Advertisement

ಎಲ್ಲರನ್ನೂ ಪ್ರೀತಿಸುವ ಮನೋಭಾವ ಬೆಳೆಸಿಕೊಳ್ಳಿ

01:30 PM Aug 18, 2017 | Team Udayavani |

ಬಳ್ಳಾರಿ: ಶ್ರೀಕೃಷ್ಣನು ಸಾರಿದ ಸೇವೆ, ಸಹಾನುಭೂತಿ, ಎಲ್ಲರನ್ನೂ ಪ್ರೀತಿಸುವ ಮನೋಭಾವ, ಸಹಕರಿಸುವ ಗುಣ ಇವುಗಳನ್ನು ಅಳವಡಿಸಿಕೊಂಡವರೆ ನಿಜವಾದ ಶಿಕ್ಷಣವಂತರ ಲಕ್ಷಣಗಳು ಎಂದು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿ.ಎನ್‌.ಗಿರಿಮಲ್ಲಪ್ಪ ಹೇಳಿದರು.

Advertisement

ಶ್ರೀಕೃಷ್ಣ ಜಯಂತಿ ನಿಮಿತ್ತ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರಪಾಲಿಕೆ ಆಶ್ರಯದಲ್ಲಿ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮ ಪ್ರತಿ ಸಮಾಜದ ಹಿನ್ನೆಲೆಯಲ್ಲಿ ಒಬ್ಬ ಮಹಾ ಪುರುಷನಿದ್ದಾನೆ. ನಮ್ಮ ಸಮಾಜದ ಕುರಿತು ಹೇಳುವಾಗ ನಮಗೆ ಹೆಮ್ಮೆ ಎನಿಸುತ್ತದೆ. ಶ್ರೀಕೃಷ್ಣನನ್ನು ಪಡೆದಿರುವ ಯಾದವರೇ ಧನ್ಯರು. ಶ್ರೀಕೃಷ್ಣನ ಗುಣಗಳನ್ನು ನಮ್ಮೆಲ್ಲರಲ್ಲಿ ಪ್ರೇರೇಪಿಸಲು ಅವನ ಜಯಂತಿ ಆಚರಣೆ ಅವಶ್ಯಕ ಎಂದರು.

ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಕೃಷ್ಣ ಮಾತನಾಡಿ, ಗೊಲ್ಲರ ಸಮುದಾಯದವರು ಹೈದ್ರಾಬಾದ್‌ ಕರ್ನಾಟಕ 371ಜೆ ಮೀಸಲಾತಿ ಸೌಲಭ್ಯ ಪಡೆದುಕೊಂಡು ಸಮಾಜದಲ್ಲಿ ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಮುಂದೆ ಬರಬೇಕೆಂದರು. ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎ.ಮಾನಯ್ಯ ಮಾತನಾಡಿ, ರಾಜ್ಯದಲ್ಲಿ ಆಚರಿಸಲಾಗುವಷ್ಟು ಜಯಂತಿಗಳು  ದೇಶದ ಬೇರೆ ಯಾವ ರಾಜ್ಯಗಳಲ್ಲೂ ಇಲ್ಲ. ನಮ್ಮ ಸಮಾಜಗಳ ಪೂರ್ವಜರನ್ನು ಸ್ಮರಿಸಲು, ಅವರ ನೆನಪಲ್ಲಿ ಸಮಾಜ ಒಂದಾಗಲು ಇಂತಹ ಜಯಂತಿ ಆಚರಣೆಗಳು ಅವಶ್ಯಕ ಎಂದರು.

ಮೇಯರ್‌ ಜಿ.ವೆಂಕಟರಮಣ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಗೊಲ್ಲರ ಸಂಘ ಹಾಗೂ ಹೈಕ ಗೊಲ್ಲ ಸಮಾಜದ ಒಕ್ಕೂಟದ ಅಧ್ಯಕ್ಷ ಪಿ.ಗಾದೆಪ್ಪ, ಬಿ.ಟಿ.ಕುಮಾರಸ್ವಾಮಿ, ನಾಗರಾಜ್‌, ಚಂದ್ರಕಲಾ, ಆಶಾಲತಾ ಇತರರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ
ಸ್ವಾಗತಿಸಿದರು. ಗೊಲ್ಲರ ಸಂಘದ ಮುಖಂಡ ಚಿದಾನಂದಪ್ಪ ಉಪನ್ಯಾಸ ನೀಡಿದರು. ವಸಂತ್‌ಕುಮಾರ್‌, ಕವಿತಾ ದಂಪತಿ ಶ್ರೀಕೃಷ್ಣನ ಕುರಿತು ವಿವಿಧ ದಾಸರು ರಚಿಸಿದ ಕೀರ್ತನೆ ಹಾಡಿದರು.

ಮೆರವಣಿಗೆ: ಶ್ರೀಕೃಷ್ಣ ಜಯಂತಿ ಅಂಗವಾಗಿ ನಗರದ ಮುನ್ಸಿಪಲ್‌ ಕಾಲೇಜು ಮೈದಾನದಿಂದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದವರೆಗೆ ಗುರುವಾರ ನಡೆದ ಮೆರವಣಿಗೆ ಗಮನ ಸೆಳೆಯಿತು. ಮೆರವಣಿಗೆಗೆ ಜಿಲ್ಲಾಧಿಕಾರಿ ಡಾ| ರಾಮ್‌ಪ್ರಸಾತ್‌ ಮನೋಹರ್‌ ಚಾಲನೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next