ಗುಳೇದಗುಡ್ಡ: ಕನ್ನಡ ಭಾಷೆಯನ್ನು ಕೇವಲ ನವೆಂಬರ್‌ಗೆ ಸೀಮಿತಗೊಳಿಸಬಾರದು. ನಿಸಾರ ಅಹಮ್ಮದ್ ಅವರ ನಿತ್ಯೋತ್ಸವದಂತೆ ನಿತ್ಯವಾಗಿರಬೇಕು. ಕನ್ನಡ ನಾಡು ನುಡಿ ಭಾಷೆ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಮಾಜಿ ಶಾಸಕ ರಾಜಶೇಖರ ಶೀಲವಂತ ಹೇಳಿದರು. ಪಟ್ಟಣದಲ್ಲಿ ಮೇಘ ಮೇತ್ರಿ ಕನ್ನಡ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಮೇಘಮೇತ್ರಿ 4ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿ, ಇಂಗ್ಲಿಷ್ ಜ್ಞಾನ ಬೆಳೆಸಿಕೊಳ್ಳಬೇಕು. ಆದರೆ, ಅದರ ಮೇಲೆ ಅತಿಯಾದ ವ್ಯಾಮೋಹ ಇರಬಾರದು. ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು.
ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿ, ಮೇಘಮೇತ್ರಿ ಕನ್ನಡ ಸಾಹಿತ್ಯ ವೇದಿಕೆಯು ಸಾಹಿತ್ಯ ಸಮ್ಮೇಳನದ ಮೂಲಕ ಹೊಸ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ. ಪುಸ್ತಕ ಓದುವ ಗೀಳು ಬೆಳೆಸಿಕೊಳ್ಳಬೇಕು. ಓದುವ ಪ್ರವೃತ್ತಿ ಹೆಚ್ಚಿಸುವ ಸಾಹಿತ್ಯ ಇನ್ನಷ್ಟು ಮೂಡಿಬರಲಿ ಎಂದು ಹೇಳಿದರು.
ಕೋಟೆಕಲ್-ಕಮತಗಿ ಹೊಳೆಹುಚ್ಚೇಶ್ವರ ಸ್ವಾಮೀಜಿ ಮಾತನಾಡಿ, ಕನ್ನಡ ನಾಡು ನುಡಿಯು ಬಹಳ ಶ್ರೇಷ್ಠವಾದಂತದು. ಕನ್ನಡ ಭಾಷೆ ಬೆಳೆಸುವ ಕೆಲಸ ಮಾಡಬೇಕು. ಮೇಘಮೇತ್ರಿ ವೇದಿಕೆ ಸಾಹಿತ್ಯ ಕ್ಷೇತ್ರಕ್ಕೆ ಹೊಸ ಕೊಡುಗೆ ನೀಡುತ್ತಿದೆ. ಯುವಬರಹಗಾರರು ಮೂಡಿಬರಲಿ ಎಂದರು.
ಮುರುಘಾಮಠದ ಕಾಶಿನಾಥ ಸ್ವಾಮೀಜಿ, ಕಮತಗಿ ಹಿರೇಮಠ ಶಿವಕುಮಾರ ಸ್ವಾಮೀಜಿ, ರೆವೆರೆಂಡ್ ಸುರೇಶ ನಾಯ್ಕರ ಸಾನ್ನಿಧ್ಯ ಹಾಗೂ ಹಿರಿಯ ಸಾಹಿತಿ ಮಲ್ಲಿಕಾರ್ಜುನ ಬನ್ನಿ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖಂಡ ಎನ್.ಬಿ. ಬನ್ನೂರ, ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ, ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ| ಸತೀಶಕುಮಾರ ಹೊಸಮನಿ, ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಮಾಯಣ್ಣ, ಡಾ| ಬೈರಮಂಗಲ ರಾಮೇಗೌಡ, ಕಜಾಪ ಅಧ್ಯಕ್ಷ ಶೆಲ್ಲಿಕೇರಿ, ಸಂಗನಗೌಡ ಪಾಟೀಲ, ರವಿ ಅಂಗಡಿ, ಭೀಮನಗೌಡ ಪಾಟೀಲ, ಮೇಘಮೇತ್ರಿ ವೇದಿಕೆ ಅಧ್ಯಕ್ಷ ರಮೇಶ ಕಮತಗಿ, ಡಾ| ಪ್ರಕಾಶ ನರಗುಂದ ಇದ್ದರು.