ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿಯವರಿಗೆ ಚುನಾವಣೆ ವೇಳೆಯಲ್ಲಿ ಬಿಟ್ಟರೆ ಬೇರೆ ಸಮಯದಲ್ಲಿ ನಮ್ಮ ರಾಜ್ಯ ನೆನಪಾಗುವುದೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಗುರುವಾರ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಬಾಗೇಪಲ್ಲಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿ, ಮೋದಿ ಪ್ರವಾಹ ಬಂದಾಗಲೂ ಈ ಕಡೆ ತಲೆ ಹಾಕಲಿಲ್ಲ, ಬರಗಾಲ ಬಂದಾಗಲೂ ಬರಲಿಲ್ಲ ಎಂದು ಕಿಡಿಕಾರಿದರು.
ಚುನಾವಣೆ ವೇಳೆ ಭ್ರಷ್ಟರನ್ನು ಗೆಲ್ಲಿಸಲು ರಾಜ್ಯಕ್ಕೆ ಮೇಲಿಂದ ಬರುತ್ತಾರೆ ಅಂದರೆ ಅದು ರಾಜ್ಯದ ಜನತೆಗೆ ಮಾಡುವ ಅವಮಾನ ಅಲ್ಲವೇ ಎಂದು ಪ್ರಶ್ನಿಸಿದರು. ಪ್ರಧಾನಿ ಮೋದಿಯವರು ಹತ್ತು ವರ್ಷದಲ್ಲಿ ಕೊಟ್ಟ ಒಂದೂ ಆಶ್ವಾಸನೆಯನ್ನೂ ಈಡೇರಿಸದೆ ಭಾರತೀಯರ ನಂಬಿಕೆಗಳಿಗೆ ದ್ರೋಹ ಬಗೆದಿದ್ದಾರೆ ಎಂದರು.
ಕೊಟ್ಟ ಮಾತು ಈಡೇರಿಸದ ಬಿಜೆಪಿಗೆ ಮತ್ತು ಇವರ ಜತೆ ಸೇರಿರುವ ಜೆಡಿಎಸ್ ಗೆ ನಿಮ್ಮ ಮತ ಕೇಳುವ ನೈತಿಕತೆ ಇಲ್ಲ. ಮೋದಿ ಪ್ರಧಾನಿ ಆದರೆ ದೇಶ ಬಿಟ್ಟು ಹೋಗ್ತೀನಿ ಅಂದಿದ್ದ ದೇವೇಗೌಡರು ಈಗ ಅದೇ ಮೋದಿಯವರನ್ನು ಅಪ್ಪಿಕೊಂಡಿದ್ದಾರೆ. ಚುನಾವಣೆ ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರ ಪತನ ಆಗುತ್ತದೆ ಎನ್ನುವುದು ಎನ್ಮುವುದು ಬರೀ ದೇವೇಗೌಡರ ಭ್ರಮೆ. ಐದೂ ವರ್ಷ ನಮ್ಮ ಸರ್ಕಾರ ಸುಭದ್ರವಾಗಿದ್ದು ಮತ್ತೆ ನಾವೇ ಗೆದ್ದು ಬರುತ್ತೇವೆಂದರು.
ಭಾರತೀಯರಿಗೆ ಭ್ರಮೆ ಹುಟ್ಟಿಸಿ ವಂಚಿಸಿದ ಮೋದಿಯವರನ್ನು ಈ ಬಾರಿ ದೇಶ ತಿರಸ್ಕರಿಸಲಿದೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಹೊಸ ಗ್ಯಾರಂಟಿಗಳು ಜಾರಿಯಾಗಲಿವೆ ಎಂದರು.
ಈ ವೇಳೆ ಸಚಿವರಾದ ಡಾ.ಎಂ.ಸಿ.ಸುಧಾಕರ್, ವಿಧಾನ ಪರಿಷತ್ತು ಸದಸ್ಯರಾದ ಎಂ.ಆರ್.ಸೀತಾರಾಮ್, ಶಾಸಕರಾದ ಎಸ್.ಎನ್.ಸುಬ್ಬಾರೆಡ್ಡಿ, ಪ್ರದೀಪ್ ಈಶ್ವರ್, ಮಾಜಿ ಶಾಸಕ ಎನ್.ಸಂಪಂಗಿ, ವಿಧಾನ ಪರಿಷತ್ತು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಸೇರಿದಂತೆ ಮತ್ತಿತರರು ಇದ್ದರು.