Advertisement

ದೇವರಗುಂಡಿ ರಸ್ತೆ ಹೊಂಡಮಯ

04:25 PM Dec 16, 2019 | Team Udayavani |

ಕುಮಟಾ: ತಾಲೂಕಿನ ದೇವರಗುಂಡಿ ರಸ್ತೆ ಕಳೆದ ಹಲವು ವರ್ಷಗಳಿಂದ ಸಂಪೂರ್ಣ ಹದಗೆಟ್ಟಿದ್ದು, ಇದರಿಂದ ವಾಹನ ಸವಾರರಿಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ.

Advertisement

ಕುಮಟಾದಿಂದ ಹೊನ್ನಾವರಕ್ಕೆ ಸಾಗುವ ಮಾರ್ಗದಲ್ಲಿನ ಅಳ್ವೆಕೋಡಿ ಭಾಗದಿಂದ ದೇವರಗುಂಡಿಗೆ ಹೋಗುವ ರಸ್ತೆ ಕಳೆದ ಅನೇಕ ವರ್ಷಗಳ ಹಿಂದೆ ಡಾಂಬರೀಕರಣಗೊಳಿಸಲಾಗಿತ್ತು. ಆದರೆ ಕಳೆದ 10-15 ವರ್ಷಗಳಿಂದ ಈ ರಸ್ತೆ ಸುಧಾರಣೆ ಕಾಣದೇ ಈ ಭಾಗದ ಜನರ ಓಡಾಟಕ್ಕೆ ತೀವ್ರ ಸಂಕಷ್ಟ ತಂದೊಡ್ಡಿದೆ. ನಿರ್ವಹಣೆ ಇಲ್ಲದೇ ಸೊರಗಿರುವ ಈ ಡಾಂಬರ್‌ ರಸ್ತೆ ಸಂಪೂರ್ಣವಾಗಿ ಕಿತ್ತು ಹೋಗಿ ಗುಂಡಿಗಳು ನಿರ್ಮಾಣಗೊಂಡಿವೆ.

ತಾಲೂಕಿನ ಊರಕೇರಿ, ಕಲಭಾಗ ಸೇರಿದಂತೆ ಇನ್ನೂ ಹಲವು ಹಳ್ಳಿಗಳಿಗೆ ಈ ರಸ್ತೆ ತುಂಬಾ ಉಪಯುಕ್ತ ಒಳ ರಸ್ತೆಯಾಗಿದೆ. ಪ್ರತಿನಿತ್ಯ ನೂರಾರು ಜನರು, ವಾಹನಗಳು ಇಲ್ಲಿ ಓಡಾಡುತ್ತವೆ. ಕೇವಲ ಒಂದೆರಡು ಕಿ.ಮೀ ಈ ರಸ್ತೆಯಲ್ಲಿ ಹೋಗಿ ಬರುವುದು ಸಂಕಟ ಅನುಭವಿಸುವಂತಾಗಿದೆ. ರಸ್ತೆಯ ಓಡಾಟ ದುಸ್ಥರವಾಗಿರುವುದರಿಂದ ಈ ಭಾಗದ ಜನರು ರೋಸಿ ಹೋಗಿದ್ದಾರೆ.

ಜಿಲ್ಲಾ ಪಂಚಾಯತ್‌ ಇಂಜಿನಿಯರಿಂಗ್‌ ವಿಭಾಗಕ್ಕೆ ಸೇರಿರುವ ಈ ರಸ್ತೆ ನಿರ್ವಹಣೆಗೆ ಕಳೆದ ಅನೇಕ ವರ್ಷಗಳಿಂದ ಈ ಭಾಗದ ಜನರು ಮನವಿ ಸಲ್ಲಿಸುತ್ತ ಬಂದಿದ್ದಾರೆ. ತಾಲೂಕಿನಾದ್ಯಂತ ತೀರ ಹದಗೆಟ್ಟಿರುವ ರಸ್ತೆಗಳಲ್ಲೊಂದಾದ ದೇವರಗುಂಡಿ ರಸ್ತೆ ದುರಸ್ತಿಗಾಗಿ ಅಧಿಕಾರಿಗಳು ಪ್ರಾಶಸ್ತ್ಯದ ಮೂಲಕ ಪ್ರಾಧಾನ್ಯತೆ ನೀಡದಿರುವುದು ಅಧಿಕಾರಿಗಳ ಅಭಿವೃದ್ಧಿ ಕಲ್ಪನೆಗೆ ಹಿಡಿದ ಕೈಗನ್ನಡಿಯಾಗಿದೆ. ಅಭಿವೃದ್ಧಿ ಕಾಮಗಾರಿಗಳ ಯೋಜನೆಗೆ ಸರಕಾರ ಹಣ ಬಿಡುಗಡೆಗೊಳಿಸಿದರೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಇಂತಹ ಕಾಮಗಾರಿಗಳು ಮರೀಚಿಕೆಯಾಗಿವೆ. ಸಧ್ಯದಲ್ಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ತಾಲೂಕಿಗೆ ಮಂಜೂರಿಯಾದ ಕೋಟಿಗಟ್ಟಲೇ ಹಣದಲ್ಲಿ ಈ ರಸ್ತೆಯ ಕಾಮಗಾರಿಯನ್ನು ತಕ್ಷಣ ಕೈಗೆತ್ತಿಕೊಂಡು ಸಂಪೂರ್ಣ ದುರಸ್ತಿಗೊಳಿಸಬೇಕೆಂಬುದು ಈ ಭಾಗದ ಜನರ ಆಗ್ರಹವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next