ಗುಂಡ್ಲುಪೇಟೆ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬದ ಸದಸ್ಯರು ತಮ್ಮ ಕುಟುಂಬದ ಔನ್ನತ್ಯಕ್ಕಾಗಿ ಮಾತ್ರ ರಾಜಕಾರಣ ಮಾಡುತ್ತಿದ್ದಾರೆಯೇ ಹೊರತು ರೈತರ ಮೇಲಿನ ಕಾಳಜಿಯಿಂದಲ್ಲ ಎಂದು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ತೀವ್ರ ವಾಗ್ಧಾಳಿ ನಡೆಸಿದರು.
ಪಟ್ಟಣದ ಊಟಿ ರಸ್ತೆಯಲ್ಲಿರುವ ಅಂಬೇಡ್ಕರ್ ಭವನದಲ್ಲಿ ನಡೆದ ಯುವ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ಈಗ ಹಾಸನ, ಮಂಡ್ಯದಲ್ಲಿ ಯಾವ ಮೊಮ್ಮಗನನ್ನು ನಿಲ್ಲಿಸಬೇಕು ಎಂಬ ಯೋಚನೆಯಲ್ಲಿರುವ ದೇವೇಗೌಡರು, ಚುನಾವಣಾ ಆಯೋಗದ ನಿಯಮವಿಲ್ಲದಿದ್ದರೆ ತಮ್ಮ ಮರಿ ಮಕ್ಕಳನ್ನು ಕೂಡಾ ಚುನಾವಣೆಗೆ ನಿಲ್ಲಿಸುತ್ತಿದ್ದರು ಎಂದು ಟೀಕಿಸಿದರು.
ದೇಶಭಕ್ತ ಪ್ರಧಾನಿ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಬೇಕು ಎಂಬ ಕನಸು ದೇಶದೆಲ್ಲೆಡೆ ಇದೆ. ಆದರೆ ಮೋದಿ ಅವರನ್ನು ಹೊರತುಪಡಿಸಿ ಮಾಯಾವತಿ, ಮಮತಾ ಬ್ಯಾನರ್ಜಿ ಪ್ರಧಾನಿ ಆಗಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಆಧ್ಯಾತ್ಮಕ್ಕಾಗಿ ಹೆಸರು ಪಡೆದ ಈ ದೇಶದ ಮಣ್ಣಿನ ಗುಣ, ಇತಿಹಾಸ, ಸಂಸ್ಕೃತಿಯ ಅರಿವೇ ಇಲ್ಲದ ರಾಹುಲ್ ಗಾಂಧಿ ಈ ದೇಶದ ಪ್ರಧಾನಿ ಆಗುವುದು ಸರೀನಾ? ಅಥವಾ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕಪ್ಪು ಚುಕ್ಕೆ ಇಲ್ಲದೇ ಅಧಿಕಾರ ನಡೆಸಿದ ಮೋದಿ ಪ್ರಧಾನಿ ಆಗುವುದು ಸರಿಯೇ ಎಂದು ಸಭಿಕರನ್ನು ಪ್ರಶ್ನಿಸಿದರು.
ಸಾಲ ಮನ್ನಾಕ್ಕೆ ಬಿಎಸ್‌ವೈ ಕಾರಣ: ರಾಜ್ಯದ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಹೇಳಿಕೊಂಡು ರಾಜ್ಯ ಸುತ್ತುತ್ತಿದ್ದ ಸಿಎಂ ಕುಮಾರಸ್ವಾಮಿಗೆ ಮನ್ನಾ ಮಾಡದಿದ್ದರೆ ಓಡಾಡಲು ಬಿಡಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಗಟ್ಟಿಧ್ವನಿಯಲ್ಲಿ ಹೇಳಿದ್ದರಿಂದಲೇ ಸರ್ಕಾರ ರೈತರ ಸಾಲಮನ್ನಾ ಮಾಡಿತು ಎಂದು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಅವರು ತಂದೆಯನ್ನು ಸಮರ್ಥಿಸಿಕೊಂಡರಲ್ಲದೇ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೈತರ ಕಾಳಜಿಯಿಂದ ಸಾಲಮನ್ನಾ ಮಾಡುವ ವ್ಯಕ್ತಿಯೇ ಅಲ್ಲ ಎಂದು ಟೀಕಿಸಿದರು.
ಚಾಮರಾಜನಗರ ಲೋಕಸಭೆ ಕ್ಷೇತ್ರದಲ್ಲಿ ಈ ಭಾರಿ ಸಂಸತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಬೇಕಿದೆ. ಅಭ್ಯರ್ಥಿ ಅವರು, ಇವರು ಎನ್ನದೆ ಮೋದಿ, ಬಿಎಸ್‌ವೈ ಅವರನ್ನೇ ಅಭ್ಯರ್ಥಿ ಎಂದು ಗೆಲ್ಲಿಸಿ ಎಂದು ಮನವಿ ಮಾಡಿದರು. ಲೋಕಸಭೆ ಕ್ಷೇತ್ರದ ಬಿಜೆಪಿ ಉಸ್ತುವಾರಿ ಎಂ.ರಾಜೇಂದ್ರ, ಶಾಸಕ ನಿರಂಜನ್‌ಕುಮಾರ್, ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ರಮೇಶಗೌಡ, ಮಂಡಲ ಬಿಜೆಪಿ ಅಧ್ಯಕ್ಷ ಎನ್.ಮಲ್ಲೇಶ್ ಮಾತನಾಡಿದರು.
ಪುರಸಭೆ ಅಧ್ಯಕ್ಷ ಪಿ.ಗಿರೀಶ್, ಬಿಜೆಪಿ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಸುರೇಶಬಾಬು, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಪಿ.ಸುನೀಲ್, ವಕೀಲ ಅರುಣಕುಮಾರ್, ಬಿಜೆಪಿ ಮುಖಂಡ ಡಾ.ಮೋಹನ್, ಪುರಸಭೆ ಸದಸ್ಯ ಎಸ್.ಗೋವಿಂದರಾಜನ್, ಬಿಜೆಪಿ ಮುಖಂಡರಾದ ಎಚ್.ಎಸ್.ಸೋಮಶೇಖರ್, ರೈತ ಮುಖಂಡ ಕೆ.ಆರ್.ಲೋಕೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಚ್.ಎಂ.ಮಹೇಶ್, ಒಕ್ಕಲಿಗ ಮುಖಂಡ ಆಲತ್ತೂರು ರಾಜೇಶ್, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರಣಯ್, ತಾಲೂಕು ಅಧ್ಯಕ್ಷ ಬಿ.ಎಂ.ನಂದೀಶ್, ಗ್ರಾಪಂ ಸದಸ್ಯ ಕಲ್ಲಹಳ್ಳಿ ಮಹೇಶ್ ಹಾಜರಿದ್ದರು.