ಹೊನ್ನಾಳಿ: ಭೂಕಂಪ, ನೆರೆ ಹಾವಳಿ ಸೇರಿದಂತೆ ನೈಸರ್ಗಿಕ ವಿಕೋಪಗಳು ಸಂಭವಿಸಿದ ಸಂದರ್ಭದಲ್ಲಿ ಸೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ನೀಡುವ ನೆರವು ಅವಿಸ್ಮರಣೀಯ. ಅವರ ಸೇವಾ ಮನೋಭಾವ ಅನುಕರಣೀಯ ಹಾಗೂ ಬೆಲೆ ಕಟ್ಟಲಾಗದ್ದು ಎಂದು ಸಾಯಿ ಗುರುಕುಲ ಸಿಬಿಎಸ್‌ಇ ವಸತಿಯುತ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಜಿ. ಮರಿಗೌಡ ಹೇಳಿದರು.
ತಾಲೂಕಿನ ಎಚ್. ಕಡದಕಟ್ಟೆ ಗ್ರಾಮದ ಸಾಯಿ ಗುರುಕುಲ ಸಿಬಿಎಸ್‌ಇ ವಸತಿಯುತ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಗೀತಗಾಯನ ಸ್ಪರ್ಧೆಗೆ ಆಯ್ಕೆಯಾದ ಸಂಸ್ಥೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಪ್ರಮಾಣ ಪತ್ರ-ಸ್ಮರಣಿಕೆ ವಿತರಿಸಿ ಮಾತನಾಡಿದ ಅವರು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ ಕಲಿಸುತ್ತದೆ. ಬಹು ಮುಖ್ಯವಾಗಿ ಸೇವಾ ಮನೋಭಾವವನ್ನು ಮಕ್ಕಳಲ್ಲಿ ಮೂಡಿಸುತ್ತದೆ. ಆದ್ದರಿಂದ, ಎಲ್ಲರೂ ಇದರಲ್ಲಿ ಪಾಲ್ಗೊಳ್ಳಬೇಕು. ಶಿಕ್ಷಕರು ವಿದ್ಯಾರ್ಥಿಗಳಿಗೆ ಸಮರ್ಪಕ ಮಾರ್ಗದರ್ಶನ ನೀಡಬೇಕು ಎಂದರು.
ತಾಲೂಕಿನ ಎಚ್. ಕಡದಕಟ್ಟೆ ಗ್ರಾಮದ ಸಾಯಿ ಗುರುಕುಲ ಸಿಬಿಎಸ್‌ಇ ವಸತಿಯುತ ವಿದ್ಯಾಸಂಸ್ಥೆಯಲ್ಲಿ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ವಿಶೇಷ ಆದ್ಯತೆ ನೀಡಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ವಿದ್ಯಾಸಂಸ್ಥೆ ಹೊನ್ನಾಳಿ ತಾಲೂಕಿನಲ್ಲೇ ಅತಿ ಹೆಚ್ಚಿನ ಮಕ್ಕಳಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಣ ನೀಡುವ ಸಂಸ್ಥೆಯಾಗಿದೆ. ವಿದ್ಯಾರ್ಥಿಗಳನ್ನು ಇದರ ಪ್ರಯೋಜನ ಪಡೆದುಕೊಂಡು ಜೀವನದಲ್ಲಿ ಶಿಸ್ತು, ಶಾಂತಿ, ಸಂಯಮ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
2018-19ರಲ್ಲಿ ಸಂಸ್ಥೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಗೀತಗಾಯನ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು ಎಂಬುದನ್ನು ಸ್ಮರಿಸಿದ ಅವರು, ಪ್ರಸ್ತುತ 2019-20ರಲ್ಲಿ ಈಚೆಗೆ ನ್ಯಾಮತಿಯಲ್ಲಿ ಜರುಗಿದ ತಾಲೂಕು ಮಟ್ಟದ ಗೀತಗಾಯನ ಸ್ಪರ್ಧೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುವುದು ಸಂತಸದ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಈ ಸಾಧನೆಗೆ ಕಾರಣರಾದ ಸಂಸ್ಥೆಯ ಎಲ್ಲಾ ಶಿಕ್ಷಕರನ್ನು ಅಭಿನಂದಿಸುವುದಾಗಿ ತಿಳಿಸಿದರು.
ಸಾಯಿ ಗುರುಕುಲ ಸಿಬಿಎಸ್‌ಇ ವಸತಿಯುತ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಸಿ.ಜಿ. ಸುರೇಂದ್ರ, ಉಪ ಪ್ರಾಂಶುಪಾಲ ಇಸ್ಮಾಯಿಲ್, ಶಿಕ್ಷಣ ಸಂಯೋಜಕ ಹರೀಶ್‌ಕುಮಾರ್, ಸೌಟ್ಸ್ ಮತ್ತು ಗೈಡ್ಸ್ ತರಬೇತುದಾರರಾದ ಚಿದಾನಂದ್, ದೀಪಾ, ಚೈತ್ರಾ, ಎಲ್ಲಾ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.