ಬಂಗಾರಪೇಟೆ: ಹಿಂದುಳಿದ ವರ್ಗಗಳ ಆಶಾಕಿರಣ ದಿ.ಡಿ.ದೇವರಾಜ ಅರಸು ನಂತರ ಸ್ಥಾನವನ್ನು ತುಂಬಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೂಮ್ಮೆ ಮುಖ್ಯಮಂತ್ರಿ ಆಗಬೇಕೆಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ಬಿಸಿಎಂ ಬಾಲಕಿಯರ ವಸತಿ ನಿಲಯದಲ್ಲಿ ತಾಲೂಕು ಹಿಂದುಳಿದ ವರ್ಗಗಳ ಒಕ್ಕೂಟ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಜಯಂತಿ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು.
ದೇವರಾಜು ಅರಸು ಎಲ್ಲಾ ಹಿಂದುಳಿದ ವರ್ಗದ ಜನರ ಬಾಳಿಗೆ ಹೊಸ ಬೆಳಕು ನೀಡಿದ ಧೀಮಂತ ನಾಯಕ. ಅವರ ಬಳಿಕ ಆ ಸ್ಥಾನವನ್ನು ಮಾಜಿ ಸಿಎಂ ಸಿದ್ದರಾಮಯ್ಯ ತುಂಬಿ, ಹತ್ತಾರು ಭಾಗ್ಯಗಳ ಸಾಲು ಯೋಜನೆಗಳನ್ನು ನೀಡಿ, ಬಡವರ ಆರ್ಥಿಕ ಚೇತರಿಕೆಗೆ ಶ್ರಮಿಸಿದರು. ಇಂತಹ ವ್ಯಕ್ತಿಯನ್ನು ರಾಜ್ಯದ ಜನರು ಮತ್ತೆ ಸಿಎಂ ಆಗಿ ನೋಡಲು ಬಯಸಿದ್ದು, ನಾನೂ ಅವರನ್ನು ಉನ್ನತ ಹುದ್ದೆಯಲ್ಲಿ ಕಾಣಲು ಬಯಸುವೆ ಎಂದು ತಮ್ಮ ಅಭಿಲಾಷೆ ವ್ಯಕ್ತಪಡಿಸಿದರು.
ದಕ್ಷ ಆಡಳಿತಗಾರ: ಉಳುಮೆ ಮಾಡುವವರೇ ಭೂ ಒಡೆಯ ಎಂಬ ಕಾನೂನು ಜಾರಿಗೆ ತಂದು ಭೂಮಿ ವಂಚಿತ ಬಡವರಿಗೂ ಸ್ವಂತ ಜಮೀನು ಮಾಲಿಕತ್ವ ಹೊಂದುವ ಭಾಗ್ಯ ತಂದಿದ್ದು ಅರಸು. ಅವರ ಆಡಳಿತದಲ್ಲಿ ದೇಶವೇ ರಾಜ್ಯದ ಕಡೆ ತಿರುಗಿ ನೋಡುವಂತೆ ದಕ್ಷ ಆಡಳಿತ ನೀಡಿದರು. ಅರಸು ರಾಜಕೀಯ ಶಕ್ತಿ ಎಷ್ಟಿತ್ತೆಂದರೆ ಮಾಜಿ ಪ್ರಧಾನಿ ಇಂದಿರಾಗಾಂಧಿಗೆ ರಾಜಕೀಯವಾಗಿ ಪುನರ್‌ಜನ್ಮ ನೀಡಿದರು ಎಂದು ವಿವರಿಸಿದರು.
ಹಿಂದುಳಿದವರ ಅಭಿವೃದ್ಧಿಗೆ ಶ್ರಮ: ಎಲ್ಲಾ ಸಮು ದಾಯಗಳನ್ನು ಒಂದುಗೂಡಿಸಿಕೊಂಡು, ಎಲ್ಲರಿಗೂ ಸಾಮಾಜಿಕ ನ್ಯಾಯಕೊಟ್ಟು ಉತ್ತಮ ಆಡಳಿತ ನೀಡುವ ಶಕ್ತಿ ಕೇವಲ ಸಿದ್ದರಾಮಯ್ಯಗೆ ಮಾತ್ರ ಇದೆ. ಅರಸು ರಾಜಕೀಯ ಮಾರ್ಗದರ್ಶನದಲ್ಲಿ ನಡೆದ, ಅವರಂತೆ ಎಲ್ಲಾ ಹಿಂದುಳಿದ ಸಮುದಾಯ ಗಳ ಅಭಿವೃದ್ಧಿಗೆ ಶ್ರಮಿಸಲು ಮುಂದಾಗುವೆ ಎಂದು ಭರವಸೆ ನೀಡಿದರು.
ಪಟ್ಟಣದಲ್ಲಿ ದೇವರಾಜ ಅರಸು ಅವರ ಕಂಚಿನ ಪ್ರತಿಮೆ ಸ್ಥಾಪಿಸಬೇಕು. ಅರಸು ಹೆಸರನ್ನು ಮುಖ್ಯ ರಸ್ತೆಯೊಂದಕ್ಕೆ ನಾಮಕರಣ ಮಾಡ ಬೇಕೆಂದು ಒಕ್ಕೂಟದ ಅಧ್ಯಕ್ಷ ಕುಂಬಾರಪಾಳ್ಯ ಮಂಜುನಾಥ್ ಶಾಸಕರಿಗೆ ಮನವಿ ಪತ್ರ ನೀಡಿದರು. ಒಕ್ಕೂಟದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ಮುಖ್ಯ ಭಾಷಣಕಾರರಾಗಿ ಉಪನ್ಯಾಸಕ ನಾಗರಾಜ್, ತಾಪಂ ಇಒ ವೆಂಕಟೇಶಪ್ಪ, ಡಿಸಿಸಿ ಬ್ಯಾಂಕಿನ ನಿರ್ದೇಶಕ ಪಿಚ್ಚಹಳ್ಳಿ ಗೋವಿಂದರಾಜುಲು, ಹಿಂದುಳಿದ ವರ್ಗಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಕುಂಬಾರಪಾಳ್ಯ ಮಂಜುನಾಥ್, ಗೌರವಾಧ್ಯಕ್ಷ ಎಲ್.ರಾಮಕೃಷ್ಣ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸಿ.ಅಯ್ಯಪ್ಪಗೌಡ, ಕಾರಹಳ್ಳಿ ಚಿನ್ನಿವೆಂಕಟೇಶ್, ಬಿಸಿಎಂ ಇಲಾಖೆ ಅಧಿಕಾರಿ ಶ್ರೀನಿವಾಸ್, ಕಾರಹಳ್ಳಿ ಗ್ರಾಪಂ ಉಪಾಧ್ಯಕ್ಷ ಶ್ರೀನಿವಾಸ್ ಮುಂತಾದವರಿದ್ದರು.