ಮರಿಯಮ್ಮನಹಳ್ಳಿ: ಮಕ್ಕಳು ಬಾಲ್ಯದಿಂದಲೇ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಶಿಕ್ಷಣದಿಂದ ವಂಚಿತರಾಗದೇ ಉತ್ತಮ ಪ್ರಜೆಗಳಾಗಿ ಬಾಳಿರಿ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಮಂಜಮ್ಮ ಜೋಗತಿ ಹೇಳಿದರು.
ಅವರು ಪಟ್ಟಣದ ಶ್ರೀ ಲಕ್ಷ್ಮಿನಾರಯಾಣ ಸ್ವಾಮಿ ಮತ್ತು ಆಂಜನೇಯಸ್ವಾಮಿ ದೇವಸ್ಥಾನದ ಯಾತ್ರೀ ನಿವಾಸದಲ್ಲಿ ಕೂಡ್ಲಿಗಿ ಸ್ನೇಹ ಸಂಸ್ಥೆಯಿಂದ ನಡೆದ ಕಿಶೋರಿಯರ ಮುಂದಾಳತ್ವದಲ್ಲಿ ಸಂಶೋಧನಾ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೆಚ್ಚು ಮೊಬೈಲ್ ಗೀಳಿಗೆ ಒಳಗಾಗದೇ ಶಿಕ್ಷಣಕ್ಕೆ ಜ್ಞಾನಾರ್ಜನೆ ಅಗತ್ಯಕ್ಕೆ ಅನುಗುಣವಾಗಿ ಬಳಸಿ ಅನಗತ್ಯವಾಗಿ ಮೊಬೈಲ್ ದಾಸರಾಗಬೇಡಿ ಕಲೆ ಸಾಂಸ್ಕೃತಿಕ ಹವ್ಯಾಸಗಳನ್ನು ಮೈಗೂಡಿಸಿಕೊಂಡು ಬೆಳೆಯಿರಿ ಎಂದರು.
ಪತ್ರಕರ್ತ, ಉಪನ್ಯಾಸಕ ಸೋಮೇಶ್ ಉಪ್ಪಾರ ಕಾರ್ಯಾಗಾರ ಉದ್ಘಾಟಿಸಿ, ಪ್ರತಿಯೊಂದು ಮಗುವೂ ಸಂಶೋಧನಾ ಗುಣ ಹೊಂದಿರುತ್ತದೆ. ಬಾಲ್ಯದಿಂದಲೇ ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾ ಉತ್ತರ ಕಂಡುಕೊಳ್ಳುತ್ತಾ ಬೆಳೆಯುತ್ತದೆ. ಸ್ನೇಹ ಸಂಸ್ಥೆ ಗ್ರಾಮೀಣ ಭಾಗದ ಕಿಶೋರಿಯರಿಗೆ ಇಂತಹ ತರಬೇತಿ ಹಮ್ಮಿಕೊಂಡಿರುವುದು ಶ್ಲಾಘನೀಯ. ಕಿಶೋರಿಯರು ಇಂತಹ ತರಬೇತಿಯ ಸದುಪಯೋಗ ಪಡೆದು ಉತ್ತಮ ನಾಗರೀಕರಾಗಿ ಬೆಳೆಯಿರಿ ಎಂದರು.
ಗ್ರಾಮೀಣ ಭಾಗದಲ್ಲಿ ಬಾಲ್ಯವಿವಾಹ, ಬಾಲಕಾರ್ಮಿಕ, ದೇವದಾಸಿ ಪದ್ಧತಿಗಳ ನಿರ್ಮೂಲನೆಗೆ ಬದ್ಧರಾಗಿ ನಾವೆಲ್ಲರೂ ಒಗ್ಗೂಡಿ ಶ್ರಮಿಸಬೇಕಾಗಿದೆ. ಗ್ರಾಮೀಣ ಭಾಗದಲ್ಲಿ ಯಾವ ಮಕ್ಕಳೂ ಶಿಕ್ಷಣದಿಂದ ವಂಚಿತರಾಗಬಾರದು ಎಂದರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಮಂಜಮ್ಮ ಜೋಗತಿ ಮಾತನಾಡಿ ಮಕ್ಕಳು ಬಾಲ್ಯದಿಂದಲೇ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಶಿಕ್ಷಣದಿಂದ ವಂಚಿತರಾಗದೇ ಉತ್ತಮ ಪ್ರಜೆಗಳಾಗಿ ಬಾಳಿರಿ ಎಂದರು.
ಸ್ನೇಹ ಸಂಸ್ಥೆ ಸಂಚಾಲಕಿ ಸರೋಜಾ ಹವಳದ್ ಅವರು ಪ್ರಾಸ್ತಾವಿಕ ಮಾತನಾಡಿ ಗುಡ್ ಯೋಜನೆ ಅಡಿಯಲ್ಲಿ ಈ ಕಿಶೋರಿಯರ ಮುಂದಾಳತ್ವದಲ್ಲಿ ಸಂಶೋಧನಾ ತರಬೇತಿ ಕಾರ್ಯಾಗಾರ ನಡೆಸುತ್ತಿದ್ದೇವೆ. ಇಲ್ಲಿ ಕಿಶೋರಿಯರೇ ಸಂಶೋಧನಾ ಗುಣಗಳನ್ನು ಬೆಳೆಸಿಕೊಂಡು ಫೋಟೋಗ್ರಾಫಿ, ವೀಡಿಯೋಗ್ರಾಫಿ ಮುಂತಾದ ಮಾಧ್ಯಮ ಸಲಕರಣೆಗಳ ಮೂಲಕ ಗ್ರಾಮೀಣ ಭಾಗದ ವಿಷಯಗಳಾಗಿ ದಾಖಲೀಕರಣ ಮಾಡುವುದು ದೇವದಾಸಿ ಪದ್ಧತಿ, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿಗಳ ತಡೆಗಟ್ಟುವ ನಿಟ್ಟಿನಲ್ಲಿ ಕಿಶೋರಿಯರ ಗುಂಪುಗಳಿಗೆ ತರಬೇತಿ ನೀಡಲಾಗುವುದು ಎಂದರು.
ಚೈಲ್ಡ್‌ಲೈನ್ ಸಬ್ ಸೆಂಟರ್‌ನ ಬಸಂತಿ ಅವರು, ಆಶಾ ಕಾರ್ಯಕರ್ತೆ ಶ್ವೇತಾ ತಿಮ್ಮಲಾಪುರ, ನಾಗಲಾಪುರ ಅಂಗನವಾಡಿ ಶಿಕ್ಷಕಿ ಶಾಂಭವಿ, ಅರ್ಚಕ ಭೀಮಣ್ಣ ಮುಂತಾದವರು ಪಾಲ್ಗೊಂಡಿದ್ದರು.