Advertisement

3000 ಕೋಟಿಯಲ್ಲಿ 20 ಪ್ರವಾಸಿ ತಾಣ ಅಭಿವೃದ್ಧಿ

03:47 PM Jun 28, 2018 | Team Udayavani |

ಬೆಂಗಳೂರು: ರಾಜ್ಯದ 20 ಪ್ರಮುಖ ಪ್ರವಾಸಿ ತಾಣಗಳನ್ನು ಸುಮಾರು 3000 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ. ಮಹೇಶ್‌ ಹೇಳಿದರು.

Advertisement

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ) ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 2018ನೇ ಸಾಲಿನ ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದ ಅವರು, ಪ್ರವಾಸಿ ತಾಣಗಳ ಅಭಿವೃದ್ಧಿಗೆ ಅಗತ್ಯ ಅನುದಾನ ಒದಗಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಮೈಸೂರಿನ ಲಲಿತ ಮಹಲ್‌ ಪ್ಯಾಲೇಸ್‌ ಕಟ್ಟಡವನ್ನು ಈಗಾಗಲೇ ರಾಜ್ಯ ಸರ್ಕಾರದ ವಶಕ್ಕೆ ಪಡೆಯಲಾಗಿದೆ. ಊಟಿಯಲ್ಲಿರುವ ಸುಮಾರು 17 ಎಕರೆ ಜಾಗವನ್ನು ವಾರದೊಳಗೆ ಸರ್ಕಾರದ ವಶಕ್ಕೆ ಪಡೆದು ನಂತರ ಅಭಿವೃದ್ಧಿಪಡಿಸಲಾಗುವುದು. ಎಫ್ಕೆಸಿಸಿಐ ಆಸಕ್ತಿ ತೋರಿದರೆ ಪ್ರವಾಸಿತಾಣವೊಂದನ್ನು ಅಭಿವೃದ್ಧಿಪಡಿಸಲು ಅವಕಾಶ
ನೀಡಲಾಗುವುದು ಎಂದು ಹೇಳಿದರು.

ಹತ್ತು ವರ್ಷಗಳಿಂದ “ಸುವರ್ಣ ರಥ’ ರೈಲು ಸೇವೆಯಿಂದ ಸುಮಾರು 40 ಕೋಟಿ ರೂ.ನಷ್ಟ ಉಂಟಾಗಿದೆ. ಕಳೆದ ವರ್ಷವಷ್ಟೇ ಅಲ್ಪ ಪ್ರಮಾಣದ ಆದಾಯ ಬಂದಿದೆ. “ಸುವರ್ಣ ರಥ’ ಸೇವೆಯ ನಷ್ಟ ತಡೆಗಟ್ಟುವ ಜತೆಗೆ ಅದನ್ನು ಆದಾಯ ಹಳಿಗೆ ತರಲು ಸರ್ವ ಪ್ರಯತ್ನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಯೋಗಕ್ಕೆ ಈಗ ವಿಶ್ವದ ಮಾನ್ಯತೆ ಸಿಕ್ಕಿದ್ದರೂ ಒಂದೊಂದು ಸಂಸ್ಥೆ ಒಂದೊಂದು ರೀತಿಯ ಯೋಗ ಕಲಿಸುತ್ತಿವೆ. ಹಾಗಾಗಿ ಪ್ರವಾಸೋದ್ಯಮ ಇಲಾಖೆಯಿಂದ ಮೈಸೂರು, ಬಾದಾಮಿಯಲ್ಲಿ ಯೋಗ ಕೇಂದ್ರಗಳನ್ನು ಆರಂಭಿಸಿ, ಹೊರ
ರಾಜ್ಯ, ಹೊರ ದೇಶಗಳ ಪ್ರವಾಸಿಗರಿಗೆ ಯೋಗತಜ್ಞರಿಂದ ನಿಯಮಬದ್ಧವಾಗಿ ಯೋಗ ತರಬೇತಿ ಕೊಡಿಸಲು ಚಿಂತಿಸಲಾಗಿದೆ. ಒಂದೂವರೆಯಿಂದ 2 ತಿಂಗಳ ಕಾಲ ಯೋಗ ತರಬೇತಿ ವ್ಯವಸ್ಥೆ ಕಲ್ಪಿಸುವ ಚಿಂತನೆ ಇದೆ ಎಂದು ತಿಳಿಸಿದರು.

Advertisement

ದೇಶದ ಅತಿ ಹೆಚ್ಚು ನೈಸರ್ಗಿಕ ಪ್ರವಾಸಿ ತಾಣಗಳು ಕರ್ನಾಟಕದಲ್ಲಿದ್ದು, ನಾನಾ ಕಾರಣಗಳಿಂದ ಅವು ಸರಿಯಾಗಿ ಅಭಿವೃದ್ಧಿಯಾಗಿಲ್ಲ. ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ಬೇಲೂರು, ಹಳೇಬೀಡು ದೇವಾಲಯಗಳ ಕೊಳಗಳಲ್ಲಿ ಪಾಚಿ ತುಂಬಿವೆ. ಪುರಾತತ್ವ ಇಲಾಖೆಯು ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಗೆ ಬಂದಿರುವುದರಿಂದ ಪುರಾತನ ದೇವಾಲಯಗಳು, ಕಟ್ಟಡಗಳನ್ನು ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರ ದೊಂದಿಗೆ ಪುನರುಜ್ಜೀವನಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಚಾಲಕರಿಗೆ ತರಬೇತಿ: ಪ್ರವಾಸಿಗರನ್ನು ಕರೆದೊಯ್ಯುವ ವಾಹನ ಚಾಲಕರ ವರ್ತನೆ ಬಗ್ಗೆ ಆಕ್ಷೇಪಿಸಿ ಆಗಾಗ್ಗೆ ದೂರುಗಳು ಕೇಳಿ ಬರುತ್ತಿವೆ. ಇದು ಪ್ರವಾಸೋದ್ಯಮ ಚಟುವಟಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ ಇಲಾಖೆ ವತಿಯಿಂದಲೇ ಚಾಲಕರಿಗೆ ತರಬೇತಿ ನೀಡಲಾಗುವುದು. ಪ್ರವಾಸಿಗರೊಂದಿಗೆ ನಡೆದು ಕೊಳ್ಳಬೇಕಾದ ರೀತಿ, ವರ್ತನೆ, ಸ್ಪಂದನೆ, ಸುರಕ್ಷತೆ ಇತರೆ ವಿಷಯಗಳ ಬಗ್ಗೆ ತರಬೇತಿ ಕೊಡಲಾಗುವುದು ಎಂದು ತಿಳಿಸಿದರು.

ಎಫ್ಕೆಸಿಸಿಐ ಅಧ್ಯಕ್ಷ ಕೆ.ರವಿ ಮಾತನಾಡಿ, ಆರ್ಥಿಕಾಭಿವೃದ್ಧಿ ಜತೆಗೆ ಉದ್ಯೋಗ ಸೃಷ್ಟಿಯು ಪ್ರವಾಸೋದ್ಯಮದಲ್ಲಿ ಮಹತ್ತರ ಪಾತ್ರವಹಿಸುತ್ತದೆ. ರಾಜ್ಯದ ಪ್ರವಾಸಿ ತಾಣಗಳನ್ನು ಕೇರಳ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಅಗತ್ಯ ನೆರವು ನೀಡಲಾಗುವುದು ಎಂದು ಹೇಳಿದರು. ಎಫ್ಕೆಸಿಸಿಐ ಪದಾಧಿಕಾರಿಗಳಾದ ಸುಧಾಕರ್‌ ಎಸ್‌. ಶೆಟ್ಟಿ, ಸಿ.ಆರ್‌.ಜನಾರ್ದನ್‌, ಪ್ರಕಾಶ್‌ ಮಂಡೋತ್‌ ಇತರರು ಉಪಸ್ಥಿತರಿದ್ದರು.

ಪ್ರಶಸ್ತಿ ವಿವರ
ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸರ್ಕಾರಿ ಸಂಸ್ಥೆಗಳ ವಿಭಾಗದಲ್ಲಿ ಹುಬ್ಬಳ್ಳಿಯ ನೈರುತ್ಯ ರೈಲ್ವೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಜವಾಹರ ಲಾಲ್‌ ನೆಹರು ತಾರಾಲಯ ಪ್ರಶಸ್ತಿಗೆ ಭಾಜನವಾಗಿವೆ.

ಇತರೆ ಪ್ರಶಸ್ತಿ- ಸಂಸ್ಥೆ ವಿವರ: ಅತ್ಯುತ್ತಮ ಹೋಟೆಲ್‌ (ಎಕಾನಮಿ)- ಬೆಂಗಳೂರಿನ ಕ್ಯಾಸ್ಪಿಯಾ ಪ್ರೊ ಹೋಟೆಲ್‌; ಅತ್ಯುತ್ತಮ ಹೋಟೆಲ್‌ (ಮಿಡ್‌ ಸೆಗ್ಮೆಂಟ್‌)- ಹಂಪಿಯ ಹಯಾತ್‌ ಹೋಟೆಲ್‌; ಅತ್ಯುತ್ತಮ ಹೋಟೆಲ್‌ (
ಲಕ್ಷುರಿ)- ಬೆಂಗಳೂರಿನ ಶೆರಟಾನ್‌ ಗ್ರ್ಯಾಂಡ್‌ ಹೋಟೆಲ್‌; ಅತ್ಯುತ್ತಮ ಹೋಮ್‌ ಸ್ಟೇ- ಕೊಡಗಿನ ಸಿಲ್ವರ್‌ ಬ್ರೂಕ್‌
ಎಸ್ಟೇಟ್‌; ಅತ್ಯುತ್ತಮ ಹೆರಿಟೇಜ್‌ ಹೋಟೆಲ್‌- ರಾಯಲ್‌ ಆರ್ಕಿಡ್‌ ಮೆಟ್ರೋಪೋಲ್‌.

ಅತ್ಯುತ್ತಮ ಇಕೋ ಫ್ರೆಂಡ್ಲಿ ಹೋಟೆಲ್‌- ಕೊಡಗಿನ ಆರೆಂಜ್‌ ಕೌಂಟಿ ರೆಸಾರ್ಟ್ಸ್ ಆ್ಯಂಡ್‌ ಹೋಟೆಲ್ಸ್‌ ಲಿಮಿಟೆಡ್‌ (ಎವಾಲ್‌Ì ಬ್ಲಾಕ್‌); ಅತ್ಯುತ್ತಮ ವೈಲ್ಡ್‌ಲೈಫ್ ರೆಸಾರ್ಟ್‌- ಕಬಿನಿಯ ಆರೆಂಜ್‌ ಕೌಂಟಿ ರೆಸಾರ್ಟ್ಸ್ ಆ್ಯಂಡ್‌ ಹೋಟೆಲ್ಸ್‌ ಲಿಮಿಟೆಡ್‌  ಎವಾಲ್ವ್ ಬ್ಲಾಕ್‌); ಅತ್ಯುತ್ತಮ ಆಯುರ್ವೇದ ರೆಸಾರ್ಟ್‌- ಬೆಂಗಳೂರಿನ ಆಯುರ್ವೇದ ಗ್ರಾಮ್‌; ಅತ್ಯುತ್ತಮ ಇನ್‌ಬೌಂಡ್‌ ಟೂರ್‌ ಆಪರೇಟರ್‌ ಪ್ರಶಸ್ತಿ- ಮೈಸೂರಿನ ಸ್ಕೈವೇ ಇಂಟರ್‌ ನ್ಯಾಷನಲ್‌ ಟ್ರಾವೆಲ್ಸ್‌; ಅತ್ಯುತ್ತಮ ಡೊಮೆಸ್ಟಿಕ್‌ ಟೂರ್‌ ಪ್ರಶಸ್ತಿ- ಬೆಂಗಳೂರಿನ ದಿ ಅಬ್‌ಸೊಲ್ಯೂಟ್‌ ಜರ್ನೀಸ್‌; ಅತ್ಯುತ್ತಮ ಟೂರಿಸಂ ಇನ್‌ಸ್ಟಿಟ್ಯೂಟ್‌- ಸೇಂಟ್‌ ಜೋಸೆಫ್ಸ ಕಾಲೇಜ್‌ ಆಫ್ ಕಾಮರ್ಸ್‌; ಅತ್ಯುತ್ತಮ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಪ್ರಶಸ್ತಿ- ಬೆಂಗಳೂರು ಇನ್‌ಸ್ಟಿಟ್ಯೂಟ್‌ ಆಫ್ ಹೋಟೆಲ್‌ ಮ್ಯಾನೇಜ್‌ಮೆಂಟ್‌; ಅತ್ಯುತ್ತಮ ಟೂರಿಸ್ಟ್‌ ಗೈಡ್‌- ಮೈಸೂರಿನ ಕೆ.ಬಿ. ಸೋಮಶೇಖರ್‌.

ಕೊಡಗು ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ಹೋಮ್‌ ಸ್ಟೇಗಳಿವೆ ಎನ್ನಲಾಗಿದೆ. ಆದರೆ ಅಧಿಕೃತವಾಗಿ 35ರಿಂದ 40 ಹೋಮ್‌ ಸ್ಟೇಗಳಷ್ಟೇ ನೋಂದಣಿ ಯಾಗಿವೆ. ವಾರಾಂತ್ಯದಲ್ಲಿ ಸಾವಿರಾರು ಮಂದಿ ಹೋಮ್‌ ಸ್ಟೇಗಳಲ್ಲಿ ವಾಸ್ತವ್ಯ ಹೂಡುತ್ತಿದ್ದು, ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಜತೆಗೆ ಮಾಲಿನ್ಯವೂ ಉಂಟಾಗುತ್ತಿದೆ. ಹೋಮ್‌ ಸ್ಟೇಗಳಿಗೆ ಪರವಾನಗಿ ಕಡ್ಡಾಯಗೊಳಿಸಲಾಗುವುದು. 
ಸಾ.ರಾ. ಮಹೇಶ್‌, ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next