Advertisement

ಜಿಲ್ಲಾದ್ಯಂತ ಅರಸು ಜನ್ಮ ದಿನಾಚರಣೆ

03:51 PM Aug 21, 2019 | Suhan S |

ಕೋಲಾರ: ದಿವಂಗತ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಜನ್ಮ ಜಯಂತಿ ಪ್ರಯುಕ್ತ ಎಸ್‌ಎನ್‌ಆರ್‌ ಜಿಲ್ಲಾ ಸ್ಪತ್ರೆಯಲ್ಲಿ ಕಾಂಗ್ರೆಸ್‌ನಿಂದ ಹೆರಿಗೆಯಾದ ತಾಯಂದಿರಿಗೆ ಹಣ್ಣುಹಂಪಲು ವಿತರಿಸಲಾಯಿತು.

Advertisement

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಮಹನೀಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಕಾಂಗ್ರೆಸ್‌ ಮುಖಂಡರು, ಜಿಲ್ಲಾಸ್ಪತ್ರೆಗೆ ತೆರಳಿ ಹೆರಿಗೆ ವಾರ್ಡ್‌ನಲ್ಲಿದ್ದ ಬಾಣಂತಿಯರಿಗೆ ಹಾಗೂ ತಾಯಂದಿರಿಗೆ ಬ್ರೆಡ್‌, ಹಣ್ಣುಹಂಪಲು ವಿತರಿಸಿದರು.

ಮಾಜಿ ಸಚಿವ ನಿಸಾರ್‌ ಅಹಮದ್‌, ಹಿಂದುಳಿದ ವರ್ಗಗಳ ಘಟಕದ ಜಿಲ್ಲಾಧ್ಯಕ್ಷ ಅಶೋಕ್‌, ಜಿಲ್ಲಾ ಎಸ್‌ಸಿ ವಿಭಾಗದ ಅಧ್ಯಕ್ಷ ಕೆ.ಜಯದೇವ, ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರಸಾದಬಾಬು, ಕೆಪಿಸಿಸಿ ರಾಜ್ಯ ಸಂಚಾಲಕ ಎಚ್.ವಿ ಕುಮಾರ್‌, ಖಾದ್ರಿಪುರ ಬಾಬು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟಪತೆಪ್ಪ, ಕಿಲಾರಿಪೇಟೆ ಮಣಿ, ಪ್ಯಾರೇಜಾನ್‌ ಇದ್ದರು.

ಅಸಮಾನತೆ ಹೋಗಲಾಡಿಸಲು ದುಡಿದ ದಿವಂಗತ ದೇವರಾಜ ಅರಸು ಅವರು ಹಿಂದುಳಿದ ವರ್ಗಗಳ ನೇತಾರರಾಗಿದ್ದು, ಈ ನಾಡು ಕಂಡ ಸುಸಂಸ್ಕೃತ ರಾಜಕಾರಣಿ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಬಣ್ಣಿಸಿದರು.

ನಗರದ ಅರಸು ಭವನದಲ್ಲಿ ಜಿಲ್ಲಾಡಳಿತದಿಂದ ನಡೆದ ಜನ್ಮ ದಿನ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 28 ವರ್ಷ ಶಾಸಕರಾಗಿದ್ದ ಅರಸು, ಮುಖ್ಯಮಂತ್ರಿಯಾಗಿ ಸಲ್ಲಿಸಿದ ಸೇವೆ ಸ್ಮರಣೀಯ. ಅವರ ಅವಧಿಯಲ್ಲಿ ಸಾಮಾಜಿಕ ಬದಲಾವಣೆ ತರುವ ಮೂಲಕ ಬಡವರು, ಹಿಂದುಳಿದವರ ಮುನ್ನಡೆಗೆ ಶಿಕ್ಷಣ, ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಿದ್ದರು ಎಂದರು.

Advertisement

ಸಾಲ ಮನ್ನಾ ಮಾಡಿದ್ರು: ಉಳುವವನೆ ಭೂಮಿಯ ಒಡೆಯ, ಮೈಸೂರು ಭಾಗದಲ್ಲಿ ಜೀತ ಪದ್ಧತಿ ವಿಮುಕ್ತಿ, ಮಲಹೊರುವ ಪದ್ಧತಿಗೆ ಇತಿಶ್ರೀ ಸೇರಿ ಹಲವು ಕಾಯ್ದೆ ಜಾರಿಗೆ ತಂದಿದ್ದ ಅವರು, ಕೃಷಿ ಕ್ಷೇತ್ರಕ್ಕೂ ಹೆಚ್ಚಿನ ಆದ್ಯತೆ ನೀಡಿ, ಅಂದಿನ ದಿನದಲ್ಲೇ ಸಾಲಮನ್ನಾ ಮಾಡಿದ್ದರು ಎಂದು ತಿಳಿಸಿದರು.

ಅರಸು ಹಾದಿಯಲ್ಲಿ ನಡೆಯಿರಿ: ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ 60 ಹಾಸ್ಟೆಲ್ಗಳು ಹಾಗೂ ಅಲ್ಪಸಂಖ್ಯಾತರ 6 ಹಾಸ್ಟೆಲ್ಗಳಿದ್ದು ಎಲ್ಲ ಕಡೆಯೂ ಊಟ, ವಸತಿ ವ್ಯವಸ್ಥೆ ಉತ್ತಮವಾಗಿಯೇ ಇದೆ. ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದುಕೊಳ್ಳುವುದರ ಜತೆಗೆ ಅರಸು ಅವರ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ನೆರೆ ಹಿನ್ನೆಲೆಯಲ್ಲಿ ಸರಳ ಆಚರಣೆ: ರಾಜ್ಯದ 22 ಜಿಲ್ಲೆಗಳ 100ಕ್ಕೂ ಹೆಚ್ಚು ತಾಲೂಕುಗಳಲ್ಲಿ ನೆರೆ ಹಾವಳಿ ಹಿನ್ನೆಲೆಯಲ್ಲಿ ದಿ.ದೇವರಾಜ ಅರಸು ಜನ್ಮ ದಿನ ಸರಳವಾಗಿ ಆಚರಿಸಿ, ಅನುದಾನ ನೆರೆ ಸಂತ್ರಸ್ತರಿಗೆ ನೀಡಲು ಸಮ್ಮತಿಸಿರುವ ಹಿಂದುಳಿದ ವರ್ಗಗಳ ಒಕ್ಕೂಟದ ಮುಖಂಡರು, ಸ್ವಇಚ್ಛೆಯಿಂದ ತೀರ್ಮಾನ ಮಾಡಿದ್ದು ಶ್ಲಾಘನೀಯ ಎಂದು ತಿಳಿಸಿದರು.

ಇದೇ ವೇಳೆ ಅರಸು ಭವನದ ಆವರಣದಲ್ಲಿ ಜಿಲ್ಲಾಧಿಕಾರಿ ಸಸಿ ನೆಟ್ಟರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಣ್ಣ, ತಾಲೂಕು ಅಧಿಕಾರಿ ಮಂಜುಳಾ, ಹಿಂದುಳಿದ ವರ್ಗಗಳ ಒಕ್ಕೂಟದ ಮುಖಂಡರಾದ ಕಲಾವಿದ ವಿಷ್ಣು, ಫಲ್ಗುಣ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next