ಬೆಂಗಳೂರು: ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆಯ ಗುಮ್ಮ ಹರಿದಾಡುತ್ತಿರುವುದಕ್ಕೆ ಪಕ್ಷದ ವರಿಷ್ಠ ದೇವೇಗೌಡರು ಸ್ವತಃ ಪಕ್ಷ ಸಂಘಟನೆಗೆ ರಾಜ್ಯ ಪ್ರವಾಸ ನಡೆಸಲು ಮುಂದಾಗಿದ್ದಾರೆ.
ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಚ್. ವಿಶ್ವನಾಥ್ ಅವರ ರಾಜೀನಾಮೆಯನ್ನು ಅಂಗೀಕರಿಸಿ, ಬೇರೆಯವರಿಗೆ ಅಧಿಕಾರ ನೀಡಿ, ನೂತನ ಅಧ್ಯಕ್ಷರನ್ನು ಜೊತೆಗೆ ಕರೆದುಕೊಂಡು ರಾಜ್ಯ ಸುತ್ತಲು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ. ಪಕ್ಷದಲ್ಲಿನ ಹಿರಿಯ ನಾಯಕರಲ್ಲಿ ಯಾರನ್ನಾದರು ಗುರುತಿಸಿ ಅಧ್ಯಕ್ಷರನ್ನಾಗಿ ನೇಮಿಸುವ ಕುರಿತು ದೇವೇಗೌಡರು ಗಂಭೀರ ಚಿಂತನೆ ನಡೆಸಿದ್ದಾರೆ ಎನ್ನಲಾಗಿದ್ದು, ಪಕ್ಷದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ವೈಎಸ್‌ವಿ ದತ್ತಾ, ಹಿರಿಯ ಶಾಸಕ ಎಚ್.ಕೆ. ಕುಮಾರಸ್ವಾಮಿ, ಮಾಜಿ ಶಾಸಕರಾದ ಬಿ.ಬಿ.ನಿಂಗಯ್ಯ, ಮಧು ಬಂಗಾರಪ್ಪ, ಎಚ್.ಸಿ. ನೀರಾವರಿ ಅವರ ಹೆಸರುಗಳು ಕೇಳಿ ಬರುತ್ತಿವೆ.
ಅದರ ಜೊತೆಗೆ ನಾಲ್ಕು ಕಂದಾಯ ವಿಭಾಗಗಳಿಗೆ ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡಲು ದೇವೇಗೌಡರು ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಇದರ ಜೊತೆಗೆ ಪಕ್ಷದ ಪದಾಧಿಕಾರಿಗಳು ಹಾಗೂ ಜಿಲ್ಲಾ ಘಟಕಗಳನ್ನು ವಿಸರ್ಜನೆ ಮಾಡಿ, ಹೊಸ ಸಮಿತಿಗಳನ್ನು ರಚಿಸಬೇಕೆಂಬ ಬೇಡಿಕೆ ಪಕ್ಷದ ಕಾರ್ಯಕರ್ತರಲ್ಲಿದೆ. ದೇವೇಗೌಡರು ಸಕ್ರೀಯರಾಗಿರುವ ಜನತಾ ಪರಿವಾರದ ಹಿರಿಯ ನಾಯಕನಿಗೆ ರಾಜ್ಯಾಧ್ಯಕ್ಷ ಸ್ಥಾನ ಮಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಸಕ್ರೀಯವಾಗಿ ಪಕ್ಷ ಸಂಘಟನೆಗೆ ಒತ್ತು ನೀಡಿದರೆ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಸಮಾನವಾಗಿ ಪಕ್ಷ ಚುನಾವಣೆ ಎದುರಿಸಲು ಸಾಧ್ಯ ಎಂಬ ಮಾತುಗಳು ಕೇಳಿ ಬರುತ್ತಿವೆ.
ರಾಜ್ಯದಲ್ಲಿ ಹದಿನಾಲ್ಕು ವರ್ಷಗಳ ನಂತರ ಪಕ್ಷ ಅಧಿಕಾರಕ್ಕೆ ಬಂದಿರುವುದರಿಂದ ಸರ್ಕಾರದಲ್ಲಿ ಕಾರ್ಯಕರ್ತರಿಗೆ ಅಧಿಕಾರ ನೀಡಿದರೆ, ಕಾರ್ಯಕರ್ತರೂ ತಮ್ಮ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸಕ್ರೀಯವಾಗಿ ಪಕ್ಷವನ್ನು ಬಲಗೊಳಿಸಲು ಸಹಕಾರಿಯಾಗಲಿದೆ. ಜೆಡಿಎಸ್ ಹಳೆ ಮೈಸೂರಿಗೆ ಮಾತ್ರ ಸೀಮಿತ ಎನ್ನುವ ಭಾವನೆ ಎಲ್ಲರಿಗೂ ಇದೆ. ಆದರೆ, ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿಯೂ ಜೆಡಿಎಸ್ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಪ್ರಬಲ ಪೈಪೋಟಿ ನೀಡಿದೆ. ಹೀಗಾಗಿ ದೇವೇಗೌಡರೂ ಕೂಡ ಉತ್ತರ ಕರ್ನಾಟಕ ಭಾಗದ ಪಕ್ಷದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆಯ ಜವಾಬ್ದಾರಿ ನೀಡಿದರೆ, ಆ ಭಾಗದಲ್ಲಿಯೂ ಪಕ್ಷದ ಬೇರುಗಳನ್ನು ವಿಸ್ತರಿಸಲು ಅನುಕೂಲವಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಅದಕ್ಕೆ ಪೂರಕ ಎನ್ನುವಂತೆ ಪಕ್ಷದ ವರಿಷ್ಠ ದೇವೇಗೌಡರು ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳ ಸಭೆಗಳನ್ನು ನಡೆಸುತ್ತಿದ್ದಾರೆ. ಈಗಾಗಲೇ ಮಹಿಳಾ ಘಟಕ ಹಾಗೂ ಹಿಂದುಳಿದ ವರ್ಗಗಳ ಘಟಕದ ಪದಾಧಿಕಾರಿಗಳ ಸಭೆ ನಡೆಸಿದ್ದಾರೆ. ಪದಾಧಿಕಾರಿಗಳ ಸಭೆಗಳ ನಂತರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪ ಸಂಖ್ಯಾತರ ಪ್ರತ್ಯೇಕ ಸಮಾವೇಶಗಳನ್ನು ಮಾಡಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಸರ್ಕಾರದ ಕಾರ್ಯ ಚಟುವಟಿಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳದೇ ಪಕ್ಷ ಸಂಘಟನೆಗೆ ನೂತನ ರಾಜ್ಯಾಧ್ಯಕ್ಷರನ್ನು ಮುಂದಿಟ್ಟುಕೊಂಡು ರಾಜ್ಯ ಪ್ರವಾಸ ಕೈಗೊಳ್ಳಲು ದೇವೇಗೌಡರು ನಿರ್ಧರಿಸಿದ್ದಾರೆ ಎನ್ನಲಾಗಿದೆ.