Advertisement

ಸವಾಲು ಎದುರಿಸೋ ಮನಸ್ಥಿತಿ ಬೆಳೆಸಿಕೊಳ್ಳಿ

01:50 PM Jun 21, 2018 | |

ಚಿಕ್ಕಮಗಳೂರು: ಧೈರ್ಯ, ಆತ್ಮವಿಶ್ವಾಸದ ಜತೆಗೆ ಜವಾಬ್ದಾರಿ ಇದ್ದಲ್ಲಿ ಅಸಾಧ್ಯವಾದದು ಯಾವುದೂ
ಇಲ್ಲ. ಸವಾಲು ಎದುರಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ದಕ್ಷಿಣ ಭಾರತದಿಂದ ಭಾರತೀಯ ವಾಯುಸೇನೆಗೆ ಆಯ್ಕೆಯಾಗಿರುವ ಮೊದಲ ಯುದ್ಧ ವಿಮಾನ ಮಹಿಳಾ ಪೈಲೆಟ್‌ ಕಾಫಿನಾಡಿನ ಮೇಘನಾ ಶ್ಯಾನಭಾಗ್‌ ಹೇಳಿದರು.

Advertisement

ನಗರದ ರಂಗಣ್ಣನವರ ಛತ್ರದಲ್ಲಿ ಬ್ರಾಹ್ಮಣ ಮಹಾಸಭೆ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ
ಅವರು ಮಾತನಾಡಿದರು. ನಾನು ಮನೆಗಿಂತ ವಿದ್ಯಾರ್ಥಿ ನಿಲಯ, ಪಿಜಿಯಲ್ಲೇ ಓದಿದ್ದೇ ಹೆಚ್ಚು. ಓದಿಗೆ ಸೀಮಿತ ಅವಧಿ ನೀಡಿ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ. ಮಗಳು ಓದಿನಲ್ಲಿ ಹಿಂದೆ ಬೀಳುತ್ತಾಳೆ ಎಂಬ ಆತಂಕ ಎಲ್ಲ ಪೋಷಕರಂತೆ ನಮ್ಮವರಿಗೂ ಇತ್ತು. ಆದರೆ, ಬರಿ ಅಂಕಗಳಿಸುವ ಓದಿಗಾಗಿ ಇಡೀ ಸಮಯ ವ್ಯರ್ಥ ಮಾಡಬೇಕಾ ಎಂದು ನನ್ನಲ್ಲಿ ನಾನೇ ಪ್ರಶ್ನೆ ಹಾಕಿಕೊಳ್ಳುತ್ತಿದ್ದೆ.

ಆಗ ನನಗೆ ಹೊಳೆದದ್ದೇ ಸಾಹಸ ಚಟುವಟಿಕೆಗಳಾದ ಗ್ಲೈಡಿಂಗ್‌, ಟ್ರಕ್ಕಿಂಗ್‌, ಮೌಂಟನೇರಿಂಗ್‌ ಮತ್ತಿತರೆ ಕ್ರಿಯಾತ್ಮಕ ಚಟುವಟಿಕೆಗಳು. ಅವುಗಳತ್ತ ನನ್ನ ಗಮನ ಹರಿಸಿದೆ. ಇದರ ಜತೆಗೆ ಜವಾಬ್ದಾರಿ ಎಂಬುದು ನನ್ನಲ್ಲಿ ಆಳವಾದ ಆಲೋಚನೆಗೆ ದೂಡಿತು ಎಂದರು.

ಕಾಲೇಜಿನಲ್ಲಿದ್ದಾಗ ನಾನೇನು ಹೆಚ್ಚು ಓದುತ್ತಿರಲಿಲ್ಲ. ಆದರೂ ನಾನು ಪ್ರಥಮ ದರ್ಜೆಯಲ್ಲಿ ಪಾಸಾಗಿರುತ್ತಿದ್ದೆ. ಇದು
ನನ್ನ ಹೆತ್ತವರಿಗೆ ಸಮಾಧಾನ ತರುತ್ತಿತ್ತು. ಪರೀಕ್ಷೆ ಪಾಸು ಮಾಡಲು ನನಗೆ 3 ತಿಂಗಳು ಸಾಕಿತ್ತು. ಸುಮ್ಮನೆ 8 ತಿಂಗಳು ವ್ಯಯ ಮಾಡುತ್ತಿದ್ದೇನೆ ಎನ್ನಿಸುತ್ತಿತ್ತು.ಇತರೆ ಪಠ್ಯೇತರ ಚಟುವಟಿಕೆಗೆ ಆದ್ಯತೆ ನೀಡುತ್ತಿಲ್ಲವಲ್ಲ ಎಂಬ ಚಿಂತೆ ನನ್ನನ್ನು ಕಾಡುತ್ತಿತ್ತು. ನಾನು ಏನೇ ಮಾಡಿದರೂ ಅದು ನನಗೆ ಖುಷಿ ಕೊಡಬೇಕಿತ್ತು ಎಂದರು.

ಕಾಲೇಜು ಪ್ರಥಮ ವರ್ಷದಲ್ಲಿ ನಮ್ಮ ಕಾಲೇಜ್‌ಲ್ಲಿ ಸಾಕಷ್ಟು ಕ್ಲಬ್‌ ಗಳಿದ್ದವು. ಅದರ ಮೂಲಕ 26 ದಿನ ಹಿಮಾಲಯ ಹತ್ತಿ ಇಳಿಯುವ ತರಬೇತಿ ನನಗೆ ಅದ್ಬುತ ಅನುಭವ ನೀಡಿತು. ಅದಾದ ನಂತರ ಕಾಲೇಜಿನಲ್ಲಿ ನಾವೇ ಏಕೆ ಒಂದು ಅಡ್ವೆಂಚರ್‌ ಕ್ಲಬ್‌ ಸ್ಥಾಪಿಸಬಾರದು ಎಂಬ ಆಲೋಚನೆ ಹಾಕಿದಾಗ ಹುಟ್ಟಿದ್ದೇ ಸಾಹಸ್‌ ಅಡ್ವೆಂಚರ್‌ ಕ್ಲಬ್‌.

Advertisement

ಇದರ ಮೂಲಕ ಸಾಕಷ್ಟು ವಿದ್ಯಾರ್ಥಿಗಳು ಹಿಮಾಲಯ ಹತ್ತುವಂತಾಯಿತು. ಕಾಲೇಜಿನ ಬಳಿಕ ಅಪ್ಪನ ಆಸೆಯಂತೆ ಐಎಎಸ್‌ ಮಾಡಲು ದೆಹಲಿಗೆ ತೆರಳಿದೆ. ಅಲ್ಲಿ ಐಎಎಸ್‌ ಪೂರ್ವಭಾವಿ ಪರೀಕ್ಷೆಗೆ ಮುನ್ನವೇ ಆಫ್‌ಕ್ಯಾಟ್‌ (ಎಫ್‌ಸಿಎಟಿ) ಪರೀಕ್ಷೆ ಬರೆದಿದ್ದೆ. ಈ ವಿಚಾರ ಮನೆಯಲ್ಲಿ ಹೇಳಿರಲಿಲ್ಲ. ನಂತರ ಅಪ್ಪ, ಅಮ್ಮನಿಗೆ ಹೇಳುವುದು ಎಂದು ತೀರ್ಮಾನಿಸಿದ್ದೆ ಅದು ಪಾಸಾಯಿತು. ಆಗ ಅವರಿಗಾದ ಸಂತೋಷಕ್ಕೆ ಪಾರವೆ ಇರಲಿಲ್ಲ ಎಂದರು. ನಂತರ ಎಸ್‌ಎಸ್‌ಬಿ, ಮೆಡಿಕಲ್‌ ನಿಂದಲೂ ಆಯ್ಕೆಯಾದೆ ಎಂದು ಸಂತಸ ವ್ಯಕ್ತಪಡಿಸಿದ ಅವರು, ಧೈರ್ಯ, ಆತ್ಮವಿಶ್ವಾಸ ಹಾಗೂ ಸವಾಲನ್ನು ಎದುರಿಸುವ ಮನಸ್ಥಿತಿ ಬೆಳೆಸಿಕೊಂಡಲ್ಲಿ ಯಾವ ಸಾಧನೆಯೂ ಕಷ್ಟಸಾಧ್ಯವೇನಲ್ಲ ಎಂದು ಹೇಳಿದರು.

ಹಿರಿಯ ಪತ್ರಕರ್ತ ಸ. ಗಿರಿಜಾಶಂಕರ ಮಾತನಾಡಿ, ನಮ್ಮಲ್ಲಿ ಸಾತ್ವಿಕವಾಗಿ ನಡೆದುಕೊಳ್ಳುವವರು ಬಹಳ ಜನ ಇದ್ದಾರೆ. ಆದರೆ ಧೈರ್ಯವಾಗಿ ಮುನ್ನೆಡೆಯುವವರು ತುಂಬಾ ಕಡಿಮೆ. ಇಂತಹ ಧೈರ್ಯ ಯುದ್ಧ ಪೈಲೆಟ್‌ ಆಗಿರುವ ಮೇಘನಾ ಅವರಿಗೆ ಬಂದಿದೆ ಎಂದರು.

ಮೇಘನಾ ತಂದೆ ಎಂ.ಕೆ. ರಮೇಶ್‌ ಮಾತನಾಡಿದರು. ಹಿರಿಯ ವಕೀಲ ದತ್ತಾತ್ರಿ ದಂಪತಿ, ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮಂಜುನಾಥ ಜೋಶಿ, ಕಾರ್ಯದರ್ಶಿ ಅಶ್ವಿ‌ನ್‌, ಮೋಹನ್‌ ಮತ್ತಿತರೆ ಸಮಾಜದ ಗಣ್ಯರು ಮೇಘನಾ ಅವರನ್ನು ಸನ್ಮಾನಿಸಿದರು. ಬ್ರಾಹ್ಮಣ ಮಹಾಸಭಾದ ನಿರ್ದೇಶಕರಾದ ಎನ್‌. ಮೂರ್ತಿ, ಪ್ರಕಾಶ್‌ ಮತ್ತಿತರರು ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next