ಭಾರತೀನಗರ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಮಂಡ್ಯದಿಂದಲೇ ಸ್ಪರ್ಧಿಸಲಿದ್ದು, ಅವರನ್ನು ಎಲ್ಲರೂ ಬಹುಮತದಿಂದ ಗೆಲ್ಲಿಸೋಣ ಎಂದು ಚಿತ್ರನಟ ನಿಖೀಲ್ ಕುಮಾರಸ್ವಾಮಿ ತಿಳಿಸಿದರು.
ಪಟ್ಟಣದಲ್ಲಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ನಿವಾಸದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,ದೇವೇಗೌಡರಿಗೆ ಇದು ಕೊನೆಯ ಚುನಾವಣೆ. ಅವರ ಸ್ವಂತ ಕ್ಷೇತ್ರವಾಗಿದ್ದ ಹಾಸನ ಲೋಕಸಭಾ ಕ್ಷೇತ್ರಕ್ಕೆ ಪ್ರಜ್ವಲ್ ರೇವಣ್ಣ ಅವರ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ಕೊಡಲಾಗಿದೆ. ಹೀಗಾಗಿ, ದೇವೇಗೌಡರು ಹಾಸನದಿಂದ ಸ್ಪರ್ಧಿಸುವುದಿಲ್ಲ. ಬದಲಿಗೆ ಮಂಡ್ಯದಿಂದ ಅವರನ್ನು ಆಯ್ಕೆ ಮಾಡಿ ಕಳುಹಿಸುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.
ದೇವೇಗೌಡರು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದರೆ ತಾವೂ ಕ್ಷೇತ್ರಾದ್ಯಂತ ತಮ್ಮೊಂದಿಗೆ ಇದ್ದು, ಅವರ ಗೆಲುವಿಗೆ ಶ್ರಮಿಸುತ್ತೇನೆ. ಚುನಾವಣೆಗೆ ಎಲ್ಲರೂ ಸನ್ನದಟಛಿರಾಗಿ ಎಂದು ಸಲಹೆ ನೀಡಿದರು.
ವರಿಷ್ಠರು ಹೇಳಿದ್ರೆ ರಾಜಕೀಯ ಪ್ರವೇಶ: “ನನ್ನ ರಾಜಕೀಯ ಭವಿಷ್ಯದ ಬಗ್ಗೆ ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ. ಅವರ ಆದೇಶದಂತೆ ನಡೆಯುತ್ತೇನೆ’ಎಂದು ಚಿತ್ರನಟ ನಿಖೀಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಶಾಸಕರು, ಜನಪ್ರತಿನಿಧಿಗಳು, ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದು, ಅವರ ಒತ್ತಾಯವನ್ನು ಗೌರವಿಸುತ್ತೇನೆ. ಆದರೂ ಪಕ್ಷದ ವರಿಷ್ಠರದ್ದೇ ಅಂತಿಮ ತೀರ್ಮಾನ ಆಗಿರುತ್ತದೆ ಎಂದು
ಹೇಳಿದರು.
ಸದ್ಯ ತಾವು ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದು, ಜ.25ರಂದು ತಮ್ಮ ಅಭಿನಯದ ಸೀತಾರಾಮ ಕಲ್ಯಾಣ ಬಿಡುಗಡೆ ಆಗಲಿದೆ. ಚಿತ್ರದ ಪ್ರಚಾರಕ್ಕಾಗಿ ಎಲ್ಲೆಡೆ ಸಂಚರಿಸುತ್ತಿದ್ದೇನೆ. ಅದರಂತೆ ಮಂಡ್ಯ ಜಿಲ್ಲೆಯಲ್ಲೂ ವ್ಯಾಪಕ ಪ್ರಚಾರ ಕೈಗೊಂಡಿದ್ದೇನೆ ಎಂದು ತಿಳಿಸಿದರು.