Advertisement

ಜೇನು ಸಂತಾನ ಅಭಿವೃದ್ಧಿಗೊಳಿಸಿ

04:47 PM Apr 21, 2019 | pallavi |

ಶಿರಸಿ: ಜೇನು ಗೂ‌ನ್ನು ರಕ್ಷಿಸಿ ಅದರ ಸಂತಾನವನ್ನು ಅಭಿವೃದ್ಧಿ ಪಡಿಸುವುದೆ ನಮ್ಮ ಧ್ಯೇಯವಾಗಬೇಕು. ಆ ಮೂಲಕ ಜೇನು ತಳಿ ಉಳಿಸಬೇಕು ಎಂದು ಕೋಡ್ಸರದ ಜೇನು ಕೃಷಿಕ ಚಂದ್ರಶೇಖರ ಹೆಗಡೆ ಆಶಿಸಿದರು.

Advertisement

ಅವರು ಕೋಡಸರದಲ್ಲಿ ಇಲ್ಲಿನ ಪ್ರಕೃತಿ ಸಂಸ್ಥೆ ನಡೆಸಿದ ಜೇನು ಹಬ್ಬದಲ್ಲಿ ಪಾಲ್ಗೊಂಡು ಮಾತನಾಡಿ, ಜೇನು ಕೃಷಿ ಮಾಡಿದರೆ ತೋಟಗಾರಿಕಾ ಉತ್ಪನ್ನಗಳೂ ಹೆಚ್ಚಳವಾಗುತ್ತವೆ. ಜೇನು ಕೃಷಿ ಜೊತೆಗೆ ನಾವೂ ಅವುಗಳ ಸಂತತಿ ಉಳಿಸಬೇಕು ಎಂದರು.

ಪೆಟ್ಟಿಗೆಯ ಜೊತೆಗೆ ಪಾರಂಪರಿಕವಾಗಿ ಗಡಿಗೆ, ಬೈನೆ ಮರದ ತುಂಡನ್ನು ಉಪಯೋಗಿಸಿ ಕಾಡಿನೊಳಗೆ ಇವುಗಳನ್ನು ಇಟ್ಟು ಸ್ಥಳೀಯ ಜೇನು ಸಾಕಾಣಿಕೆ ಮಾಡುತ್ತಿರುವುದನ್ನು ತೋರಿಸಿದರು. ಜೊತೆಗೆ 9 ಮಿಸರಿ ಜೇನು ಪಡೆಗಳನ್ನು ಸಾಕಿರುವುದು ಒಂದು ವಿಶೇಷ ಸಂಗತಿಯಾಗಿದೆ ಎಂದರು.

ಸಂಸ್ಥೆಯ ಮುಖ್ಯಸ್ಥ ಪಾಂಡುರಂಗ ಹೆಗಡೆ ಪ್ರಾಸ್ತಾವಿಕ ಮಾತನಾಡಿ, ಕಳೆದ 18 ವರ್ಷಗಳಿಂದ ಸತತವಾಗಿ ಜೇನು ಹಬ್ಬವನ್ನು ಆಚರಿಸುತ್ತಾ ಬಂದಿದ್ದು, 19ನೇ ವರ್ಷದ ಮೊದಲ ಜೇನು ಹಬ್ಬ ಇದಾಗಿದೆ ಎಂದು ದಶಕಗಳ ಕಾಲ ಜೇನಿನ ಕುರಿತಾಗಿ ನಿರಂತರ ಜಾಗೃತಿ ಮೂಡಿಸುವ ಕೆಲಸ ಸಫಲವಾಗಿ ನಡೆದು ಬಂದ ದಾರಿಯ ಬಗ್ಗೆ ಮಾಹಿತಿ ನೀಡಿದರು.

ಜೇನು ಗೂಡಿನ ಪರಿಚಯ, ಜೇನು ಹುಳುಗಳ ಕುರಿತು ಪ್ರಾತ್ಯಕ್ಷಿಕೆಯನ್ನು ಮಾಡಿ ಭಾಗವಹಿಸಿದ ಜನರಿಗೆ ಹೆಣ್ಣು ಮತ್ತು ಗಂಡು ಜೇನು ಹುಳಗಳು, ಕೋಶಾವಸ್ಥೆಯಲ್ಲಿರುವ ಮೊಟ್ಟೆ, ಜೇನಿನ ಆಹಾರವಾದ ಪರಾಗ ಮತ್ತು ರಾಣಿ ಹುಳಗಳ ಕುರಿತು ಮಾಹಿತಿ ನೀಡಲಾಯಿತು.

Advertisement

ನಂತರ ಜೇನು ತುಪ್ಪವನ್ನು ಅಹಿಂಸಾತ್ಮಕವಾಗಿ ಹೇಗೆ ತೆಗೆಯಲು ಸಾಧ್ಯ ಎಂಬುದನ್ನು ನೆರೆದ ಜನರಿಂದಲೇ ತುಪ್ಪ ತುಂಬಿದ ಸೀಲ್ ಮಾಡಿದ ಫ್ರೇಮ್‌ಗಳನ್ನು ಜೇನು ಪೆಟ್ಟಿಗೆಯ ಮೇಲಿನ ಸೊಪರ್‌ನಿಂದ ತೆಗೆದು ಜೇನು ತೆಗೆಯುವ ಮಶೀನ್‌ನಲ್ಲಿ ಹಾಕಿ ತಿರುಗಿಸಿ ಶುದ್ಧ ತಾಜಾ ಜೇನು ತುಪ್ಪವನ್ನು ಹೇಗೆ ತೆಗೆಯಲು ಸಾಧ್ಯ ಎಂದು ತೋರಿಸಲಾಯಿತು.

ಜೇನು ಹಬ್ಬದ ಆಚರಣೆಯಲ್ಲಿ ಶುದ್ಧವಾದ, ತಾಜಾ ಜೇನು ತುಪ್ಪದ ರುಚಿಯನ್ನು ಸವಿದ ನಂತರ ಜೇನು ಸಂತತಿಯ ಕುರಿತು ಜನರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಜೇನು ಹೇಗೆ ಮೇಣದ ರಟ್ಟನ್ನು ತಯಾರಿಸುತ್ತದೆ, ಜೇನು ಮತ್ತು ರಾಣಿ ನೊಣದ ಆಯುಸ್ಸು, ಜೇನು ಹುಳು ಕಚ್ಚಿದರೆ ಯಾಕೆ ಮತ್ತು ಹೇಗೆ ಮನುಷ್ಯನ ದೇಹದಲ್ಲಿ ಯಾವ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಸ್ವಾರಸ್ಯಕರ ಚರ್ಚೆ ನಡೆಯಿತು.

ಕೋಡ್ಸರದ ದತ್ತಾತ್ರೇಯ ಹೆಗಡೆ, ಪ್ರಕೃತಿ ಸಂಸ್ಥೆಯ ಸುಬ್ಬಣ್ಣ, ಹೊಸಮನೆಯ ಗೌತಮ್‌, ಯಲುಗಾರಿನ ಉಮೇಶ ಜೋಶಿ, ಹುಣಸೇಕೊಪ್ಪದ ಮಹಾಬಲೇಶ್ವರ ಹೆಗಡೆ, ಸಂಕದಮನೆ ನೀಲಕಂಠ, ವಿದ್ಯಾಧರ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next