Advertisement

ಸಿಎಂ ಸ್ಥಾನಕ್ಕೆ ಖರ್ಗೆ ಹೆಸರನ್ನು ತೇಲಿ ಬಿಟ್ಟ ದೇವೇಗೌಡ

12:08 AM Jul 08, 2019 | Team Udayavani |

ಬೆಂಗಳೂರು: ಶಾಸಕರ ರಾಜೀನಾಮೆಯಿಂದ ಮೈತ್ರಿ ಸರ್ಕಾರ ಅಪಾಯದ ಅಂಚಿನಲ್ಲಿರುವಾಗ ಕಾಂಗ್ರೆಸ್‌ನಲ್ಲಿ ಹೊಸ ಲೆಕ್ಕಾಚಾರ ಆರಂಭವಾಗಿದ್ದು, ಮೈತ್ರಿ ಸರ್ಕಾರದ ನಾಯಕತ್ವ ಬದಲಾವಣೆಯ ಮಾತುಗಳು ಕೇಳಿ ಬರುತ್ತಿವೆ. ಇದು ಮೈತ್ರಿ ಸರ್ಕಾರದಲ್ಲಿ ಎರಡೂ ಪಕ್ಷಗಳ ನಡುವೆ ಮತ್ತೂಂದು ರೀತಿಯ ಸಂಘರ್ಷಕ್ಕೆ ಮುನ್ನುಡಿ ಬರೆಯುವ ಸಾಧ್ಯತೆ ಇದೆ.

Advertisement

ಶನಿವಾರ ರಾಜೀನಾಮೆ ನೀಡಿರುವ ಕಾಂಗ್ರೆಸ್‌ ಶಾಸಕರಲ್ಲಿ ಬಹುತೇಕರು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಬೆಂಬಲಿಗರೇ ಇದ್ದಾರೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿದರೆ ರಾಜಿನಾಮೆ ನೀಡಿರುವ ಬಹುತೇಕ ಶಾಸಕರು ವಾಪಸ್‌ ಬರಬಹುದು ಎನ್ನುವ ಕಾರಣಕ್ಕೆ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂಬ ಅಭಿಪ್ರಾಯ ಪಕ್ಷದ ವಲಯದಲ್ಲಿ ವ್ಯಕ್ತವಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕಾಂಗ್ರೆಸ್‌ನಲ್ಲಿನ ಈ ಬೆಳವಣಿಗೆಯ ಸೂಕ್ಷ್ಮತೆ ಅರಿತಿರುವ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವಗೌಡ, ಕಾಂಗ್ರೆಸ್‌ನ ಈ ತಂತ್ರಕ್ಕೆ ಮಲ್ಲಿಕಾರ್ಜುನ ಖರ್ಗೆಯವರ ಹೆಸರನ್ನು ತೇಲಿ ಬಿಟ್ಟಿದ್ದಾರೆ ಎನ್ನಲಾಗಿದೆ. ಹೀಗಾಗಿ, ಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿಯೇ ಗೊಂದಲ ಮೂಡುವಂತಾಗಿದೆ. ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್‌ ನಾಯಕರಲ್ಲಿಯೇ ಎರಡು ಬಣಗಳಾಗಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಿದ್ದರಾಮಯ್ಯ ಅವರು ತಮಗೆ ಆಪ್ತರಾಗಿರುವ ಕೆಲವು ಶಾಸಕರ ಮೂಲಕ ರಾಜೀನಾಮೆ ಅಸ್ತ್ರ ಬಳಸಿ ಮುಖ್ಯಮಂತ್ರಿಯಾಗಲು ಒತ್ತಡದ ತಂತ್ರ ಅನುಸರಿಸುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ಸಿದ್ದರಾಮಯ್ಯ ಅವರ ರಾಜಕೀಯ ತಂತ್ರಗಾರಿಕೆಯನ್ನು ಅರಿತಿರುವ ದೇವೇಗೌಡರು, ಪ್ರತಿಯಾಗಿ ಖರ್ಗೆ ಅಸ್ತ್ರ ಪ್ರಯೋಗಿಸಿ, ಸಿದ್ದರಾಮಯ್ಯ ನಾಯಕತ್ವಕ್ಕೆ ತಮ್ಮ ಸಹಮತವಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.

ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಮೂಲಕ ಕಾಂಗ್ರೆಸ್‌ ನಾಯಕರಿಗೆ ದೇವೇಗೌಡರು ಸಂದೇಶ ರವಾನಿಸಿದ್ದಾರೆ ಎನ್ನಲಾಗಿದ್ದು, ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿಗೂ ದೇವೇಗೌಡರು ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ದೇವೇಗೌಡರ ಸಂದೇಶವನ್ನು ಡಿ.ಕೆ.ಶಿವಕುಮಾರ್‌ ಅವರು ಮಲ್ಲಿಕಾರ್ಜುನ ಖರ್ಗೆ ಗಮನಕ್ಕೂ ತಂದಿದ್ದಾರೆ ಎನ್ನಲಾಗಿದೆ.

Advertisement

ಒಂದು ವೇಳೆ, ನಾಯಕತ್ವ ಬದಲಾವಣೆಯ ಪ್ರಸ್ತಾಪ ಬಂದರೆ, ದಲಿತ ಸಮುದಾಯಕ್ಕೆ ಸೇರಿರುವ ಹಾಗೂ ರಾಜ್ಯ ಕಾಂಗ್ರೆಸ್‌ನಲ್ಲಿ ಹಿರಿಯ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಹೆಸರು ಪ್ರಸ್ತಾಪ ಮಾಡಿದರೆ, ಕಾಂಗ್ರೆಸ್‌ನ ಸಿದ್ದರಾಮಯ್ಯ ಬಣ ವಿರೋಧಿಸುವುದು ಕಷ್ಟ ಎಂಬ ಮಾತು ಕೇಳಿ ಬರುತ್ತಿದೆ. ಖರ್ಗೆ ನಾಯಕತ್ವಕ್ಕೆ ಸಿದ್ದರಾಮಯ್ಯ ವಿರೋಧಿಸಿದರೆ, ದಲಿತ ವಿರೋಧಿ ಹಣೆ ಪಟ್ಟಿ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಕಾರಣಕ್ಕೆ ಅವರೂ ಖರ್ಗೆ ಹೆಸರಿಗೆ ಸಹಮತ ವ್ಯಕ್ತಪಡಿಸುತ್ತಾರೆ ಎಂಬ ಲೆಕ್ಕಾಚಾರ ದೇವೇಗೌಡರದು ಎನ್ನಲಾಗುತ್ತಿದೆ.

ಅಲ್ಲದೇ ಖರ್ಗೆಯವರಿಗೆ ಅಧಿಕಾರ ನೀಡಿದರೆ, ದಲಿತ ನಾಯಕರಿಗೆ ಅಧಿಕಾರ ನೀಡಿದೆ ಎಂಬ ಅಸ್ತ್ರವನ್ನೇ ಮುಂದಿಟ್ಟುಕೊಂಡು ಮುಂದಿನ ಚುನಾವಣೆಯಲ್ಲಿ ದಲಿತ ಸಮುದಾಯವನ್ನು ಸೆಳೆಯಲು ಅನುಕೂಲವಾಗುತ್ತದೆ ಎಂಬ ಲೆಕ್ಕಾಚಾರ ದೇವೇಗೌಡರದು ಎನ್ನಲಾಗುತ್ತಿದೆ. ಆದರೆ, ಭಾನುವಾರ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಾಯಕತ್ವ ಬದಲಾವಣೆ ಕುರಿತು ಯಾವುದೇ ಚರ್ಚೆಯಾಗಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.

ಅನೇಕರು ವರ್ಷಾನುಗಟ್ಟಲೇ ಕಾಂಗ್ರೆಸ್‌ನಲ್ಲಿದ್ದರೂ ರಾಜೀನಾಮೆ ನೀಡಿದ್ದಾರೆ. ಬಿಜೆಪಿಯವರು ಹದಿನಾಲ್ಕು ರಾಜ್ಯಗಳಲ್ಲಿ ಆಪರೇಷನ್‌ ಕಮಲ ಮಾಡಿದ್ದಾರೆ. ಶಾಸಕರ ರಾಜೀನಾಮೆ ಹಿಂದೆ ಬಿಜೆಪಿ ಕೈವಾಡ ಇದೆ. ನಾಯಕತ್ವ ಬದಲಾವಣೆ ವಿಷಯವನ್ನು ಮಾಧ್ಯಮಗಳೇ ಸೃಷ್ಠಿಸುತ್ತಿವೆ.
-ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ನಾಯಕ

ರಾಜೀನಾಮೆ ನೀಡಿದವರಲ್ಲಿ ಮೂರು ಗುಂಪಿದೆ. ಜೆಡಿಎಸ್‌ ಒಂದು, ಕಾಂಗ್ರೆಸ್‌ನಲ್ಲಿ ಎರಡು ಗುಂಪಿದೆ. ಹಿಂದಿನ ಗುಂಪಿಗೂ ಈ ಗುಂಪಿಗೂ ವ್ಯತ್ಯಾಸ ಇದೆ. ಮಂಗಳವಾರದವರೆಗೂ ಕಾದು ನೋಡೋಣ. ಹೊಂದಾಣಿಕೆ ಆಗುವ ನಿರೀಕ್ಷೆ ಇದೆ.
-ಸತೀಶ್‌ ಜಾರಕಿಹೊಳಿ, ಅರಣ್ಯ ಸಚಿವ

ವೇಣುಗೋಪಾಲ್‌ ಎಲ್ಲರ ಜತೆ ಒನ್‌ ಟು ಒನ್‌ ಸಭೆ ನಡೆಸುತ್ತಿದ್ದಾರೆ. ನಾವು ನಮ್ಮ ಅಭಿಪ್ರಾಯ ಹೇಳಿದ್ದೇವೆ. ಸರ್ಕಾರ ಉಳಿಸುವ ಎಲ್ಲ ಪ್ರಯತ್ನ ನಡೆಸುತ್ತಿದ್ದೇವೆ.
-ಎಚ್‌.ಕೆ. ಪಾಟೀಲ್‌, ಕಾಂಗ್ರೆಸ್‌ ನಾಯಕ

ಇಷ್ಟು ದೊಡ್ಡ ಮಟ್ಟದಲ್ಲಿ ಶಾಸಕರು ರಾಜೀನಾಮೆ ನೀಡುತ್ತಾರೆಂದು ಅನಿಸಿರಲಿಲ್ಲ. ರಾಮಲಿಂಗಾ ರೆಡ್ಡಿ ರಾಜೀನಾಮೆ ಆಶ್ಚರ್ಯ ತಂದಿದೆ. ಮುಖ್ಯಮಂತ್ರಿ ಬದಲಾವಣೆ ವಿಚಾರ ಪಕ್ಷದ ಮಟ್ಟದಲ್ಲಿ ಚರ್ಚೆ ಆಗಿಲ್ಲ. ಮುಂಬೈಗೆ ತೆರಳಿರುವ ಶಾಸಕರನ್ನು ವಾಪಸ್‌ ಕರೆ ತರುವ ವಿಶ್ವಾಸ ಇದೆ.
-ಬೈರತಿ ಸುರೇಶ್‌, ಹೆಬ್ಬಾಳ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next