ಕಾರವಾರ: ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಡಿ.ದೇವರಾಜ ಅರಸು ಅವರು ಭೂ ಸುಧಾರಣೆ, ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಹರಿಕಾರ ಎಂದು ಜಿಲ್ಲಾಧಿಕಾರಿ ಡಾ| ಹರೀಶಕುಮಾರ್ ಹೇಳಿದರು.
ಡಿಸಿ ಕಚೇರಿ ಸಭಾಭವನದಲ್ಲಿ ಮಂಗಳವಾರ ದೇವರಾಜ್ ಅರಸು 104 ನೇ ಜನ್ಮ ದಿನಾಚರಣೆ ಅತ್ಯಂತ ಸರಳವಾಗಿ ನಡೆಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತೀರಾ ಸಂಕಷ್ಟದಲ್ಲಿದ್ದ ಗೇಣಿಯನ್ನು ನಂಬಿ ಬದುಕುತ್ತಿದ್ದ ಲಕ್ಷಾಂತರ ಕುಟುಂಬಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ಭೂ ಸುಧಾರಣೆ ಜಾರಿಗೆ ತಂದು, ಉಳುವವನೇ ಭೂಮಿಯ ಒಡೆಯ ಕಲ್ಪನೆಗೆ ಕಾರಣಿಭೂತರಾದವರು ದೇವರಾಜ ಅರಸು. ದೀನ ದಲಿತರ, ಶೋಷಿತ ವರ್ಗದವರ ಏಳ್ಗೆಗಾಗಿ ಶ್ರಮಿಸಿದ ವ್ಯಕ್ತಿ ದೇವರಾಜ್ ಅರಸರು. ಮನುಷ್ಯರು ಒಳ್ಳೆಯ ದಾರಿಗೆ ಬರಬೇಕಾದರೆ ಮನೋಸ್ಥೈರ್ಯ ಒಳಗೊಂಡಿರಬೇಕು. ಸಮಾಜದಲ್ಲಿ ಇರುವ ವಿಘಟನೆ ಹೋಗುವುದೇ ಶಾಶ್ವತ ಬದಲಾವಣೆ. ವಿಘಟನೆ ಹೋಗಲಾಡಿಸಲು ಕಾರಣೀಕರ್ತರಾದವರು ಮತ್ತು ದೇವರಾಜು ಅರಸು ಸಮಾಜ ಸುಧಾರಣೆಯಲ್ಲಿ ಮುಂಚೂಣಿಯಲ್ಲಿದ್ದವರು ಎಂದರು.
ಭೂ ಸುಧಾರಣೆಯ ಹರಿಕಾರ, ಕ್ರಾಂತಿಕಾರಿ ನಾಯಕ, ಬಾಲ್ಯದಿಂದಲೇ, ನಾಯಕತ್ವ ಸ್ವಭಾವ ಹೊಂದಿದ್ದ, ಹಿಂದುಳಿದ ಸಮಾಜದ ಕಲ್ಯಾಣಕ್ಕೆ ಶ್ರಮಿಸಿದ ಹಾಗೂ ಅಸ್ಪ್ರಶ್ಯತೆ ನರಳುತ್ತಿದ್ದ ಜನರಿಗೆ ಬೆನ್ನಲುಬಾಗಿ ನಿಂತು, ಕೃಷಿ ಬ್ಯಾಂಕುಗಳ ಸ್ಥಾಪನೆಯಿಂದ, ಸುವರ್ಣ ಯುಗದ ರೂಪುರೇಷೆ ಹಾಕಿದ ದೇವರಾಜು ಅರಸರು ಮತ್ತೂಮ್ಮೆ ನಮ್ಮ ನಾಡಿನಲ್ಲಿ ಹುಟ್ಟಿ ಬರಲಿ ಎಂದು ಜಿಲ್ಲಾ ಪಂಚಾಯತ್ ಸಿಇಒ ಎಂ. ರೋಶನ್ ಹೇಳಿದರು.
ಸದ್ಭಾವನೆ ದಿನ ಅಂಗವಾಗಿ ಇದೇ ಸಂದರ್ಭದಲ್ಲಿ ಜಾತಿ ಧರ್ಮದ ಭೇದಭಾವವಿಲ್ಲದೆ, ಭಾರತದ ಎಲ್ಲ ಜನರ ಸೌಹಾರ್ದಕ್ಕಾಗಿ ಕಾರ್ಯನಿರ್ವಹಿಸುತ್ತೇವೆ ಎಂಬ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಬಸವರಾಜ ಬಡಿಗೇರ, ದೇವರಾಜ್ ಅರಸುರವರ ಜೀವನ ಶೈಲಿ ಹಾಗೂ ಬಡವರ ಬಗ್ಗೆ ಇದ್ದಂತಹ ಕಾಳಜಿ ಕುರಿತು ವಿವರಿಸಿದರು. ಕಾರವಾರ ನಗರಸಭೆ ಪೌರಾಯುಕ್ತ ಎಸ್. ಯೋಗೇಶ್ವರ ಉಪಸ್ಥಿತರಿದ್ದರು.