Advertisement

Holenarasipura Case: ಅತ್ಯಾಚಾರ ಕೇಸ್‌ನಲ್ಲಿ ದೇವರಾಜೇಗೌಡ ಬಂಧನ

11:22 PM May 11, 2024 | Team Udayavani |

ದೇವರಾಜೇಗೌಡರ ಬಂಧನಕ್ಕೆ ಸಂಬಂಧಿಸಿ ಬಿಜೆಪಿ ನಾಯಕರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಯಾರ್ಯಾರು ಸರಕಾರದ ವಿರುದ್ಧ ಮಾತನಾಡುತ್ತಿದ್ದಾರೋ ಅಂಥವರನ್ನು ಬಂಧಿಸಲಾಗುತ್ತಿದೆ. 2ನೇ ಆಡಿಯೋ ಬಾಂಬ್‌ ಬಹಿರಂಗವಾದ ಬಳಿಕ ದೇವರಾಜೇಗೌಡರ ಬಂಧನವಾಗಿದೆ. ಇನ್ನಷ್ಟು ಆಡಿಯೋ ಬಹಿರಂಗವಾಗಬಾರದೆಂಬ ಕಾರಣಕ್ಕೆ ಅವರನ್ನು ಬಂಧಿಸಿರಬಹುದು. ಸರಕಾರದ ನಡೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿದ್ದಾರೆ. ಈ ಪ್ರಕರಣದಲ್ಲಿ ತನ್ನ ಬಂಧನವಾಗಬಹುದೆಂಬ ಭಯ ಡಿ.ಕೆ.ಶಿವಕುಮಾರ್‌ಗೆ ಶುರುವಾಗಿದೆ. ಆದ್ದರಿಂದಲೇ ದೇವರಾಜೇಗೌಡರ ಬಂಧನವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಹೇಳಿದ್ದಾರೆ.

Advertisement

ಹಾಸನ: ಪ್ರಜ್ವಲ್‌ ಪೆನ್‌ಡ್ರೈವ್‌ ಪ್ರಕರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ವಿರುದ್ಧವೇ ಆರೋಪ ಮಾಡಿದ್ದ ಬಿಜೆಪಿ ಮುಖಂಡ, ನ್ಯಾಯವಾದಿ ಜಿ.ದೇವರಾಜೇ ಗೌಡ ರನ್ನು ಅತ್ಯಾಚಾರ ಪ್ರಕರಣದಲ್ಲಿ ಹೊಳೆ ನರಸೀಪುರ ಪೊಲೀಸರು ಬಂಧಿಸಿದ್ದಾರೆ. ಅವರನ್ನು ಮೇ 13ರ ವರೆಗೆ ಪೊಲೀಸ್‌ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ.

ಹೊಳೆನರಸೀಪುರದ ಮಹಿಳೆಯೊಬ್ಬ ರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ದೂರು ಹೊಳೆನರಸೀಪುರ ನಗರ ಪೊಲೀಸ್‌ ಠಾಣೆಯಲ್ಲಿ ಎ.1ರಂದು ದಾಖಲಾಗಿತ್ತು. ಐಪಿಸಿ ಕಾಯ್ದೆ-1860, ಸೆಕ್ಷನ್‌ 354 (ಎ), 354(ಸಿ), 448, 504, 506, 34 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ-2008ರ ಸೆಕ್ಷನ್‌ 66ಇ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ 40 ದಿನಗಳಿಂದಲೂ ಮಾಹಿತಿಯನ್ನು ಹೊರಬಿಟ್ಟಿರಲಿಲ್ಲ. ಆರೋಪಿಯ ವಿಚಾರಣೆಯನ್ನೂ ಮಾಡಿರಲಿಲ್ಲ. ದೂರುದಾರ ಮಹಿಳೆಯಿಂದ ಶುಕ್ರವಾರ ಮರು ಹೇಳಿಕೆ ಪಡೆದು ದೇವರಾಜೇಗೌಡ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿ ದೇವರಾಜೇಗೌಡ ಅವರ ಬಂಧನ ಮಾಡ‌ಲಾಗಿದೆ.
ಶುಕ್ರವಾರ ಸಂಜೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸಮೀಪ ದೇವರಾಜೇಗೌಡ ಅವರನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಶನಿವಾರ ಮುಂಜಾನೆ ವೇಳೆಗೆ ಹೊಳೆನರಸೀಪುರ ಪೊಲೀಸ್‌ ವೃತ್ತನಿರೀಕ್ಷಕರ ಕಚೇರಿಗೆ ಕರೆ ತಂದರು. ಅನಂತರ ಹಾಸನ ಎಸ್ಪಿ ಸುಜೀತಾ ಮೊಮಮ್ಮದ್‌, ಎಎಸ್ಪಿ ವೆಂಕಟೇಶ ನಾಯ್ಡು ಸಮ್ಮುಖದಲ್ಲಿ ದೇವರಾಜೇಗೌಡ ಅವರನ್ನು ನಾಲ್ಕೂ ವರೆ ಗಂಟೆ ವಿಚಾರಣೆ ನಡೆಸಿದರು.

ಸಂಜೆ ವೇಳೆಗೆ ಹೊಳೆನರಸೀಪುರ ಸರಕಾರಿ ಆಸ್ಪತ್ರೆಯಲ್ಲಿ ಆರೋಪಿ ಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ಅನಂತರ ನ್ಯಾಯಾಧೀಶರ ಎದುರು ಹಾಜರು ಪಡಿಸಿ ಕಸ್ಟಡಿಗೆ ಕೊಡುವಂತೆ ಪೊಲೀ ಸರು ಮನವಿ ಮಾಡಿದರು. ಪೊಲೀಸರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಧೀಶರು ಆರೋಪಿಯನ್ನು ಮೇ 13ರ ಸೋಮವಾರದವರೆಗೆ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದರು.

ದೇವರಾಜೇ ಗೌಡರ ಮೊಬೈಲ್‌ ಹಾಗೂ ಇನ್ನೋವಾ ಕಾರನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಎ.1ರ ಪ್ರಕರಣದ ವಿವರ

10 ತಿಂಗಳ ಹಿಂದೆ ಹಾಸನದ ತಣ್ಣೀರುಹಳ್ಳ ಬಡಾವಣೆಯಲ್ಲಿರುವ ನಿವೇಶನವನ್ನು ಮಾರಾಟ ಮಾಡುವ ಸಂಬಂಧ ಹೊಳೆನರಸೀಪುರದ ಮಹಿಳೆ ಯೊಬ್ಬರು ದೇವರಾಜೇ ಗೌಡರನ್ನು ಭೇಟಿಯಾಗಿದ್ದರು. ಬಳಿಕ ಆಗಾಗ್ಗೆ ಆ ಮಹಿಳೆ ಜತೆಗೆ ದೇವರಾಜೇ ಗೌಡರು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರೆನ್ನಲಾಗಿದೆ. ಹೊಳೆ ನರಸೀಪುರದಲ್ಲಿ ಮಹಿಳೆಯ ಪತಿಯ ಹೆಸರಿನಲ್ಲಿರುವ ನಿವೇಶನದ ವಿವಾದವನ್ನು ಬಗೆಹರಿಸಿಕೊಡ ಲಾಗುವುದು, ಮನೆ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿಯೂ ದೇವರಾಜೇಗೌಡ ಮಹಿಳೆಗೆ ಭರವಸೆ ನೀಡಿದ್ದಾರೆನ್ನಲಾಗಿದೆ. ಆಗಾಗ್ಗೆ ಹಾಸನಕ್ಕೆ ಬಂದು ಹೋಗುವಂತೆ ಹೇಳಿದ್ದರು ಎಂದು ಮೂಲಗಳು ಹೇಳಿವೆ.

Advertisement

ಮಹಿಳೆಯು ಹಾಸನಕ್ಕೆ ಬಂದಾಗ, ದೇವರಾಜೇ ಗೌಡ ತನ್ನ ಕಾರಿನಲ್ಲಿ ಕೂರಿಸಿಕೊಂಡು ಹೊಳೆನರಸೀಪುರಕ್ಕೆ ಕರೆದೊಯ್ಯುವ ಮಾರ್ಗಮಧ್ಯೆ ಹಾಸನ ಕೈಗಾರಿಕಾಭಿವೃದ್ಧಿ ಕೇಂದ್ರದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ನನ್ನ ಮೈಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದರು. ಅನಂತರ ಮಹಿಳೆಯನ್ನು ಹೊಳೆನರಸೀಪುರಕ್ಕೆ ಆಕೆಯ ಮನೆಯ ಬಿಡಲು ಹೋದಾಗ, ಆಕೆಯನ್ನು ಬಲವಂತವಾಗಿ ದೈಹಿಕವಾಗಿ ಬಳಸಿ ಕೊಂಡರು. ನಾನು ಹೇಳಿದಂತೆ ಕೇಳ ದಿದ್ದರೆ ನಿನ್ನ ಗಂಡನನ್ನು ಮುಗಿಸುವ ಬೆದರಿಕೆಯೊಡ್ಡಿ ಹಲವು ಬಾರಿ ನನ್ನನ್ನು ದೈಹಿಕವಾಗಿ ಬಳಸಿಕೊಂಡರು ಎಂದು ಮಹಿಳೆಯು ಎ.1ರಂದು ಹೊಳೆ ನರಸೀಪುರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರ ನೀಡಿದ್ದಾರೆ.

ಮಾ.29ರಂದು ದೇವರಾಜೇಗೌಡ ಅವರ ಕಡೆಯವರೆನ್ನಲಾದ ಇಬ್ಬರು ದಿಢೀರನೆ ನನ್ನ ಮನೆಗೆ ಬಂದು ನನ್ನ ಮೊಬೈಲ್‌ ಫೋನನ್ನು ಕಿತ್ತುಕೊಂಡು ಹೋಗಿದ್ದರು. ದೇವರಾಜೇಗೌಡರು ಅನಂತರ ವೀಡಿಯೋ ಕಾಲ್‌ ಮಾಡಿ ನನ್ನ ವಿಷಯವನ್ನು ಯಾರಿಗೂ ಹೇಳ ಕೂಡದೆಂದು ಎಚ್ಚರಿಸಿದ್ದರು ಎಂದೂ ಆಕೆ ದೂರಿನಲ್ಲಿ ತಿಳಿಸಿದ್ದರು.
ಎ.1ರಂದು ಪ್ರಕರಣ ದಾಖಲಾಗಿ ದ್ದರೂ ಪ್ರಜ್ವಲ್‌ನ ಪೆನ್‌ಡ್ರೈವ್‌ಗಳು ಹಂಚಿಕೆಯಾಗಿ ಲೋಕಸಭಾ ಚುನಾವಣೆ ಮುಗಿಯುವವರೆಗೂ ದೇವರಾಜೇಗೌಡರ ಪ್ರಕರಣ ಗೌಪ್ಯವಾಗಿಯೇ ಇತ್ತು. ಆದರೆ ಎಚ್‌.ಡಿ.ರೇವಣ್ಣ ಬಂಧನದ ಬಳಿಕ ರಾಜಕೀಯ ಕೆಸರೆರಚಾಟ ಆರಂಭ ವಾಗಿದ್ದ ಸಂದರ್ಭದಲ್ಲಿ ಪ್ರಜ್ವಲ್‌ ಅವರ ಅಶ್ಲೀಲ ಚಿತ್ರಗಳ ಪೆನ್‌ಡ್ರೈವ್‌ಗಳ ಹಂಚಿಕೆಯಲ್ಲಿ ಡಿಸಿಎಂ ಪಾತ್ರವೂ ಇದೆ ಎಂದು ದೇವರಾಜೇ ಗೌಡರು ಹೇಳಿಕೆ ನೀಡಿ ರಾಜಕೀಯ ಸಂಚಲನ ಸೃಷ್ಟಿಸಿದ್ದರು. ಅನಂತರ ದೇವರಾಜೇಗೌಡರು ನಡೆಸಿದ್ದಾರೆನ್ನ ಲಾದ ಲೈಂಗಿಕ ದೌರ್ಜನ್ಯದ ಪ್ರಕರಣ ಮುನ್ನೆಲೆಗೆ ಬಂದಿದೆ.

ಹನಿಟ್ರ್ಯಾಪ್‌ ಪ್ರಕರಣ
ಮಹಿಳೆಯು ಪ್ರಕರಣ ದಾಖಲಿಸಿದ ಮಾಹಿತಿ ಪಡೆದಿದ್ದ ದೇವರಾಜೇ ಗೌಡರು ಮೇ 8ರಂದು ಬೆಂಗಳೂರಿನ ಪೊಲೀಸ್‌ ಠಾಣೆಯಲ್ಲಿ ತನ್ನನ್ನು ಹನಿ ಟ್ರ್ಯಾಪ್‌ನಲ್ಲಿ ಸಿಲುಕಿಸುವ ಹುನ್ನಾರ ನಡೆದಿದೆ ಎಂದು ದೂರು ನೀಡಿ ದ್ದರು. ಹೊಳೆನರಸೀಪುರ ಠಾಣೆಯಲ್ಲಿ ಮಹಿಳೆ ದೂರು ಆಧರಿಸಿ ದಾಖಲಾದ ಎಫ್ಐಆರ್‌ ಹಿನ್ನೆಲೆಯಲ್ಲಿ ನಿರೀಕ್ಷಣ ಜಾಮೀನು ಪಡೆಯಲೂ ಪ್ರಯತ್ನಿಸಿ ದ್ದರು ಎಂದು ಹೇಳಲಾಗಿದೆ.

ಪೊಲೀಸರಿಗೆ ದೇವರಾಜೇಗೌಡ ಮರುಪ್ರಶ್ನೆ!
ವಿಚಾರಣೆ ವೇಳೆ ಪೊಲೀಸರಿಗೇ ದೇವರಾಜೇಗೌಡ ಮರುಪ್ರಶ್ನೆ ಹಾಕುತ್ತಿರುವುದು ತಲೆನೋವಾಗಿದೆ ಎನ್ನಲಾಗಿದೆ. ಈ ಹಿಂದೆ ನಾನು ಬೆಂಗಳೂರಿನಲ್ಲಿ ದೂರು ಕೊಟ್ಟಿದ್ದೇನೆ. ಆದರೂ ನನ್ನ ಮೇಲೆ ಕೇಸ್‌ ದಾಖಲಾಗಿದೆ ಎಂದು ದೇವರಾಜೇಗೌಡ ಪದೇಪದೆ ಹೇಳುತ್ತಿದ್ದು, ಇವರಿಂದ ಸಂತ್ರಸ್ತೆ ನೀಡಿರುವ ಆರೋಪಗಳ ಸಂಬಂಧ ಪೊಲೀಸರು ಮಾಹಿತಿ ಪಡೆಯುವ ಪ್ರಯತ್ನದಲ್ಲಿ ತೊಡಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next