ಬೆಂಗಳೂರು: ದೇವೇಗೌಡರು ನನ್ನ ರಾಜಕೀಯ ಗುರುಗಳು, ಅವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮದ್ ತಿಳಿಸಿದ್ದಾರೆ.
ಮಂಗಳವಾರ ತಮ್ಮ 51ನೇ ಹುಟ್ಟುಹಬ್ಬವನ್ನು ಬಾಲಿವುಡ್ ಸ್ಟಾರ್‌ಗಳ ಆಚರಿಸಿಕೊಂಡ ಅವರು, ಮುಂದಿನ ಚುನಾವಣೆಗೆ ಪರೋಕ್ಷ ಪ್ರಚಾರ ಪ್ರಾರಂಭಿಸಿದರು. ಈ ವೇಳೆ ಮಾತನಾಡಿದ ಅವರು, “ಎಚ್.ಡಿ. ದೇವೇಗೌಡರ ಋಣ ನನ್ನ ಮೇಲಿದೆ. ನನ್ನ ಕೊನೆಯ ಉಸಿರು ಇರುವವರೆಗೂ ಮರೆಯುವುದಿಲ್ಲ. ಹುಟ್ಟುಹಬ್ಬದ ದಿನ ಅವರ ವಿರುದ್ಧ ಮಾತನಾಡುವುದಿಲ್ಲ,’ ಎಂದು ಅಚ್ಚರಿ ಮೂಡಿಸಿದರು.
“ನನ್ನ ರಾಜಕೀಯ ಗುರು ದೇವೇಗೌಡರು. ಕುಮಾರಸ್ವಾಮಿ ಅಲ್ಲ. 2005ರಲ್ಲಿ ಚಾಮರಾಜಪೇಟೆಯ ಉಪಚುನಾವಣೆಯಲ್ಲಿ ನಾನು ಸ್ಪರ್ಧಿಸಿದಾಗ ದೇವೇಗೌಡರು ಮನೆ ಮನೆ ಪ್ರಚಾರ ಮಾಡಿ ನನ್ನ ಗೆಲುವಿಗೆ ಶ್ರಮಿಸಿದ್ದರು. ಅವರ ಬಗ್ಗೆ ಗೌರವವಿದೆ,’ ಎಂದರು. ಆದರೆ, ಮತ್ತೆ ಜೆಡಿಎಸ್‌ಗೆ ಹೋಗುವ ಪ್ರಶ್ನೆಯೇ ಇಲ್ಲ. ನಾವು ಏಳು ಜನ ಕಾಂಗ್ರೆಸ್‌ನಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಹೇಳಿದರು.
ರೋಡ್ ಶೋ: ಇದಕ್ಕೂ ಮುನ್ನ ಹುಟ್ಟುಹಬ್ಬ ಪ್ರಯುಕ್ತ ಚಾಮರಾಜಪೇಟೆಯ ಮೈಸೂರು ರಸ್ತೆಯ ಡಾ.ರಾಜ್‌ಕುಮಾರ್ ಪ್ರತಿಮೆ ಬಳಿಯಿಂದ ಜೆಜೆ ನಗರದ ಸಂಗಮ್ ವೃತ್ತದವರೆಗೆ ನಡೆದ ರೋಡ್ ಶೋನಲ್ಲಿ ಬಾಲಿವುಡ್ ನಟರಾದ ಸುಹೇಲ್‌ಖಾನ್, ಅರ್ಬಾಜ್‌ಖಾನ್, ಸೋನು ಸೂದ್, ಗುಲÒನ್ ಗ್ರೋವರ್, ನವಾಜುದ್ದಿ ಸಿದ್ದಿಕಿ, ತೆಲುಗು ನಟ ಅಲಿ, ಜಮೀರ್ ಅಹ್ಮದ್ ಪುತ್ರ ಹಾಗೂ ನಟ ಝೈದ್‌ಖಾನ್ ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ನಟ ಸುಹೇಲ್‌ಖಾನ್ ಹಾಗೂ ಅರ್ಬಾಜ್‌ಖಾನ್, ಜಮೀರ್ ಅಹಮದ್ ಅವರ ಸ್ನೇಹದಿಂದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇವೆ. ಪ್ರತಿವರ್ಷ ಬಡ ಮುಸ್ಲಿಂ ಧಾರ್ಮಿಕ ಮುಖಂಡರಿಗೆ ಹಜ್ ಪ್ರವಾಸ, ಅಂಗವಿಕಲರಿಗೆ ತ್ರಿಚಕ್ರ ವಾಹನ, ನಿರುದ್ಯೋಗಿಗಳಿಗೆ ಆಟೋ ಖರೀದಿಗೆ ನೆರವು ನೀಡುತ್ತಿರುವ ಅವರ ಕೆಲಸ ಶ್ಲಾಘನೀಯ ಎಂದು ಹೇಳಿದರು.
ಇಮ್ರಾನ್ ಜತೆಗಿದ್ದಾನೆ
ಹುಟ್ಟು ಕಾರ್ಯಕ್ರಮಕ್ಕೆ ಗೈರಾಗಿದ್ದ ತಮ್ಮ ಪರಮಾಪ್ತ, ಪಾಲಿಕೆ ಸದಸ್ಯ ಇಮ್ರಾನ್ ಪಾಶಾ ಕುರಿತು ಪ್ರತಿಕ್ರಿಯಿಸಿದ ಜಮೀರ್, “ಇಮ್ರಾನ್‌ಪಾಷ ನನ್ನ ಜೊತೆಯಲ್ಲೆ ಇದ್ದಾರೆ. ಬೇರೆ ಕಾರ್ಯಕ್ರಮವಿದ್ದ ಕಾರಣ ಅವರು ಇಲ್ಲಿಗೆ ಬಂದಿಲ್ಲ. ಆದರೆ, ಅವರ ತಂದೆ ಆರೀಪ್ ಪಾಷ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ನಾನು ಯಾವ ಬೆಂಬಲಿಗರನ್ನು ಬಲವಂತವಾಗಿಟ್ಟುಕೊಂಡಿಲ್ಲ,’ ಎಂದು ಜಮೀರ್ ಅಹಮದ್ ತಿಳಿಸಿದರು. ಇಮ್ರಾನ್ ಪಾಶಾಗೆ ಉಪ ಮೇಯರ್ ಸ್ಥಾನ ಹಾಗೂ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡುವ ಆಮಿಶವೊಡ್ಡಿ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಹೋಗದಂತೆ ಜೆಡಿಎಸ್ ತಡೆದಿತ್ತು ಎಂದು ಹೇಳಲಾಗಿದೆ.