Advertisement

ದೇವರಾಜ ಅರಸು ಮೌನ ಕ್ರಾಂತಿಕಾರ: ಪೂರ್ಣಾನಂದ

11:49 AM Sep 08, 2017 | |

ಕಲಬುರಗಿ: ರಾಜ್ಯ ಕಂಡ ಪ್ರಖರ ಮುಖ್ಯಮಂತ್ರಿ ದಿ| ದೇವರಾಜ ಅರಸು. ಅವರು ದಲಿತರ, ದಮನಿತರ ಧ್ವನಿಯಾಗಿದ್ದರು. ಕೆಳ ವರ್ಗದವರನ್ನು, ಅಲ್ಪಸಂಖ್ಯಾತರನ್ನು ಹುಡುಕಿ ಅಧಿಕಾರದ ಗದ್ದುಗೆಗೆ ತಂದರು. ಇದು ಅವರ ಮೌನಕ್ರಾಂತಿಯ ವರಸೆ ಆಗಿತ್ತು ಎಂದು ಮೈಸೂರಿನ ಪ್ರಗತಿಪರ ಚಿಂತಕ ಡಾ| ಎಂ.ಪಿ. ಪೂರ್ಣಾನಂದ ಹೇಳಿದರು.

Advertisement

ಗುವಿವಿಯಲ್ಲಿ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ದಿ| ಡಿ.ದೇವರಾಜು ಅರಸು ಅವರ 102ನೇ ಜನ್ಮದಿನಾಚರಣೆ
ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿಜಯಪುರದ ಕಾಳಿಂಗಪ್ಪ ಚೌಧರಿಯಿಂದ ಹಿಡಿದು ಬೆಂಗಳೂರಿನ ಜಾಫರ್‌ ಶರೀಫ್‌ವರೆಗೂ ಮತ್ತು ಯಾದಗಿರಿಯ
ಶರಣಪ್ಪ ಕಲಬುರ್ಗಿ ಅವರಿಂದ ಹಿಡಿದು ಹೆಳವರವರೆಗೂ ಹಲವಾರು ಕೆಳ ಸಮುದಾಯಗಳ ಮುಖಂಡರನ್ನು,
ಜ್ಞಾನವಂತರನ್ನು ಹುಡುಕಿ ಅಧಿಕಾರಕ್ಕೆ ತಂದರೂ, ಅವರ ಮುಖೇನ ಆಯಾ ವರ್ಗಗಳ ಹಿತ ಕಾಪಾಡಿದರು. ಒಮ್ಮೆ
ಪತ್ರಕರ್ತರು ಏನ್ರಿ ಯರ್ಯಾರನ್ನೋ ತಂದು ನಿಲ್ಲಿಸ್ತಿದಿರಲ್ಲಾ ಎಂದು ಕಾಲೆಳೆದಾಗ ಸುಮ್ಮನೆ ನಕ್ಕು, ಕಾಯಿರಿ ಎನ್ನುತ್ತಲೇ ಸಂಯಮ ತೋರುತ್ತಿದ್ದರು. ಬಳಿಕ ಫಲಿತಾಂಶದ ಮುಖೇನ ಅವರಿಗೆ ಉತ್ತರವನ್ನು ನೀಡುತ್ತಿದ್ದರು. ಇದೆಲ್ಲವೂ ಮೌನವಾಗಿಯೇ ನಡೆದು ಹೋಗುತ್ತಿತ್ತು. ಆ ಮುಖೇನ ಅವರು ಕೆಳ ವರ್ಗದಲ್ಲಿ ಕ್ರಾಂತಿಯ ಕಿಡಿಗಳನ್ನು ಚೆಲ್ಲಿದ್ದರು ಎಂದು ನೆನಪಿಸಿಕೊಂಡರು.

ಮುಖ್ಯಮಂತ್ರಿಯಾಗಿದ್ದಾಗ ಅರಸು, ವಿಜಯಪುರದಲ್ಲಿ ಬೆಳಗ್ಗೆ ಕೊಳಗೇರಿಯಲ್ಲಿ ವಾಯು ವಿಹಾರ ಮಾಡುವಾಗ ಹೆಳವರ
ಜಾತಿಯ ರೈತಣ್ಣನನ್ನು ಮಾತನಾಡಿಸಿದಾಗ ವಂಶಾವಳಿಗಳನ್ನು ಹೇಳುವ ಜಾತಿ ಇದೆಯಾ ಎಂದು ಅಚ್ಚರಿ ಪಟ್ಟು ಹೆಳವರ ಜಾತಿಯಲ್ಲಿ ಓದಿಕೊಂಡಿದ್ದ ಯುವಕನನ್ನು ಕರೆದು ತಂದು ಯೂತ್‌ ಕಾಂಗ್ರೆಸ್‌ಗೆ ರಾಜ್ಯಾಧ್ಯಕ್ಷನನ್ನಾಗಿ ಮಾಡಿದಂತಹ ಉದಾಹರಣೆ ರಾಜ್ಯದ, ದೇಶದ ಇತರೆ ಮುಖ್ಯಮಂತ್ರಿಗಳಲ್ಲಿ ಕಾಣಲು ಸಿಗುವುದಿಲ್ಲ. ಅದು ಅರಸು ಹೆಚ್ಚುಗಾರಿಕೆಯಾಗಿತ್ತು. ಇದೆಲ್ಲವನ್ನು ತುಂಬಾ ಸೂಕ್ಷ್ಮವಾಗಿ ಮಾಡಿ ಹೋಗಿದ್ದಾರೆ. ಅದೆಲ್ಲವನ್ನು ಇವತ್ತು ನಾವು ಅರ್ಥ ಮಾಡಿಕೊಂಡು ಕೆಳ ವರ್ಗದ ಹಿತ ಕಾಯುವ ನಿಟ್ಟಿನಲ್ಲಿ ನಿರಂತರವಾಗಿ ಕೆಲಸ ಮಾಡಬೇಕು
ಎಂದರು.

ಆದರೆ, ಸರ್ಪದ ಹುಣ್ಣಿಗೆ ಒಳಗಾಗಿ ಅರಸು ಹಾಸಿಗೆ ಹಿಡಿದಾಗ, ಅಧಿಕಾರ ಪಡೆದುಕೊಂಡಿದ್ದ ಮೇಲ್ವರ್ಗದ
ಶಾಸಕರ್ಯಾರು ಅವರ ಬಳಿ ಇರಲಿಲ್ಲ.. ಎನ್ನುವ ನೋವು ಅವರನ್ನು ಬಹುವಾಗಿ ಕಾಡಿತ್ತು. ಆಗ ತುಂಬಾ ಕಾಳಜಿ ತೋರಿದವರೆಂದರೆ ಕೆಳ ವರ್ಗದವರು ಅವರಿಂದ ಅಧಿಕಾರವನ್ನು ಪಡೆದವರು ಮಾತ್ರ. ಆದ್ದರಿಂದ ಕೆಳ ವರ್ಗದ ಜನರಲ್ಲಿ ನಿಯತ್ತಿನ ಕೊರತೆ ಇಲ್ಲ ಎನ್ನುವುದನ್ನು ಅರಸು ಅವರ ಜೀವನದ ಮುಖೇನ ನಾವು ಅರ್ಥ ಮಾಡಿಕೊಳ್ಳಬಹುದು ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ಗುವಿವಿ ಕುಲಪತಿ ಪ್ರೊ| ಎಸ್‌.ಆರ್‌. ನಿರಂಜನ್‌ ಮಾತನಾಡಿ, ಅರಸು ಅವರ ರಾಜಕೀಯ
ನಡೆಗಳಿಂದ ಯುವಕರು ಬಹಳಷ್ಟು ಕಲಿಯುವುದು ಇದೆ. ಸಂಶೋಧನೆ ಮತ್ತು ವಿಷಯ ತಜ್ಞತೆ ಹೊಂದುವವರು
ಅರಸು ಅಂತಹ ರಾಜಕಾರಣಿಗಳ, ಸಾಧಕರ ಕುರಿತು ಚೆನ್ನಾಗಿ ಓದಿಕೊಳ್ಳಬೇಕು. ಅರಸು ಅವರನ್ನು ಹತ್ತಿರದಿಂದ ಬಲ್ಲ
ಮತ್ತು ದೇವರಾಜ ಅರಸು, ಕೆಂಪರಾಜು ಅರಸು ಕುಟುಂಬದೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದ ಪೂರ್ಣಾನಂದ
ಅವರನ್ನು ಈ ಭಾಗಕ್ಕೆ ಪರಿಚಯ ಮಾಡಿಕೊಡಬೇಕು. ಅವರಿಂದ ಅರಸು ಕುರಿತು ಹೇಳಿಸಬೇಕು ಎನ್ನುವುದು ನನ್ನ ಆಸೆಯಾಗಿತ್ತು ಎಂದರು.

ಸಿಂಡಿಕೇಟ್‌ ಸದಸ್ಯರಾದ ಮಹ್ಮದ ವಾಹೇದ ಅಲಿ ಅತಿಥಿಯಾಗಿದ್ದರು. ಆಡಳಿತ ವಿಭಾಗದ ಕುಲಸಚಿವ
ಪ್ರೊ| ದಯಾನಂದ ಅಗಸರ, ಮೌಲ್ಯಮಾಪನ ಕುಲಸಚಿವ ಡಾ| ಸಿ.ಎಸ್‌. ಪಾಟೀಲ ಹಾಗೂ ದೇವರಾಜ ಅರಸು ಜನ್ಮ
ದಿನಾಚರಣೆ ಸಮಿತಿ ಸಂಚಾಲಕ ಪ್ರಕಾಶ ಎಂ. ಹದನೂರಕರ ಹಾಜರಿದ್ದರು.

ಸಂಚಾಲಕ ಪ್ರಕಾಶ ಹದನೂರಕರ ಸ್ವಾಗತಿಸಿದರು. ಪ್ರೊ| ಜಯಶ್ರೀ ದಂಡೆ ಅತಿಥಿಗಳನ್ನು ಪರಿಚಯಿಸಿದರು.
ಬಿ.ಎಂ. ರುದ್ರವಾಡಿ ನಿರೂಪಿಸಿ, ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next