ನವಿಮುಂಬಯಿ: ಪನ್ವೇಲ್‌ನ ದೆರವಳಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಕಾಳಿಕಾಂಬಾ ವಿಶ್ವಕರ್ಮ ಸೇವಾ ಸಂಘ ನವಿಮುಂಬಯಿ ಇದರ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಶಿಲಾಮಯ ಗರ್ಭಗುಡಿಯಲ್ಲಿ ಪ್ರಧಾನ ದೇವಿ ಶ್ರೀ ಕಾಳಿಕಾಂಬಾ ಜಗನ್ಮಾತೆ, ಶ್ರೀ ವಿನಾಯಕ, ಶ್ರೀ ಆನಂಜನೇಯಸ್ವಾಮಿ ಹಾಗೂ ಶ್ರೀ ನಾಗದೇವರ ಬಿಂಬ ಪ್ರತಿಷ್ಠಾಪನಾ ಅಷ್ಠಬಂಧ ಬ್ರಹ್ಮಕಲಶೋತ್ಸವಕ್ಕೆ ಫೆ. 16 ರಂದು ಚಾಲನೆಗೊಂಡಿತು.
ಫೆ. 20 ರವರೆಗೆ ಐದು ದಿನಗಳ ಕಾಲ ಬ್ರಹ್ಮಕಲಶೋತ್ಸವವು ವಿಜೃಂಭಣೆಯಿಂದ ನಡೆಯಲಿದೆ. ಫೆ. 16 ರಂದು ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ದೇವಾಲಯದಲ್ಲಿ ವಿವಿಧ ವೈಧಿಕ ವಿಧಾನಗಳು ಶ್ರೀ ಆನೆಗುಂದಿ ಮಹಾಸಂಸ್ಥಾನದ ಪುರೋಹಿತ ವೇದಮೂರ್ತಿ ತಂತ್ರಿ ಅಕ್ಷಯ ಎಸ್. ಶರ್ಮಾ ಇವರ ಆಚಾರ್ಯತ್ವದಲ್ಲಿ ನಡೆಯಿತು. ಶ್ರೀಗಳು ದೀಪಪ್ರಜ್ವಲಿಸಿ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ನೀಡಿದರು.
ಪೂರ್ವಾಹ್ನ 9 ರಿಂದ ತಂತ್ರಿವರ್ಯರು, ಋತ್ವಿಜರ ಸ್ವಾಗತ, ಶಿಲ್ಪಿಪೂಜೆ, ನೂತನ ಆಲಯ ಪರಿಗ್ರಹ, ಜಗದ್ಗುರುಗಳ ಸ್ವಾಗತ, ಗುರುಪಾದುಕಾ ಪೂಜೆ, ದೇವತಾ ಪ್ರಾರ್ಥನೆ, ತೋರಣ ಪ್ರತಿಷ್ಠೆ, ಮಹಾಸಂಕಲ್ಪ, ತಂತ್ರಿವರಣ, ಸಪ್ತಶುದ್ಧಿ, ಗುರುಗಣೇಶ ಪೂಜೆ, ಪ್ರಸಾದ ಶುದ್ಧಿ, ಮಧ್ಯಾಹ್ನ 1.30 ರಿಂದ ಅನ್ನಸಂತರ್ಪಣೆ ನಡೆಯಿತು. ಸಂಜೆ ಶ್ರೀ ಕಾಳಿಕಾಂಬಾ ವಿಶ್ವಕರ್ಮ ಸೇವಾ ಸಂಘ ಪನ್ವೇಲ್ ಇದರ ಸದಸ್ಯರಿಂದ ಭಜನ ಕಾರ್ಯಕ್ರಮ, ರಾತ್ರಿ 9 ರಿಂದ ರಾಕ್ಷೋಘ್ನ, ಸುದರ್ಶನ ಹೋಮಾಧಿಗಳು, ಮಾತೃಕಾ ನಾಂದಿ, ಕೌತುಕ ಬಂಧನ, ಅಂಕುರ ಪೂಜೆ, ರಕ್ಷಾಹವನ, ವಾಸ್ತು ಹೋಮ, ಪ್ರಾಕಾರ ಬಲಿ ಇತ್ಯಾದಿ ಪೂಜಾಧಿ ಕಾರ್ಯಕ್ರಮಗಳು ನೆರವೇರಿತು.
ಸಂಘದ ಅಧ್ಯಕ್ಷ ಕಣ್ಣಪ್ಪ ಎನ್. ಆಚಾರ್ಯ, ಉಪಾಧ್ಯಕ್ಷ ಬಿ. ನರಸಿಂಹ ಆಚಾರ್ಯ, ಗೌರವ ಕಾರ್ಯದರ್ಶಿ ಎನ್. ಪದ್ಮನಾಭ ಆಚಾರ್ಯ, ಗೌರವ ಕೋಶಾಧಿಕಾರಿ ಸಿಎ ಶ್ರೀಧರ ಎಸ್. ಆಚಾರ್ಯ, ಜತೆ ಕಾರ್ಯದರ್ಶಿ ಸತೀಶ್ ವಿ. ಆಚಾರ್ಯ, ಜತೆ ಕಾರ್ಯದರ್ಶಿ ನ್ಯಾಯವಾದಿ ಸುರೇಶ್ ಆಚಾರ್ಯ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ರವಿ ವಿ. ಆಚಾರ್ಯ, ಉಮೇಶ್ ವಿ. ಆಚಾರ್ಯ, ಪ್ರಭಾಕರ ಆಚಾರ್ಯ, ಅಚ್ಚುತ ಆಚಾರ್ಯ, ದಾಮೋದರ ಆಚಾರ್ಯ, ಚಂದ್ರಶೇಖರ ಆಚಾರ್ಯ, ಆನಂದ ಆಚಾರ್ಯ, ಕಟ್ಟಡ ಸಮಿತಿಯ ಸಂಚಾಲಕ ಶೈಲೇಶ್ ಕುಮಾರ್ ವಿ. ಸದಸ್ಯರುಗಳಾದ ಹೇಮಂತ್ ಆಚಾರ್ಯ, ಯೋಗೇಶ್ ಆಚಾರ್ಯ ಹಾಗೂ ಮಹಿಳಾ ವಿಭಾಗದ ಅಧ್ಯಕ್ಷೆ ಅನ್ನಪೂರ್ಣ ಶ್ರೀಧರ ಆಚಾರ್ಯ ಇತರ ಪದಾಧಿಕಾರಿಗಳು, ಸದಸ್ಯೆಯರು, ಭಜನ ಸಮಿತಿ, ಯುವ ವಿಭಾಗದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆಯಿತು.
ಇಂದಿನ ಕಾರ್ಯಕ್ರಮ
ಫೆ. 17 ರಂದು ಬೆಳಗ್ಗೆ 7 ರಿಂದ ಪುಣ್ಯಾಹ ದ್ವಾದಶ ನಾರಿಕೇಳ ಗಣಯಾಗ, ಪವಮಾನ ಶಾಂತಿ, ನವಗ್ರಹ ಶಾಂತಿ, ವಾಯುಸ್ತುತಿ, ಪುರಶ್ಚರಣ ಹೋಮ, ಮಧ್ಯಾಹ್ನ 1.30 ರಿಂದ ಅನ್ನಸಂತರ್ಪಣೆ, ಅಪರಾಹ್ನ 2.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 5 ರಿಂದ ದಾಮೋದರ ವಿ. ಆಚಾರ್ ಗಂಜಿಮಠ ಇವರಿಂದ ಉಪನ್ಯಾಸ, ಸಂಜೆ 6.30 ರಿಂದ ಭೇರಿತಾಡನ, ಉಗ್ರಾಣ ಮುಹೂರ್ತ, ವೇದ ಪಾರಾಯಣ, ಯಾಗಶಾಲಾ ಪ್ರವೇಶ, ಮಂಟಪ ಸಂಸ್ಕಾರ, ವಾಸ್ತು ಹೋಮಾಧಿಗಳು ನಡೆಯಲಿದೆ.