Advertisement

ಪ್ರತಿಭಾನ್ವಿತ ಪಡಿಕ್ಕಲ್‌ಗೆ ಭಾರತ ತಂಡದ ಬಾಗಿಲು ತೆರೆಯಲಿದೆ: ಸೌರವ್‌ ಗಂಗೂಲಿ

11:47 PM Nov 08, 2020 | mahesh |

ಕೋಲ್ಕತಾ: ನೀಳಕಾಯದ ಎಡಗೈ ಆರಂಭಕಾರ ದೇವದತ್ತ ಪಡಿಕ್ಕಲ್‌ ಈ ಐಪಿಎಲ್‌ನ ಹೀರೋಗಳಲ್ಲಿ ಒಬ್ಬರು. ಇವರ ಅಮೋಘ ಬ್ಯಾಟಿಂಗ್‌ ಸಾಹಸದಿಂದಲೇ ಆರ್‌ಸಿಬಿ 2016ರ ಬಳಿಕ ಮೊದಲ ಸಲ ಪ್ಲೇ ಆಫ್‌ ಪ್ರವೇಶಿಸಿತು ಎಂಬುದರಲ್ಲಿ ಎರಡು ಮಾತಿಲ್ಲ.

Advertisement

ಪಡಿಕ್ಕಲ್‌ ಅವರದು ಕೊಹ್ಲಿ. ಎಬಿಡಿಗಿಂತಲೂ ಉತ್ತಮ ವಾದ ಸಾಧನೆ. ದಾಖಲೆಯ 5 ಅರ್ಧ ಶತಕದೊಂದಿಗೆ 473 ರನ್‌ ಪೇರಿಸಿದ ಹೆಗ್ಗಳಿಕೆ ಈ ಯುವ ಆಟಗಾರನದ್ದು. ಆದರೆ ಪಡಿಕ್ಕಲ್‌ ಮಿಂಚಿದ್ದು ಐಪಿಎಲ್‌ನಲ್ಲೇ ಮೊದಲಲ್ಲ. ಕಳೆದ ಸಾಲಿನ 50 ಓವರ್‌ಗಳ “ವಿಜಯ್‌ ಹಜಾರೆ ಟ್ರೋಫಿ’ ಮತ್ತು 20 ಓವರ್‌ಗಳ “ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ’ ಟೂರ್ನಿಗಳಲ್ಲೂ ಪಡಿಕ್ಕಲ್‌ ಟಾಪ್‌ ಸ್ಕೋರರ್‌ ಆಗಿದ್ದರು. ಕ್ರಮವಾಗಿ 609 ರನ್‌ (11 ಪಂದ್ಯ) ಹಾಗೂ 580 ರನ್‌ (12 ಪಂದ್ಯ) ಪೇರಿಸಿದ್ದರು. ಆದರೆ ಈ ಐಪಿಎಲ್‌ನಲ್ಲಿ ಅವರ ಸಾಧನೆ ಎಲ್ಲರ ಮೇಲೂ ಪ್ರಭಾವ ಬೀರುವಂತೆ ಮಾಡಿತು.

ಟೀಮ್‌ ಇಂಡಿಯಾದಲ್ಲಿ…
ದೇವದತ್ತ ಪಡಿಕ್ಕಲ್‌ ಅವರ ಬ್ಯಾಟಿಂಗ್‌ ಟ್ಯಾಲೆಂಟ್‌ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಮುಂದೊಂದು ದಿನ ಇವರಿಗೆ ಟೀಮ್‌ ಇಂಡಿಯಾದ ಬಾಗಿಲು ತೆರೆಯುವುದು ಖಂಡಿತ ಎಂದಿದ್ದಾರೆ.

“ಪಡಿಕ್ಕಲ್‌ ಪ್ರತಿಭಾನ್ವಿತ ಬ್ಯಾಟ್ಸ್‌ಮನ್‌. ಈಡನ್‌ ಗಾರ್ಡನ್ಸ್‌ ನಲ್ಲಿ ನಡೆದ ಕಳೆದ ಕರ್ನಾಟಕ-ಬಂಗಾಲ ನಡುವಿನ ರಣಜಿ ಸೆಮಿಫೈನಲ್‌ನಲ್ಲಿ ನಾನು ಪಡಿಕ್ಕಲ್‌ ಆಟವನ್ನು ಗಮನಿಸಿದ್ದೆ. ಅವರು ವೇಗದ ಬೌಲರ್‌ಗಳನ್ನು ದಿಟ್ಟ ರೀತಿಯಲ್ಲಿ ಎದುರಿಸುತ್ತಿದ್ದರು. ಮುಂದಿನ ಒಂದೆರಡು ಸೀಸನ್‌ ಅವರ ಪಾಲಿಗೆ ನಿರ್ಣಾಯಕ. ಭಾರತ ತಂಡಕ್ಕೆ ಆರಂಭಿಕರ ಅಗತ್ಯವಂತೂ ಇದೆ. ಸೂಕ್ತ ಸಮಯದಲ್ಲಿ ತಮ್ಮ ಆಟವನ್ನು ಉತ್ತುಂಗಕ್ಕೆ ಒಯ್ದರೆ ಪಡಿಕ್ಕಲ್‌ ಖಂಡಿತವಾಗಿಯೂ ಟೀಮ್‌ ಇಂಡಿಯಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ’ ಎಂದು ಸೌರವ್‌ ಗಂಗೂಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next