ಪಿರಿಯಾಪಟ್ಟಣ: ತಾಲೂಕಿನಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳನ್ನು ಗಮನದಲ್ಲಿ ಇಟ್ಟುಕೊಂಡು ಮುಂದಿನ ಚುನಾವಣೆಯಲ್ಲಿ ಜನರು ಮತಹಾಕಬೇಕು ಎಂದು ಶಾಸಕ ಕೆ.ವೆಂಕಟೇಶ್ ತಿಳಿಸಿದರು. ತಾಲೂಕಿನ ಚೌತಿ ಗ್ರಾಮದಲ್ಲಿ ನಡೆದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಮಕ್ಕೆ ಗ್ರಾಮ ಪಂಚಾಯಿತಿ ಕೇಂದ್ರ ಮಂಜೂರಾತಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಹಣ ನೀಡಲಾಗಿದೆ. ಚುನಾವಣೆ ಹತ್ತಿರ ಬರುತ್ತಿವುದರಿಂದ ಯಾವುದೆ ಭರವಸೆ ನೀಡಲಾರೆ. ಈಗಾಗಲೇ ನೀಡಲಾಗಿರುವ ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಮುಂಬರುವ ಚುನಾವಣೆಯಲ್ಲಿ ಹೆಚ್ಚಿನ ಮತನೀಡಿ ನಂತರ ಉಳಿದ ಕಾಮಗಾರಿಯ ಬಗ್ಗೆ ಚಿಂತನೆ ಮಾಡೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಗ್ರಾಮಸ್ಥ ರಾಮೇಗೌಡ ಮಾತನಾಡಿ, ಚೌತಿ ಗ್ರಾಮಕ್ಕೆ ಗ್ರಾಮ ಪಂಚಾಯಿತಿಕೇಂದ್ರ ಮಂಜೂರಾತಿ ಮಾಡಿ ಸಹಕಾರ ನೀಡಿದ್ದನ್ನು ಗ್ರಾಮದ ಜನರು ನೆನೆಸಿದ್ದೇವೆ. ಮುಂದಿನ ಚುನಾವಣೆಯಲ್ಲಿ ನಾವು ಅದರ ಋಣ ತೀರಿಸುತ್ತೇವೆ. ಚೌತಿ ಗ್ರಾಮಕ್ಕೆ ಪ್ರೌಢಶಾಲೆ, ಪಶುವೈದ್ಯಕೀಯ ಚಿಕಿತ್ಸಾಲಯ ಮತ್ತು ಅಂಬೇಡ್ಕರ್ ಭವನದ ನಿರ್ಮಾಣ ಮಾಡಿಕೊಡುವಂತೆ ಮನವಿ ಮಾಡಿದರು.
ಲಕ್ಷ್ಮೀಪುರ ಗ್ರಾಮದಲ್ಲಿ 75 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ, ಕಿರಂಗೂರು ಗ್ರಾಮದಲ್ಲಿ ವಿವಿಧ ರಸ್ತೆ ಅಭಿವೃದ್ಧಿ ಕಾರ್ಯಕ್ರಮ 20 ಲಕ್ಷ ರೂ. ಅಂದಾಜು ವೆಚ್ಚದಲ್ಲಿ. ನಂದಿನಾಥಪುರ, ಐಲಾಪುರದಲ್ಲಿ ತಲಾ 5 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ. ಕುಂದೇನಹಳ್ಳಿ ಗ್ರಾಮದಲ್ಲಿ 8 ಲಕ್ಷ ರೂ. ವೆಚ್ಚದಲ್ಲಿ ಬಸವೇಶ್ವರ ದೇವಾಲಯ ಅಭಿವೃದ್ದಿ,
ಆಲನಹಳ್ಳಿ ಗ್ರಾಮದಲ್ಲಿ 75 ಲಕ್ಷ ರೂ. ವೆಚ್ಚದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಲೋನಿಗ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ, ನವಿಲೂರು ಗ್ರಾಮದಲ್ಲಿ ಪರಿಶಿಷ್ಟ ಜಾತಿ ಕಾಲೋನಿ ರಸ್ತೆಗಳ ಅಭಿವೃದ್ಧಿ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಅಭಿವೃದ್ಧಿಗೆ ಒಟ್ಟು 53 ಲಕ್ಷ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿದರು.
ಸಮಾರಂಭದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಕೆ.ಆರ್.ನಿರೂಪಾರಾಜೇಶ್, ಗ್ರಾಪಂ ಅಧ್ಯಕ್ಷೆ ಲಲಿತಾಮಲ್ಲೇಶ್, ತಹಶೀಲ್ದಾರ್ ಜೆ.ಮಹೇಶ್, ಇಒ ಕೆ.ಬಸವರಾಜು, ಮುಖಂಡರಾದ ಮಹದೇವ್‌ನಾಯಕ್, ರಾಜು, ಧರ್ಮರಾಜು, ಕುಮಾರ್, ನಾಗಯ್ಯ, ದೇವಯ್ಯ, ಜವರಯ್ಯ, ಚೌತಿಮಲ್ಲಣ್ಣ ಸೇರಿದಂತೆ ಮತ್ತಿತರರು ಹಾಜರಿದ್ದರು.