ನ್ಯಾಷನಲ್ ಕಾಲೇಜ್ ಮೈದಾನ ಸೋಮವಾರ ಎಂದಿನಂತಿರಲಿಲ್ಲ. ಅಲ್ಲಿ ರಂಗು ತುಂಬಿತ್ತು. ಶಿಳ್ಳೆ, ಚಪ್ಪಾಳೆಗಳ ಸದ್ದು ಮೇರೆ ಮೀರಿತ್ತು. ಅದಕ್ಕೆ ಕಾರಣವಾಗಿದ್ದು. ಎಸ್.ನಾರಾಯಣ್ ನಿರ್ದೇಶನದ “ಭೂಮಿಪುತ್ರ’ ಚಿತ್ರ. ಹೌದು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ 20 ತಿಂಗಳ ಆಡಳಿತಾವಧಿಯಲ್ಲಿ ನಡೆದ ವಿಷಯ ಇಟ್ಟುಕೊಂಡು “ಭೂಮಿಪುತ್ರ’ ಚಿತ್ರ ಮಾಡುತ್ತಿದ್ದಾರೆ ನಾರಾಯಣ್.
ಆ ಚಿತ್ರಕ್ಕೆ ಸೋಮವಾರ ಸಂಜೆ ಗೋಧೂಳಿ ಸಮಯದಲ್ಲಿ ಚಾಲನೆ ದೊರೆಯಿತು. ಮಾಜಿ ಪ್ರಧಾನಿ ದೇವೇಗೌಡ ಅವರು ದೀಪ ಬೆಳಗಿಸುವ ಮೂಲಕ “ಭೂಮಿಪುತ್ರ’ ಚಿತ್ರಕ್ಕೆ ಚಾಲನೆ ನೀಡಿದರು. ಸಿನಿಮಾ ಕಾರ್ಯಕ್ರಮವಾದ್ದರಿಂದ ದೇವೇಗೌಡರು ಮೊದಲು ಸಿನಿಮಾ ವಿಷಯ ಇಟ್ಟುಕೊಂಡೇ ಮಾತಿಗಿಳಿದರು. ನಿರ್ದೇಶಕ ಎಸ್.ನಾರಾಯಣ್ ಅವರು, ಚೆನ್ನಾಂಬಿಕಾ ಫಿಲ್ಮ್ಸ್ ಬ್ಯಾನರ್‌ನಡಿ “ಸೂರ್ಯವಂಶ’ ಹಾಗೂ “ಚಂದ್ರ ಚಕೋರಿ’ ಎಂಬ ಯಶಸ್ವಿ ಸಿನಿಮಾಗಳನ್ನು ನಿರ್ದೇಶಿಸಿದ್ದರು.
ಅದನ್ನು ಮೆಲುಕು ಹಾಕಿದ ದೇವೇಗೌಡರು, “ನಿರ್ದೇಶಕರು ನಮ್ಮ ಬ್ಯಾನರ್‌ನಲ್ಲಿ ಎರಡು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಈಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕುರಿತ ಸಿನಿಮಾ ತೆಗೆಯಲು ಹೊರಟಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಕುಮಾರಸ್ವಾಮಿ ರಾಜಕಾರಣದಲ್ಲಿ ಯಶಸ್ವಿಯಾಗಿದ್ದಾರೆ. ಅವರ 20 ತಿಂಗಳ ಆಡಳಿತಾವಧಿ ಬಗ್ಗೆ ಕಥೆ ಮಾಡಿ ಚಿತ್ರ ತೆಗೆಯುತ್ತಿದ್ದಾರೆ.
ಆ ಅವಧಿಯಲ್ಲಿ ನಾವೂ ಕಥೆಯಲ್ಲಿದ್ದರೆ ಸಂತೋಷವಾಗುತ್ತೆ. ನಾನು ಎಲ್ಲೇ ಹೋಗಲಿ, ಕುಮಾರಸ್ವಾಮಿ ಅವರ ದೈನಂದಿನ ದಿನಚರಿ ಹಾಗೂ ಅವರ ಆಡಳಿತ ಬಗ್ಗೆಯೇ ಜನ ಮಾತಾಡುತ್ತಾರೆ. ನಾನು ಕಥೆ ಕೇಳಿಲ್ಲ. ಸಿನಿಮಾ ಕಂಪ್ಲೀಟ್ ಆದಮೇಲೆ ನೋಡುತ್ತೇನೆ. ಆಮೇಲೆ ನಾರಾಯಣ್ ಅವರು ಎಲ್ಲಿ ಎಡವಿದ್ದಾರೆ, ಎಡವಿಲ್ಲ ಎಂದು ಹೇಳುತ್ತೇನೆ. ನಾರಾಯಣ್ ನಿರ್ದೇಶನದ ಆ ಎರಡು ಚಿತ್ರಗಳು ಸಹ ನನ್ನ ಮನಸ್ಸಿನ ಮೇಲೆ ಪರಿಣಾಮ ಬೀರಿದ್ದವು.
“ಭೂಮಿಪುತ್ರ’ ಎಂಬ ಶೀರ್ಷಿಕೆ ಚೆನ್ನಾಗಿದೆ. ನಿರ್ದೇಶಕರು ಚೆನ್ನಾಗಿ ಕೆಲಸ ಮಾಡುತ್ತಾರೆಂಬ ನಂಬಿಕೆ ಇದೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದು ಶುಭಹಾರೈಸಿದರು. ಈ ಸಂದರ್ಭದಲ್ಲಿ ಚೆನ್ನಮ್ಮ ದೇವೇಗೌಡ, ನಟ ಅರ್ಜುನ್ ಸರ್ಜಾ, ನಿರ್ದೇಶಕ ಎಸ್.ನಾರಾಯಣ್, ನಿರ್ಮಾಪಕ ಪ್ರಭಾಕರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ಸಂಸದ ಪುಟ್ಟರಾಜು, ವಿಧಾನಪರಿಷತ್ ಸದಸ್ಯ ಶರವಣ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದರು.