Advertisement

ಕಾಡಿನ ನಡುವೆ ದೇವರಮನೆ;ನಿಗೂಢತೆ ಮೆರೆದ ಕಾಲಭೈರವೇಶ್ವರ

07:21 PM Apr 13, 2020 | |

ಮೂಡಿಗೆರೆ ತಾಲೂಕಿನಿಂದ ಕೆಲವೇ ಕಿಲೋಮೀಟರುಗಳಷ್ಟು ದೂರದಲ್ಲಿದೆ ದೇವರಮನೆ. ಈ ದೇಗುಲದ ಕುಸುರಿ ಕೆತ್ತನೆ ನೋಡಿದರೆ, ಒಮ್ಮೆ ಭಯವಾಗುತ್ತದೆ. ಏಕೆಂದರೆ…

Advertisement

ಸುತ್ತಲೂ ಹಚ್ಚಹಸಿರು ಕಣ್ಣಿಗೆ ರಾಚುತ್ತದೆ. ಅಲ್ಲೇ ಒಂದು ತಿಳಿ ನೀಲಿ ಕೊಳ, ಆ ಕೊಳದಲ್ಲೊಂದು ಕಟ್ಟೆ. ಕಟ್ಟೆ ಬಳಿ ಫ‌ಲಕ ನೇತು ಹಾಕಿದ್ದಾರೆ. “ದೇವಸ್ಥಾನಕ್ಕೆ ತೀರ್ಥ ಇಲ್ಲಿಂದಲೇ ಸರಬರಾಜಾಗುತ್ತದೆ. ಅರ್ಚಕರನ್ನು ಹೊರತುಪಡಿಸಿ ಯಾರೂ ಈ ತೀರ್ಥಕ್ಕೆ ಕೈ ಹಾಕಬಾರದು’ ಎಂದು. ಈ ಕೊಳಕ್ಕೆ ಬೆನ್ನು ಮಾಡಿ ನಿಂತುಕೊಂಡರೆ ಕಾಣುವ ದೇವಸ್ಥಾನವೇ ಕಾಲಭೈರವೇಶ್ವರ ದೇವಸ್ಥಾನ. ದೇವಸ್ಥಾನದ ಹಿನ್ನೆಲೆಯಲ್ಲಿ ಪರ್ವತ ಶ್ರೇಣಿ ಆಕಾಶಕ್ಕೆ ಮುತ್ತಿಗೆ ಹಾಕಿವೆ. ಸುತ್ತಲೂ ಕಾಡು, ಬೆಟ್ಟ, ಗುಡ್ಡ, ಮಧ್ಯದಲ್ಲಿ ದೇವಸ್ಥಾನ, ಕೊಳ. ಇವುಗಳನ್ನೆಲ್ಲಾ ನೋಡುತ್ತಿದ್ದರೆ ರೋಮಾಂಚನ ಉಕ್ಕುತ್ತದೆ. ನಿಗೂಢತೆ ಮನಸ್ಸನ್ನು ಆವರಿಸುತ್ತದೆ. ಈ ವಾತಾವರಣವನ್ನು ನೋಡುತ್ತಾ ದೇವಸ್ಥಾನದ ಮುಂದಿನ ಹುಲ್ಲು ಹಾಸಿನ ಮೇಲೆ ಹಾಗೆಯೇ ಒರಗಿಕೊಳ್ಳೋಣ ಎನ್ನಿಸುತ್ತದೆ. ನಿಜಕ್ಕೂ ಇದು ದೇವರಮನೆಯೇ. ಅಂದಹಾಗೆ ಈ ಮಾತನ್ನು ಉತ್ಪ್ರೇಕ್ಷೆಗೆ ಹೇಳಿದ್ದಲ್ಲ. ಈ ಸ್ಥಳದ ಹೆಸರೇ ದೇವರಮನೆ.

ಮೂಡಿಗೆರೆ ತಾಲೂಕಿನಿಂದ ಕೆಲವೇ ಕಿಲೋಮೀಟರುಗಳಷ್ಟು ದೂರದಲ್ಲಿದೆ ದೇವರಮನೆ. ಇಲ್ಲಿಗೆ ಬಸ್‌ ಸಂಚಾರ ತುಂಬಾ ಕಡಿಮೆ. ಸ್ವಂತ ವಾಹನವಿದ್ದವರು ಮಾತ್ರ ನೇರವಾಗಿ ದೇವರಮನೆ ತಲುಪಿಬಿಡಬಹುದು. ಬಸ್‌ ಅನ್ನು ಅವಲಂಬಿಸಿದವರು ದೇವರಮನೆಯಿಂದ ನಾಲ್ಕು ಕಿ.ಮೀ ದೂರದ ಕವಲುದಾರಿಯಲ್ಲಿ ಇಳಿದುಕೊಳ್ಳಬೇಕು. ಅಲ್ಲಿಂದ ಮುಂದಕ್ಕೆ ಬಲಕ್ಕೆ ಕವಲೊಡೆದು ಏರುಮುಖವಾಗಿ ಸಾಗುವ ಹಾದಿಯಲ್ಲಿ ಕ್ರಮಿಸಬೇಕು. ಅಲ್ಲಿಂದ ದೇವರಮನೆ ದೇವಸ್ಥಾನಕ್ಕೆ ನಾಲ್ಕು ಕಿ.ಮೀ ದೂರವೇ ಆದರೂ ದುರ್ಗಮ ಹಾದಿಯಾಗಿರುವುದರಿಂದ ಹತ್ತಿ ಇಳಿದು ಹಲವು ಗುಡ್ಡಗಳನ್ನು ಬಳಸುವುದರಿಂದ ದಣಿವು ಖಚಿತ. ಇದನ್ನೇ ಟ್ರೆಕ್ಕಿಂಗ್‌ ಅಂತಲೂ ಹೇಳಬಹುದು. ಒಂದು ಸಮಾಧಾನಕರ ಸಂಗತಿಯೆಂದರೆ, ಇಲ್ಲಿನ ದಾರಿ ಚಿಕ್ಕದೇ ಆದರೂ, ಭಕ್ತಾದಿಗಳ ವಾಹನ ಹೋಗುವ ರಸ್ತೆಯಾಗಿರುವುದರಿಂದ ಚೆನ್ನಾಗಿದೆ.

ಸಾಮಾನ್ಯವಾಗಿ ದೇವಸ್ಥಾನದಲ್ಲಿ ಕಂಡುಬರುವ ಕುಸುರಿ, ಕೆತ್ತನೆಗಳು ನವಿರಾಗಿರುತ್ತವೆ, ಸೌಂದರ್ಯವನ್ನು ಮೈದಳೆದಿರುತ್ತವೆ. ಈ ದೇವಸ್ಥಾನದ ಕಂಬದಲ್ಲಿರುವ ಕೆತ್ತನೆಗಳು ಅಷ್ಟೇನೂ ಕಲಾತ್ಮಕವಾಗಿಲ್ಲ. ನವಿರು ಭಾವವನ್ನು ತರುವುದಿಲ್ಲ, ಬದಲಾಗಿ ಈ ಕಪ್ಪು ಮಿಶ್ರಿತ ದೇವಸ್ಥಾನವನ್ನು ನೋಡುತ್ತಿದ್ದರೆ ಮನದಲ್ಲಿ ಭಯಭಕ್ತಿ ಮೂಡುತ್ತದೆ. ಇದುವೇ ಈ ದೇವಸ್ಥಾನದ ವಿಶೇಷತೆಯೆನ್ನಬಹುದು. ಬಾಹ್ಯ ರೂಪದ ಅಂದಚೆಂದಗಳಿಗೆ ಸೋಲದೆ ಒಳಗಿನ ಆಂತರ್ಯದ ಸೌಂದರ್ಯವನ್ನು ಗಮನಿಸೋ ಮಾನವ ಎನ್ನುತ್ತಿದೆ ಈ ದೇವಸ್ಥಾನ. ಕಾಲಭೈರವೇಶ್ವರನ ದೇಗುಲ ತುಂಬಾ ಹಳೆಯದು. ಇದನ್ನು ಯಾರು ಕಟ್ಟಿಸಿದರೆಂಬುದಕ್ಕೆ ಪುರಾವೆಗಳಿಲ್ಲ. ಕೆಲವರು ನೂರಾರು ವರ್ಷಗಳಷ್ಟು ಹಳೆಯದೆಂದರೆ ಮತ್ತು ಕೆಲವರು ಮುನ್ನೂರು ವರ್ಷಗಳಷ್ಟು ಹಳೆಯದೆನ್ನುವರು.

ಈ ದೇವಸ್ಥಾನದ ಹಿಂದೆ ಒಂದು ಐತಿಹ್ಯವಿದೆ. ಶಿವನು ಭೂಲೋಕದ ಜನರ ಸಮಾಚಾರವನ್ನು ತಿಳಿಯಲು ನಂದಿಯನ್ನು ಕಳಿಸುತ್ತಾನೆ. ಆ ಸಮಯದಲ್ಲಿ ಜನರು ಕ್ಷಾಮ ಹಸಿವುಗಳಿಂದ ನರಳುತ್ತಿರುತ್ತಾರೆ. ಹೊಲವನ್ನು ತಾವೇ ಎಳೆದು ಉಳುಮೆ ಮಾಡುತ್ತಿರುತ್ತಾರೆ. ಆದರೆ, ನಂದಿ ಶಿವನಲ್ಲಿ ಬಂದು ಜನರು ಸುಭಿಕ್ಷವಾಗಿರುವರೆಂದು ಸುಳ್ಳು ಹೇàಳುತ್ತಾನೆ. ಕಡೆಗೊಮ್ಮೆ ಸತ್ಯ ತಿಳಿದ ಶಿವ ನಂದಿಗೆ ನೊಗ ಎಳೆಯುವ ಶಾಪ ನೀಡುತ್ತಾನೆ. ಅಂದಿನಿಂದ ನಂದಿ ನೊಗ ಎಳೆದು ಭೂಲೋಕದ ಜನರಿಗೆ ಅನ್ನ ನೀಡುತ್ತಿದ್ದಾನೆ! ಶಾಪ ನೀಡಿದ ಶಿವ, ನಂದಿಯ ಹಿಂದೆಯೇ ತಾನೂ ದೇವರಮನೆಯಲ್ಲಿ ಬಂದು ನೆಲೆನಿಂತ ಎಂಬ ಪ್ರತೀತಿ ಇದೆ. ದೇವಾಲಯದ ಹೊಸ್ತಿಲಲ್ಲಿ “ವೆಂಕಣ್ಣನ ನಮಸ್ಕಾರಗಳು’ ಎಂಬ ಬರಹವಿದೆ. ಇದರ ಹಿಂದಿನ ಕತೆಯೇನು? ಯಾರು ವೆಂಕಣ್ಣ? ಈ ನಿಗೂಢತೆ ಆ ಕಾಲಭೈರವೇಶ್ವರನಿಗಷ್ಟೇ ಗೊತ್ತು!

Advertisement

– ಹವನ

Advertisement

Udayavani is now on Telegram. Click here to join our channel and stay updated with the latest news.

Next