Advertisement

ದೇವೇಗೌಡ, ಖರ್ಗೆ, ಮೊಯ್ಲಿ ಸೋಲು ಖಚಿತ

08:54 AM Apr 27, 2019 | Team Udayavani |

ಬೆಂಗಳೂರು: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಕಾಂಗ್ರೆಸ್‌ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಎಂ.ವೀರಪ್ಪ ಮೊಯ್ಲಿ, ಕೆ.ಎಚ್‌.ಮುನಿಯಪ್ಪ ಈ ಬಾರಿ ಸೋಲುವುದು ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.

Advertisement

ಚಿಂಚೋಳಿ ಹಾಗೂ ಕುಂದಗೋಳ ವಿಧಾನಸಭೆಗಳ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಬಿಜೆಪಿ ಶಾಸಕರು, ಸಂಸದರು, ಲೋಕಸಭಾ ಅಭ್ಯರ್ಥಿಗಳು, ಲೋಕಸಭಾ ಕ್ಷೇತ್ರ ಉಸ್ತುವಾರಿಗಳ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಯುವಜನತೆ ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದು, ಎಲ್ಲ ವರ್ಗದ ಜನ ಒಂದಾಗಿ ನರೇಂದ್ರ ಮೋದಿಯವರನ್ನು ಮತ್ತೂಮ್ಮೆ ಪ್ರಧಾನಿ ಮಾಡಲು ಸಂಕಲ್ಪ ತೊಟ್ಟಿದ್ದಾರೆ. ಮೋದಿಯವರು ಪ್ರಚಾರ ನಡೆಸಿದ ಕ್ಷೇತ್ರ ಹಾಗೂ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ರೋಡ್‌ ಶೋ ನಡೆಸಿದ ಕಡೆಯೆಲ್ಲಾ ಜನ ಭರ್ಜರಿ ಸ್ವಾಗತ ನೀಡಿದ್ದು, ಆತ್ಮವಿಶ್ವಾಸ ಹೆಚ್ಚಿಸಿದೆ ಎಂದರು.

ಈ ಬಾರಿ ಕೇಂದ್ರದಲ್ಲಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ರಾಜ್ಯದಲ್ಲೂ 22 ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದಾಗ ಕೆಲವರಷ್ಟೇ ಚಪ್ಪಾಳೆ ತಟ್ಟಿದರು. ಆಗ ಯಡಿಯೂರಪ್ಪ, ಚಪ್ಪಾಳೆ ತಟ್ಟಲು ಸಂಕೋಚ ಪಡಬೇಕಿಲ್ಲ ಎನ್ನುತ್ತಿದ್ದಂತೆ ಸಭೆಯಲ್ಲಿದ್ದವರು ಜೋರಾಗಿ ಕರತಾಡನ ಮಾಡಿದರು.

ಚಿಕ್ಕಬಳ್ಳಾಪುರದಲ್ಲಿ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿಯವರು ಈಗಾಗಲೇ ನಮ್ಮ ಅಭ್ಯರ್ಥಿ ವಿರುದ್ಧ ಸೋತಾಗಿದೆ. ಕೋಲಾರದಲ್ಲೂ ಕೆ.ಎಚ್‌.ಮುನಿಯಪ್ಪ ನಮ್ಮ ಅಭ್ಯರ್ಥಿ ಮುನಿಸ್ವಾಮಿ ವಿರುದ್ಧ ಸೋಲುವುದು ನಿಶ್ಚಿತ. ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಶೇ.100ರಷ್ಟು ಸೋಲಲಿದ್ದಾರೆ. ತುಮಕೂರು ಕ್ಷೇತ್ರದಲ್ಲಿ ದೇವೇಗೌಡರು ಸೋಲುತ್ತಾರೆ.

Advertisement

ಯಾರೂ ಆಶ್ಚರ್ಯ ಪಡಬೇಕಿಲ್ಲ. ಆ ರೀತಿಯ ವಾತಾವರಣವಿದೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ನನ್ನಲಿರುವ ಮಾಹಿತಿ, ನಡೆಸಿದ ಚರ್ಚೆ ಆಧರಿಸಿ ಹೇಳುತ್ತಿದ್ದೇನೆ. ಕಾಂಗ್ರೆಸ್‌, ಜೆಡಿಎಸ್‌ನ ಘಟಾನುಘಟಿಗಳು ಚುನಾವಣೆಯಲ್ಲಿ ಹಿನ್ನಡೆ ಅನುಭವಿಸುವುದು ಖಚಿತ ಎಂದರು.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌, ಮಾಜಿ ಸಚಿವ ಬಿ.ಶ್ರೀರಾಮುಲು, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಅರವಿಂದ ಲಿಂಬಾವಳಿ, ಎನ್‌.ರವಿಕುಮಾರ್‌ ಉಪಸ್ಥಿತರಿದ್ದರು.

ವಿದೇಶ ಪ್ರವಾಸ- ಹನಿಮೂನ್‌ ಸದ್ಯಕ್ಕೆ ಬೇಡ: ಚಿಂಚೋಳಿ ಹಾಗೂ ಕುಂದಗೋಳ, ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲ್ಲುವ ವಾತಾವರಣವಿದೆ. ಲೋಕಸಭಾ ಚುನಾವಣೆಯನ್ನು ಎದುರಿಸಿದ ಉತ್ಸಾಹ, ರಣತಂತ್ರದೊಂದಿಗೆ ಈ ಉಪಚುನಾವಣೆಯನ್ನೂ ಎದುರಿಸಬೇಕು.

ಎರಡು ಉಪಚುನಾವಣೆಗಳನ್ನು ಗೆಲ್ಲುವವರೆಗೆ ಯಾರಿಗೂ ವಿಶ್ರಾಂತಿ ಇಲ್ಲ. ಹಾಗಾಗಿ ಎಲ್ಲರೂ ಉಪಚುನಾವಣೆಗೆ ಸಮಯ ಕೊಟ್ಟು ಕೆಲಸ ಮಾಡಬೇಕು. ಯಾರು, ಯಾವ ಕ್ಷೇತ್ರಕ್ಕೆ ಹೋಗಿ ಕೆಲಸ ಮಾಡಬೇಕು ಎಂಬುದನ್ನು ನೀವೇ ನಿರ್ಧರಿಸಿ.

ಕ್ಷೇತ್ರದಲ್ಲೇ ಇದ್ದು, ಚುನಾವಣೆ ಮುಗಿಸಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಿ. ವಿದೇಶ ಪ್ರವಾಸ, ಹನಿಮೂನ್‌ ಸೇರಿದಂತೆ ಇತರ ಕಾರ್ಯ ಕಲಾಪಗಳನ್ನೆಲ್ಲಾ ಉಪಚುನಾವಣೆ ಮುಗಿದ ಮೇಲೆ ಇಟ್ಟುಕೊಳ್ಳಬೇಕು. ಮೇ 23ರ ಫ‌ಲಿತಾಂಶ ಪ್ರಕಟವಾದ ನಂತರ ಎಲ್ಲಾದರೂ ಹೋಗಿ ನಾನು ಮಾತನಾಡಿಸುವುದಿಲ್ಲ ಎಂದು ಬಿಎಸ್‌ವೈ ಖಡಕ್‌ ಆಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next