Advertisement

Mysterious Island: ಪೃಕೃತಿಯ ವಿಸ್ಮಯ- ತೇಲುವ ಅದ್ಭುತ ದ್ವೀಪ ʼಎಲ್ ಒಜೊʼ

12:07 PM Aug 12, 2024 | Team Udayavani |

ಈ ಭೂಮಿಯಲ್ಲಿ ನಾವು ಹಲವಾರು ವಿಸ್ಮಯಕಾರಿ, ನಿಗೂಢವಾದಂತಹ ವಿಷಯಗಳ ಬಗ್ಗೆ ಕೇಳಿದ್ದೇವೆ. ದಿನದಿಂದ ದಿನಕ್ಕೆ ಹುಟ್ಟಿಕೊಳ್ಳುವ ವಿಷಯಗಳಲ್ಲಿ ಕೆಲವು ಭಯವನ್ನು ಹುಟ್ಟಿಸಿದರೆ, ಇನ್ನೂ ಕೆಲವು ಆಶ್ಚರ್ಯವನ್ನು ಹುಟ್ಟಿಸುತ್ತದೆ. ಅಂತಹದ್ದೇ ಒಂದು ಆಶ್ಚರ್ಯವನ್ನು ಹುಟ್ಟಿಸುವ ವಿಷಯ ಅರ್ಜೆಂಟೀನಾದ ʼದಿ ಐʼ ಅಥವಾ ʼಎಲ್‌ ಓಜೋʼ ಎಂದು ಕರೆಯಲ್ಪಡುವ ಸಣ್ಣ ದ್ವೀಪ.

Advertisement

ಹೆಚ್ಚಿನ ದ್ವೀಪಗಳು ಅದರದ್ದೇ ಆದ ವಿಶೇಷತೆಗಳನ್ನು ಹೊಂದಿರುತ್ತವೆ. ಹಾಗೆಯೇ ಈ ದ್ವೀಪವು ತನ್ನದೇ ಆದ ವಿಶೇಷತೆಗಳಿಂದ ಎಲ್ಲರ ಗಮನ ಸೆಳೆದಿದೆ.

ಸುತ್ತಲೂ ಹಚ್ಚ ಹಸಿರಿನಿಂದ ಕಂಗೊಳಿಸುವ ಹಲವು ಸಸ್ಯ ಜಾತಿಗಳನ್ನು ಹೊಂದಿದ ಈ ದ್ವೀಪವು ಅರ್ಜೆಂಟೀನದ ಬ್ಯೂನಸ್‌ ಐರಿಸ್ ಮತ್ತು‌ ಕ್ಯಾಂಪನಾ ಪ್ರದೇಶಗಳ ನಡುವೆ ಹರಿದು ಹೋಗುವ ಪರಾನಾ ನದಿ ಮುಖಜ ಭೂಮಿಯಲ್ಲಿರುವ ಸಣ್ಣದಾದ ಮತ್ತು ನಿಗೂಢವಾದ ಒಂದು ದ್ವೀಪವಾಗಿದೆ. ಎಲ್‌ ಓಜೋ ದ್ವೀಪವು 120ಮೀಟರ್‌ಗಳ ಪರಿಪೂರ್ಣ ವೃತ್ತಾಕಾರದಲ್ಲಿದ್ದು, ಇದರ ಸುತ್ತಲೂ ಜೌಗು ಪ್ರದೇಶವನ್ನು ಹೊಂದಿದೆ. ಇದು ತೇಲುತ್ತಾ ವೃತ್ತಾಕಾರದಲ್ಲಿ ಚಲಿಸುವ ತೆಳುವಾದ ಭೂಮಿಯನ್ನು ಹೊಂದಿದೆ.

ಆಶ್ಚರ್ಯವೆಂದರೆ ಇಲ್ಲಿ ಈ ರೀತಿಯ ವೃತ್ತಾಕಾರದ ದ್ವೀಪವು ಯಾವಾಗ ಹುಟ್ಟಿತೆಂಬುದೇ ಯಾರಿಗೂ ತಿಳಿಯದ ವಿಷಯ.

Advertisement

ಅರ್ಜೆಂಟೀನಾದ ಸರ್ಜಿಯೋ ನ್ಯೂಸ್ಪಿಲ್ಲರ್‌ ಎಂಬ ಚಲನಚಿತ್ರ ನಿರ್ಮಾಪಕ 2016ರಲ್ಲಿ ಚಿತ್ರೀಕರಣದ ವೇಳೆ ಈ ಪ್ರದೇಶವನ್ನು ಸುತ್ತುವರಿಯುತ್ತಿರಬೇಕಾದರೆ ಮೊದಲ ಬಾರಿ ಆಕಸ್ಮಿಕವಾಗಿ ಎಲ್‌ ಓಜೋ ದ್ವೀಪವನ್ನು  ಕಂಡುಹಿಡಿದರು. ಮೊದಲ ಬಾರಿ ಈ ಪ್ರದೇಶವನ್ನು ನೋಡಿದ ಈತನಿಗೆ ವೃತ್ತಾಕಾರದ ದ್ವೀಪವು ಕುತೂಹಲ ಬರಿಸಿತ್ತು. ಇದರ ಕುರಿತು ಇನ್ನಷ್ಟು ತಿಳಿದುಕೊಳ್ಳುವ ಸಲುವಾಗಿ ಗೂಗಲ್‌ ಮ್ಯಾಪ್‌ ನ್ನು ಉಪಯೋಗಿಸಿಕೊಂಡ. ಗೂಗಲ್‌ ಮ್ಯಾಪ್‌ ನಲ್ಲಿ ಹಲವು ಬಾರಿ  ಈ ಪ್ರದೇಶವನ್ನು ವೀಕ್ಷಿಸಿದ ಈತನಿಗೆ ವೃತ್ತಾಕಾರದ ಪ್ರದೇಶವು, ತನ್ನ ಸ್ಥಳವನ್ನು ಬದಲಾಯಿಸಿಕೊಳ್ಳುತ್ತಾ ಸಂಚರಿಸುತ್ತಿರುವುದು ಕಂಡುಬಂದಿತ್ತು. ಇದರ ಬೆನ್ನಲ್ಲೇ ನಡೆದ ಹಲವಾರು ಸಂಶೋಧನೆಗಳು ಈ ದ್ವೀಪವು ಕಡಿಮೆಯೆಂದರೂ 2003 ರಲ್ಲಿ ಸೃಷ್ಟಿಯಾಗಿದೆ ಎಂದು ತಿಳಿಸಿವೆ.

ಈ ದ್ವೀಪವು ತೇಲುತ್ತಾ ತನ್ನ ಸ್ಥಾನವನ್ನು ಬದಲಿಸುತ್ತಾ ಇದ್ದರೂ ಇಲ್ಲಿ ಶುದ್ದವಾದ ಮತ್ತು ತಂಪಾದ ನೀರಿದೆ. ಈ ಪ್ರದೇಶವು ವೈವಿಧ್ಯಮಯವಾಗಿದ್ದು, ಹಲವಾರು ಸಸ್ಯಜಾತಿಗಳು, ಪ್ರಾಣಿಗಳು, ಹಾಗೂ ಕ್ಯಾಪೂಚಿನೋ ಎಂಬ ಜಾತಿಗೆ ಸೇರಿದ ಮಂಗಗಳು ಇಲ್ಲಿ ನೆಲೆಸುತ್ತದೆ. ಪಕ್ಷಿ ವೀಕ್ಷಕರಿಗಂತೂ ಈ ತಾಣವು ಕಣ್ಣಿಗೆ ಹಬ್ಬವನ್ನು ನೀಡುತ್ತದೆ. ಹಲವಾರು ಬಗೆಯ ಬೆಳ್ಳಕ್ಕಿ, ಬಣ್ಣ ಬಣ್ಣದ ಜಾಲಗಾರ ಹಕ್ಕಿಗಳನ್ನು ಈ ದ್ವೀಪದಲ್ಲಿ ವೀಕ್ಷಿಸಬಹುದಾಗಿದೆ.

ದ್ವೀಪ ಹುಟ್ಟಿದ ಬಗೆ ತಿಳಿಯದೆ, ನೀರಲ್ಲೇ ತೇಲುತ್ತಾ ತನ್ನ ಜಾಗವನ್ನು ಬದಲಾಯಿಸುತ್ತಾ ತನ್ನ ನೈಜ್ಯ ಸೌಂದರ್ಯದಿಂದ ಜೀವ ರಾಶಿಗಳನ್ನು ತನ್ನೆಡೆಗೆ ಬರಮಾಡಿಕೊಳ್ಳುತ್ತಾ ಎಲ್ಲರಿಗೂ ಆಶ್ಚರ್ಯವನ್ನು ತಂದೊಡ್ಡಿದ ಈ ದ್ವೀಪವು ಒಂದು ಅದ್ಭುತವೇ ಸರಿ.

*ಪೂರ್ಣಶ್ರೀ

Advertisement

Udayavani is now on Telegram. Click here to join our channel and stay updated with the latest news.

Next