Advertisement

ಶಿಕ್ಷಣದಿಂದ ಅಭಿವೃದ್ಧಿ ಸಾಧಿಸಿ

03:44 PM Jul 02, 2018 | Team Udayavani |

ತುಮಕೂರು: ತಿಗಳ ಸಮಾಜ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಬಹಳ ಹಿಂದುಳಿದಿದ್ದು ಈ ಸಮುದಾಯ ಆರ್ಥಿಕವಾಗಿ ಸದೃಢವಾಗಬೇಕಾದರೆ ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಪ್ರಗತಿ ಸಾಧಿಸಬೇಕು ಎಂದು ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್‌ ಹೇಳಿದರು.

Advertisement

ನಗರದ ಸರಪಳಿ ಸ್ವಾಮಿ ಮಠದ ಆವರಣದಲ್ಲಿ ಭಾನುವಾರ ಮಹಾಲಕ್ಷ್ಮೀ ತಿಗಳರ ಮಹಾ ಸಂಸ್ಥಾನ ಟ್ರಸ್ಟ್‌ ವತಿಯಿಂದ ಏರ್ಪಡಿಸಿದ್ದ ಗಣ್ಯರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.  ತಿಗಳ ಸಮುದಾಯ ಶೋಷಿತ ವರ್ಗಕ್ಕೆ ಸೇರಿದ ಸಮಾಜ ಈ ಸಮಾಜದಲ್ಲಿ ಬಹಳಷ್ಟು ಶ್ರಮ ಜೀವಿಗಳಿದ್ದಾರೆ. ಕರ್ನಾಟಕ ಅಷ್ಟೇ ಅಲ್ಲ ದೇಶದಲ್ಲಿ ತೋಟಗಾರಿಕೆ ಉಳಿದಿದ್ದರೆ ಈ ಸಮುದಾಯದಿಂದ ಮಾತ್ರ ಎಂದು ಹೇಳಿದರು.

ಕೃಷಿ ಮೂಲ ಉದ್ಯೋಗ: ಚಿಕ್ಕ ಜಾಗ ಸಿಕ್ಕಿದರು ತೋಟಗಾರಿಗೆ ಕೃಷಿ ಮಾಡುವುದು ಇವರ ರಕ್ತಗತವಾಗಿ ಬಂದಿದ್ದು. ತೋಟಗಾರಿಕೆ ಬೆಳೆ ಬೆಳೆದು ಯಶಸ್ಸು ಕಾಣಬೇಕಾಗಿದೆ. ತೋಟಗಾರಿಕೆ ಬೆಳೆಗಳಿಗೆ ದೇಶದ ಬೇರೆ ಬೇರೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ ಎಂದು ಹೇಳಿದರು. 

ರೈತರಿಗೆ ಸರ್ಕಾರ ಹಲವಾರು ಸೌಲಭ್ಯ ಕೊಡುತ್ತಿದೆ. ಈ ಹಿಂದಿನ ಸರ್ಕಾರವೂ ನೀಡಿದೆ ಈಗಿನ ಸಮ್ಮಿಶ್ರ ಸರ್ಕಾರವೂ ರೈತರಿಗೆ ಅನುಕೂಲವನ್ನು ಒದಗಿಸುತ್ತದೆ ರೈತರು ಸರ್ಕಾರದಿಂದ ಬರುವ ಸೌಲಭ್ಯ ಗಳನ್ನು ಪಡೆದು ಕೃಷಿ ತೋಟಗಾರಿಕೆ ಕ್ಷೇತ್ರದಲ್ಲಿ ಪ್ರಗತಿ ಕಂಡು ಆರ್ಥಿಕವಾಗಿ ಸದೃಢವಾಗಬೇಕು. ಇದರ ಜೊತೆ ಜೊತೆಗೆ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಬೇಕು ಎಂದು ಹೇಳಿದರು.

ಸರ್ಕಾರದ ನೆರವು: ತಿಗಳ ಸಮುದಾಯಕ್ಕೆ ಸರ್ಕಾರ ಎಲ್ಲಾ ರೀತಿಯ ಪ್ರೋತ್ಸಾಹ ನೀಡಲಿದೆ. ಹನುಮಂತಗಿರಿಗೆ 50 ಲಕ್ಷ ಅನುದಾನ ನೀಡಿದ್ದೆ. ಎಂಎಲ್‌ಸಿ ಅನುದಾನದಲ್ಲಿ 10 ಲಕ್ಷ ರೂ. ನೀಡಿದ್ದೆ ಈ ಹಿಂದಿನ ಸರ್ಕಾರದಲ್ಲಿ ಸರಪಳಿ ಮಠಕ್ಕೆ 3 ಕೋಟಿ ರೂ. ನೀಡಲಾಗಿತ್ತು. ಸರ್ಕಾರದ ಆದೇಶವೂ ಆಗಿತ್ತು ಚುನಾವಣೆ ಬಂದಿದ್ದರಿಂದ ಆ ಹಣ ಬಿಡುಗಡೆಯಾಗಿಲ್ಲ ಈ ಸಂಬಂಧವಾಗಿ ಮುಖ್ಯಮಂತ್ರಿಗಳ ಮನವೊಲಿಸಿ ಹಣವನ್ನು ಬಿಡುಗಡೆ ಮಾಡಿಸುವ ಭರವಸೆ ನೀಡಿದರು.

Advertisement

ಶಿಕ್ಷಣಕ್ಕೆ ಹಣ ಕೇಳುತ್ತಿಲ್ಲ: ಸಂಸದ ಎಸ್‌.ಪಿ. ಮುದ್ದಹನುಮೇಗೌಡ ಮಾತನಾಡಿ, ಎಲ್ಲಾ ಸಮಾಜದ ಸಮುದಾಯಗಳು ಸಮುದಾಯ ಭವನವನ್ನು ಕಟ್ಟಲು ಹಣವನ್ನು ಕೇಳುತ್ತಾರೆ ಆದರೆ ಮಕ್ಕಳ ಶೈಕ್ಷಣಿಕಾಭಿವೃದ್ಧಿಗಾಗಿ ಯಾರು ಸಹ ಹಣವನ್ನು ಕೇಳುತ್ತಿಲ್ಲ ಎಂದು ವಿಷಾದಿಸಿದರು.
 
 ಸಣ್ಣ ಕೈಗಾರಿಕಾ ಸಚಿವ ಎಸ್‌.ಆರ್‌. ಶ್ರೀನಿವಾಸ್‌ ಮಾತನಾಡಿ, ನಮ್ಮ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಿಕೊಂಡು ಶೈಕ್ಷಣಿಕವಾಗಿ ಪ್ರಗತಿಹೊಂದಬೇಕಾದರೆ ಮಠಗಳು ಅಗತ್ಯ ಆದ್ದರಿಂದ ಮಠ ಬೆಳೆಯಲು ಎಲ್ಲರೂ ಕೈಜೋಡಿಸಬೇಕೆಂದು ಹೇಳಿದರು.

ನಿಗಮ, ಮಂಡಳಿ ಸ್ಥಾನ ನೀಡಿ: ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಶ್ರೀ ಮಹಾಲಕ್ಷ್ಮೀ ಮಹಾ ಸಂಸ್ಥಾನ ಪೀಠದ ಜ್ಞಾನಾನಂದಪುರಿ ಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿ ತಿಗಳ ಸಮುದಾಯ 40 ಲಕ್ಷಕ್ಕೂ ಹೆಚ್ಚು ಜನರಿದ್ದು ನಮ್ಮ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು, ನಿಗಮ ಮಂಡಲಿಗಳಿಗೆ ನಮ್ಮ ಸಮುದಾಯದ ಜನರಿಗೆ ಸ್ಥಾನ ನೀಡಬೇಕೆಂದು ಮನವಿ ಮಾಡಿದರು. 

ಅಣಪನಹಳ್ಳಿ ಶನೇಶ್ವರ ಮಠದ ನರಸಿಂಹ ಸ್ವಾಮೀಜಿ, ಶಾಸಕ ಜಿ.ಬಿ. ಜ್ಯೋತಿಗಣೇಶ್‌, ವಿಧಾನ ಪರಿಷತ್‌ ಸದಸ್ಯ ಪಿ.ಆರ್‌. ರಮೇಶ್‌, ಕೆಪೆಕ್‌ ನಿಗಮದ ಮಾಜಿ ಅಧ್ಯಕ್ಷ ರೇವಣ್ಣ ಸಿದ್ದಯ್ಯ, ಬಿಬಿಎಂಪಿ ಸ್ಥಾಯಿ ಸಮಿತಿ ಅಧ್ಯಕ್ಷ ಗುಣಶೇಖರ್‌, ಬಿಬಿಎಂಪಿ ವಿರೋಧ ಪಕ್ಷದ ನಾಯಕ ಎ.ಎಚ್‌. ಬಸವರಾಜು, ಬೆಂಗಳೂರು ಕೆಟಿಎಸ್‌ವಿ ಸಂಘದ ಅಧ್ಯಕ್ಷ ಎಸ್‌. ಸಿದ್ದಗಂಗಯ್ಯ, ಮಾಜಿ ಶಾಸಕ ನೆ.ಲ. ನರೇಂದ್ರ ಬಾಬು, ನಗರಸಭೆ ಮಾಜಿ ಅಧ್ಯಕ್ಷೆ ಕಮಲಮ್ಮ, ಪಾಲಿಕೆ ಸದಸ್ಯರಾದ ರಾಮಕೃಷ್ಣಯ್ಯ, ವಾಸು, ಜಯಲಕ್ಷ್ಮೀ ನಗರಸಿಂಹರಾಜು, ಬಾಲಕೃಷ್ಣ, ಲಲಿತಾ ರವೀಶ್‌, ಜಯಮ ಭಾಗವಹಿಸಿದ್ದರು. 

ದೇಶದಲ್ಲಿ ಸಾವಿರಾರು ರೈತರು ಸಾಲ ಬಾಧೆ, ಬೆಳೆ ವೈಫ‌ಲ್ಯಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ತಿಗಳ ಸಮುದಾಯದ ಒಬ್ಬರೂ ಆತ್ಮಹತ್ಯೆ ಮಾಡಿಕೊಂಡಿಲ್ಲ. ಎಂತಹ ಸಂದರ್ಭ ಬಂದರೂ ಶ್ರಮ ಜೀವನದ ಮೂಲಕ
ಎದುರಿಸುತ್ತೇವೆ ಎನ್ನುವ ಮನಸ್ಥತಿ ತಿಗಳ ಸಮುದಾಯಕ್ಕಿದೆ. ಶೋಷಿತ ವರ್ಗಕ್ಕೆ ಸೇರಿದ ಈ ಸಮುದಾಯಕ್ಕೆ ಯಾರ
ಸಹಕಾರವೂ ಇಲ್ಲ ಎಂದುಕೊಳ್ಳಬೇಡಿ ನನ್ನ ಸಹಕಾರ ಈ ಸಮುದಾಯಕ್ಕೆ ಇರುತ್ತದೆ ನಿಮ್ಮ ಸಮುದಾಯದವರಿಗೆ ರಾಜಕೀಯ ಸ್ಥಾನಮಾನ ನೀಡುತ್ತೇನೆ
 ಡಾ. ಜಿ. ಪರಮೇಶ್ವರ್‌ ಉಪ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next