Advertisement

ಬಡವರಿಗೆ ದೇವರಾಜ ಅರಸು ಆಶಾಕಿರಣ

04:27 PM Aug 21, 2019 | Suhan S |

ಮಾಗಡಿ: ನಾಡಿನ ಶೋಷಿತರ ದೀನದಲಿತರ ಬಡವರ ಬಾಳಿನಲ್ಲಿ ಬೆಳಕು ತಂದ ಆಶಾಕಿರಣ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಸಾಂಸ್ಕೃತಿಕ ಮತ್ತು ವಿಚಾರ ವೇದಿಕೆ ಅಧ್ಯಕ್ಷ ಪಿ.ವಿ.ಸೀತಾರಾಂ ತಿಳಿಸಿದರು.

Advertisement

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ನಾಡಹಬ್ಬಗಳ ಸಮಿತಿ ವತಿಯಿಂದ ಮಂಗಳವಾರ ನಡೆದ 104ನೇ ದಿ.ಡಿ.ದೇವರಾಜ ಅರಸು ಜನ್ಮದಿನಾಚರಣೆ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಅವರು ಮಾತನಾಡಿ, ಮೈಸೂರು ಸಂಸ್ಥಾನಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ಮಹಾನ್‌ ನಾಯಕ. ಅವರು ಮಲಹೊರುವ ಪದ್ಧತಿ ನಿರ್ಮೂಲನೆ ಕಾಯ್ದೆ ಜಾರಿಗೆ ತಂದರು. ತಾಲೂಕಿನಲ್ಲಿ ಬಹುಸಂಖ್ಯಾತರಾಗಿರುವ ಹಿಂದುಳಿದ ವರ್ಗಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಯಾರು ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಸರ್ಕಾರ ಹಿಂದುಳಿದ ವರ್ಗಗಳ ಬಡವರಿಗೆ ವಸತಿ ನೀಡಬೇಕು. ಅರಸು ಕಂಡ ಆದರ್ಶಗಳನ್ನು ಈಡೇರಿಸಲು ಜನಪ್ರತಿನಿಧಿಗಳು, ಅಧಿಕಾರಿ ಶಕ್ತಿ ಮೀರಿ ಶ್ರಮಿಸಬೇಕು ಎಂದು ತಿಳಿಸಿದರು.

ಅರಸು ಆದರ್ಶ ಮೈಗೂಡಿಸಿಕೊಳ್ಳಿ: ತಾಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಎಚ್.ಶಿವರಾಜ್‌ ಮಾತನಾಡಿ, ದಿ.ಡಿ.ದೇವರಾಜ ಅರಸು ಅವರು ರಾಜಕಾರಣಿಗಳಲ್ಲಿ ಅತ್ಯಂತ ವಿಶಿಷ್ಟವಾದ ನಾಯಕ. ಅವರು ಕೊಟ್ಟಂತಹ ಯೋಜನೆಗಳು ಸಮಾಜದ ಉನ್ನತೀಕರಣಕ್ಕೆ ನಾಂದಿಯಾಗಿದೆ. ಅವರ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಧೀಮಂತ ನಾಯಕ: ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಸಿದ್ದೇಶ್ವರ್‌ ಮಾತನಾಡಿ, ಹಸಿವು ಮುಕ್ತ ಕರ್ನಾಟಕದ ಕನಸು ಕಂಡಂತ ಧೀಮಂತ ನಾಯಕ ದಿ.ಡಿ.ದೇವರಾಜ ಅರಸು. ಅವರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲರೂ ನಡೆಯಬೇಕು. ನವ ಕರ್ನಾಟಕವನ್ನು ಕಟ್ಟಬೇಕು ಎಂದು ಹೇಳಿದರು.

ವಿವಿಧ ಕ್ಷೇತ್ರದಲ್ಲಿ ಸಾಮಾಜಿಕ ಕ್ರಾಂತಿ: ತಾಪಂ ಮಾಜಿ ಸದಸ್ಯ ಹಾಗೂ ದಲಿತ ಮುಖಂಡ ಸಿ.ಜಯರಾಮ್‌ ಮಾತನಾಡಿ, ನಾಡಿಗೆ ಅರಸು ಅವರ ಕೊಡುಗೆ ಅಪಾರವಿದೆ. ವಿವಿಧ ಕ್ಷೇತ್ರದಲ್ಲಿ ತಮ್ಮದೇ ಆದ ರೀತಿಯಲ್ಲಿ ಸಾಮಾಜಿಕ ಕ್ರಾಂತಿಯನ್ನು ಮಾಡಿದ್ದಾರೆ. ಅವರ ಆದರ್ಶಗಳನ್ನು ಇಂದಿನ ರಾಜಕಾರಣಿಗಳು ಅಳವಡಿಸಿಕೊಂಡರೆ ದೇಶ ಇನ್ನೊಷ್ಟು ಪ್ರಗತಿಪಥದತ್ತ ಸಾಗುತ್ತದೆ ಎಂದು ತಿಳಿಸಿದರು.

Advertisement

ಬಿಸಿಎಂ ಅಧಿಕಾರಿ ನಾಗರಾಜು ಮಾತನಾಡಿದರು. ಪುರಸಭಾ ಮಾಜಿ ಸದಸ್ಯ ಎಂ.ಎನ್‌.ಮಂಜುನಾಥ್‌, ಸವಿತಾ ಸಮಾಜದ ಉಪಾಧ್ಯಕ್ಷ ಎಂ.ಮುನಿಕೃಷ್ಣ, ಮಡಿವಾಳ ಸಮಾಜದ ಕಾರ್ಯದರ್ಶಿ ಟಿ.ಎಂ.ಶ್ರೀನಿವಾಸ್‌, ಈಡಿಗ ಸಮಾಜದ ಸಂಚಾಲಕ ಎಂ.ಜಿ.ಗೋಪಾಲ್, ರೈತ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಬೆಳಗವಾಡಿ ರಂಗನಾಥ್‌, ಅರಸು ವೇದಿಕೆಯ ಕಾರ್ಯದರ್ಶಿ ದೊಡ್ಡಬಾಣಗೆರೆ ಮಾರಣ್ಣ, ತಾಪಂ ಕಾರ್ಯನಿರ್ವಹಕಾಧಿಕಾರಿ ಟಿ.ಪ್ರದೀಪ್‌, ಕಂದಾಯ ಇಲಾಖೆ ಉಪ ತಹಶೀಲ್ದಾರ್‌ ಕೆಂಪೇಗೌಡ, ಶಿರಸ್ತೆದಾರ್‌ ಜಗದೀಶ್‌, ಸರ್ವೆ ಇಲಾಖೆಯ ಎಡಿಎಲ್ಆರ್‌ ನಂಜುಂಡಪ್ಪ, ಆಹಾರ ಇಲಾಖೆಯ ಶ್ರೀಧರ್‌, ಆರೋಗ್ಯ ಇಲಾಖೆಯ ತುಕಾರಾಂ, ಉಪಖಜಾನೆಯ ಅಧಿಕಾರಿ ಲಕ್ಷ್ಮೀನಾರಾಯಣ, ಬಿಸಿಎಂ ಇಲಾಖೆಯ ಪರಮೇಶ್ವರ್‌, ನಾಗರಾಜಯ್ಯ, ರಾಕೇಶ್‌, ಸ್ವಾತಿ, ಇಂದಿರಾ, ಐಶ್ವರ್ಯ, ನಾಗೇಶ್‌, ಪೂರ್ಣಿಮಾ, ಜಯರಾಂ ಸೇರಿದಂತೆ ಅನೇಕರು ಶಿವಣ್ಣ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next