ಹುಮನಾಬಾದ: ದೇವೇಗೌಡ ಸ್ವಯಂ ಘೋಷಿಕ ಮಣ್ಣಿನ ಮಗ. ಅವರು ನಿಜವಾಗಿಯೂ ಮಣ್ಣಿನ ಮಗ ಆಗಿದ್ದರೆ ಅದನ್ನು ಸ್ವತಃ ರೈತರೇ ಹೇಳುತ್ತಿದ್ದರು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಟೀಕಿಸಿದರು. ಬರ ಪರಿಶೀಲನೆಗೆ ಹಳ್ಳಿಖೇಡ(ಬಿ) ಗ್ರಾಮದ ಕೆಲ ರೈತರ ಹೊಲಗಳಿಗೆ ಭೇಟಿ ನೀಡಿದ ನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಣ್ಣಿನ ಮಗನೆಂದು ಹೇಳಿಕೊಳ್ಳುವ ದೇವೇಗೌಡರು, ಹಿಂದುಳಿದ ವರ್ಗಗಳ ನಾಯಕನೆಂದೇ ಹೇಳಿಕೊಳ್ಳುವ ರಾಜ್ಯ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಯಾವತ್ತಾದರೂ ರಾಜ್ಯದ ರೈತರ ಕಣ್ಣೀರೊರೆಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರಾ? ರಾಜ್ಯದ ರೈತರ ಸಾಲ ಮನ್ನಾ ಮಾಡದೇ ಮಾಡಿದ್ದೇವೆ ಎಂದು ಪತ್ರಿಕೆಗಳಲ್ಲಿ ಎರಡೆರಡು ಪುಟ ಜಾಹೀರಾತು ನೀಡುತ್ತಿದ್ದಾರೆ ಎಂದರು.
ಹಳ್ಳಿಖೇಡ(ಬಿ) ಗ್ರಾಮದ ಕೆಲ ರೈತರ ಹೊಲಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬೇರು ಸಮೇತ ಕಿತ್ತು ಬಂದ ಎಳೆ ಕಬ್ಬು, ಒಣಗಿದ ಕಡಲೆ, ಜೋಳದ ಬೆಳೆಗಳನ್ನು ನೋಡಿದಾಗ ಎಂಥವರ ಕಣ್ಣಲ್ಲೂ ನೀರು ಬರುತ್ತದೆ. ಮುಖ್ಯಮಂತ್ರಿ ಬಲಗೈ ಬಂಟ್ ಎನ್ನಲಾಗುವ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ ಯಾವತ್ತಾದರು ಸೌಜನ್ಯಕ್ಕಾಗಿಯಾದರೂ ರೈತರ ಹೊಲಗಳಿಗೆ ಭೇಟಿ ನೀಡಿದ್ದಾರಾ ಎಂದು ಪ್ರಶ್ನಿಸಿದರು.
ಜಿಲ್ಲಾಮಟ್ಟದ ಕೆಡಿಪಿ ಸಭೆ ನಡೆಸಿ: ಬರ ಅಧ್ಯಯನಕ್ಕಾಗಿ ರಾಜ್ಯದ ನಾಲ್ಕು ವಿಭಾಗಗಳಲ್ಲಿ ತಂಡಗಳನ್ನು ರಚಿಸಲಾಗಿದೆ ಎಂದು ಸಚಿವ ಆರ್ .ವಿ.ದೇಶಪಾಂಡೆ ಹೇಳಿದ್ದಾರೆ. ಸರ್ಕಾರ ನಿಮ್ಮದೇ ಆಗಿರುವ ಈ ಸಂದರ್ಭದಲ್ಲಿ 4 ಪ್ರತ್ಯೇಕ ತಂಡಗಳ ಅಗತ್ಯವೇನಿತ್ತು. ಆಯಾ ಜಿಲ್ಲಾ ಉಸ್ತುವಾರಿ ಮಂತ್ರಿಗಳೇ ಜಿಲ್ಲಾ ಮಟ್ಟದಲ್ಲೇ ಕೆಡಿಪಿ ಸಭೆ ನಡೆಸಿ, ವಸ್ತುಸ್ಥಿತಿ ಅರಿತುಕೊಳ್ಳಲಿ. ಹಾನಿ ಕುರಿತು ಈಗಾಗಲೇ ಕಳುಹಿಸಿರುವ ವರದಿ ಆಧರಿಸಿ ರಾಜ್ಯ ಸರ್ಕಾರ ತಕ್ಷಣ ಪರಿಹಾರ ಬಿಡುಗಡೆ ಮಾಡಬೇಕು ಎಂದರು.
ಸಂಸದ ಭಗವಂತ ಖೂಬಾ, ಬಿಜೆಪಿ ಜಿಲ್ಲಾ ಅಧ್ಯಕ್ಷ ಡಾ| ಶೈಲೇಂದ್ರ ಬೆಲ್ದಾಳೆ, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮೂಡ, ಮಾಜಿ ಶಾಸಕ ಸುಭಾಷ ಕಲ್ಲೂರ, ಪಕ್ಷದ ರಾಜ್ಯ ಉಪಾಧ್ಯಕ್ಷ ರವಿ ಕುಮಾರ, ಬಸವರಾಜ ಚವ್ಹಾಣ, ಬಸವರಾಜ ಆರ್ಯ, ರಜಗನ್ನಾಥ ಚಿಲ್ಲಾಬಟ್ಟೆ, ಸುರೇಶಕುಮಾರ ಮಾಶೆಟ್ಟಿ, ರವಿ ಬಿರಾದಾರ, ಜೈಕುಮಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮನಾಥ ಪಾಟೀಲ, ತಾಲೂಕು ಅಧ್ಯಕ್ಷ ವಿಶ್ವನಾಥ ಪಾಟೀಲ ಮಾಡುಳ್, ತಾಪಂ ಸದಸ್ಯ ನಾಗೇಶ ಕಲ್ಲೂರ, ಮಾಧ್ಯಮ ಪ್ರಮುಖ ಪ್ರವೀಣ ಸಿರಂಜಿ, ಓಂಕಾರ ತುಂಬಾ, ಮಲ್ಲಿಕಾರ್ಜು ಕುಂಬಾರ ಮತ್ತಿತರರು ಇದ್ದರು.