಯಗಳನ್ನು ಪ್ರಯೋಗಿಸಿ ಮತದಾರರ ಮನವೊಲಿಸುವ ಕಸರತ್ತು ನಡೆಸಿದ್ದರು. ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ 13 ದಿನ ಕ್ಷೇತ್ರದಲ್ಲೇ ಮೊಕ್ಕಾಂ ಹೂಡಿ ರೂಪಿಸಿದ ರಣತಂತ್ರ ಚುನಾವಣಾ ಗೆಲುವಿಗೆ ಸಹಕಾರಿಯಾಗಿದೆ.

Advertisement

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರುಪ್ರಚಾರ ನಡೆಸಿ ಸಂಘಟನೆ ಬಲ ತುಂಬಿದರು. ಯಡಿಯೂರಪ್ಪ ಅವರು ಉಭಯ ಕ್ಷೇತ್ರಗಳಲ್ಲಿ ತಲಾ ಒಂದು ದಿನ ಪ್ರಚಾರ ನಡೆಸಿ ಕಾರ್ಯಕರ್ತರಲ್ಲಿ ಸಂಚಲನ ಮೂಡಿಸಿದರು. ಉಪ ಚುನಾವಣೆ ಯುದ್ದಕ್ಕೂಗೊಂದಲಇಲ್ಲವೇವೈಯಕ್ತಿಕ,ಅವಹೇಳನಕಾರಿ ಟೀಕೆ, ಟಿಪ್ಪಣಿ ಮಾಡದ ನಾಯಕರ ಅಭಿವೃದ್ಧಿಗಾಗಿ ಮತ ಯಾಚಿಸಿದರು.

ಹಳೇ ಮೈಸೂರು ಭಾಗದಲ್ಲಿ ಶಕ್ತಿ ವೃದ್ಧಿ: ಬಿಜೆಪಿ ಸಂಘಟನೆ ನಿರೀಕ್ಷಿತ ಮಟ್ಟದಲ್ಲಿಲ್ಲದ ಹಳೇ ಮೈಸೂರು ಭಾಗದಲ್ಲಿ ಎರಡು ಸ್ಥಾನಗಳನ್ನು ಗೆದ್ದಿರುವುದು ಪಕ್ಷದ ಬಲವನ್ನು ಇನ್ನಷ್ಟು ವೃದ್ಧಿಸಲಿದೆ.ಕಳೆದ ಡಿಸೆಂಬರ್‌ನಲ್ಲಿ ನಡೆದ ಉಪಚುನಾವಣೆಯಲ್ಲಿ ಗೆದ್ದ 12 ಸ್ಥಾನದ ಪೈಕಿ ಐದು ಸ್ಥಾನ ಹಳೆ ಮೈಸೂರಿನ ಕ್ಷೇತ್ರಗಳು. ಇದೀಗ ಎರಡು ಕ್ಷೇತ್ರ ಸೇರ್ಪಡೆಯಾಗಿದ್ದು, ಒಟ್ಟು ಏಳು ಸ್ಥಾನಕ್ಕೇರಿದೆ. ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿದಂತೆ ಶಿರಾದಲ್ಲಿ ಬಿಜೆಪಿಗೆ ಇದು ಮೊದಲ ಜಯ. ಇದರಿಂದ ಗೆದ್ದ ಕ್ಷೇತ್ರ ಮಾತ್ರವಲ್ಲದೆ ಸುತ್ತಮುತ್ತಲಿನ ಕ್ಷೇತ್ರಗಳಲ್ಲೂ ಬಿಜೆಪಿ ಸಂಘಟನೆ ವೃದ್ಧಿಸಿಕೊಳ್ಳಲು ನೆರವಾಗಲಿದೆ.

 

– ಎಂ.ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next