ಅಫಜಲಪುರ: ತಾಲೂಕಿನಿಂದ ಸಿಂದಗಿ ತಾಲೂಕು, ವಿಜಯಪುರ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಸೊನ್ನ ದೇವಣಗಾಂವ ಗ್ರಾಮಗಳ ಮಧ್ಯ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ರೀಜ್ ಬಿರುಕು ಬಿಟ್ಟು ಅಪಾಯದ ಹಂತದಲ್ಲಿದೆ.
ಪ್ರತಿ ವರ್ಷ ಪ್ರವಾಹ ಬಂದಾಗ ಬ್ರೀಜ್ ಹಾನಿಗೀಡಾಗುತ್ತಿದೆ. ದೇವಣಗಾಂವ ಬ್ರೀಜ್ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಅನೇಕ ಕಡೆ ಬ್ರೀಜ್ ಗೋಡೆಯಲ್ಲಿ ಗಿಡಗಳು ಬೆಳೆದಿವೆ. ಗಿಡಗಳ ಬೇರು ದೊಡ್ಡದಾದಂತೆ ಬಿರುಕು ಹೆಚ್ಚಾಗುತ್ತಿದೆ. ಹೀಗಾಗಿ ಬ್ರೀಜ್ ದುರಸ್ತಿಗೊಳಿಸುವ ತುರ್ತು ಅಗತ್ಯವಿದೆ. ಇಲ್ಲದಿದ್ದರೆ ಭಾರಿ ಪ್ರಮಾಣದ ಬೆಲೆ ತೆರಬೇಕಾಗುತ್ತದೆ. ಗೇಟ್‌ಗಳ ಸಮಸ್ಯೆಯಿಂದ ಹೆಚ್ಚಾಯ್ತು
ನೆರೆ ಹಾವಳಿ: ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದ ಅಲ್ಲಿನ ಬ್ಯಾರೇಜ್‌ಗಳು ಭರ್ತಿಯಾಗಿ ಹೆಚ್ಚಾದ ನೀರನ್ನು ಭೀಮಾನದಿಗೆ ಹರಿಬಿಡಲಾಗಿತ್ತು. ಭೀಮಾ ನದಿಗೆ ಹರಿದು ಬಂದ ನೀರು ಅಫಜಲಪುರತಾಲೂಕಿನಾದ್ಯಂತ ಮಹಾ ಪ್ರವಾಹವನ್ನೆ ಸೃಷ್ಟಿಸಿದೆ. ಆದರೆ ಈ “ಮಹಾ’ ಪ್ರವಾಹಕ್ಕೆಕಾರಣ ನೀರು ಬಿಟ್ಟಿದ್ದಲ್ಲ. ಬದಲಾಗಿ ಸೊನ್ನ ಬ್ಯಾರೇಜ್‌ನ 6 ಗೇಟ್‌ಗಳು ತುಕ್ಕು ಹಿಡಿದಿದ್ದು, ಪ್ರವಾಹದ ನೀರು ಬಂದಾಗ ಗೇಟ್‌ಗಳು ಮೇಲೆತ್ತಲಾಗದೆ ನೀರು ಸರಾಗವಾಗಿ ಹರಿದು ಹೋಗದೆ ಹಿನ್ನೀರಾಗಿಸರಿದು ನಿಂತು ಗ್ರಾಮಗಳಿಗೆ ನುಗ್ಗಿದೆ.
ಅಲ್ಲದೆ ಸೊನ್ನ ಬ್ಯಾರೇಜ್ ಕೆಳಗಿನ ಘತ್ತರಗಿ, ದೇವಲ ಗಾಣಗಾಪುರ ಮತ್ತು ಚಿನಮಳ್ಳಿ ಗ್ರಾಮಗಳಲ್ಲಿರುವ ಬ್ರೀಜ್ ಕಂ ಬ್ಯಾರೇಜ್ ಗಳ ಗೇಟ್‌ಗಳನ್ನು ಸಹ ಪ್ರವಾಹದ ಸಂದರ್ಭದಲ್ಲಿ ಎತ್ತಿಲ್ಲ. ಹೀಗಾಗಿ ಹಿನ್ನೀರು ಹೊಲ ಗದ್ದೆಗಳಲ್ಲಿ ನುಗ್ಗಿ ಸಾವಿರಾರು ಎಕರೆ ಬೆಳೆ ಹಾನಿಯಾಗಿದೆ. ಗ್ರಾಮಗಳಿಗೆ ನೀರು ನುಗ್ಗಿ ಆಸ್ತಿ-ಪಾಸ್ತಿ ಹಾನಿಯಾಗಿವೆ. ಜನರು ಮನೆ ಬಿಟ್ಟು ಸಂತ್ರಸ್ತರಾಗುವಂತಾಗಿದೆ.
ತುಕ್ಕು ಹಿಡಿದು ವರ್ಷಗಳಾದರೂ ದುರಸ್ತಿ ಇಲ್ಲ: ತಾಲೂಕಿನ ದೊಡ್ಡ ನೀರಾವರಿ ಯೋಜನೆಯಾಗಿರುವ ಸೊನ್ನ ಬ್ಯಾರೇಜ್ ನ 29 ಗೇಟ್‌ಗಳ ಪೈಕಿ 6 ಗೇಟ್ ಗಳು ತುಕ್ಕು ಹಿಡಿದಿವೆ. ಕಳೆದ ವರ್ಷ ಪ್ರವಾಹ ಬಂದಾಗಲೂ ಈ ಗೇಟ್‌ಗಳು ಮೇಲೆತ್ತಲಾಗದೆ ಸಮಸ್ಯೆಯಾಗಿತ್ತು. ಈ ವರ್ಷವಂತು ಸಮಸ್ಯೆ ತುಸು ಹೆಚ್ಚೆಆಗಿದೆ. ತುಕ್ಕು ಹಿಡಿದ ಗೇಟ್‌ಗಳು ಮೇಲೆತ್ತಲಾಗುತ್ತಿಲ್ಲ. ಇದರಿಂದಾಗಿ ಪ್ರವಾಹದ ನೀರು ಹೊರ ಬಿಡಲಾಗದೆ ನೀರು ಅಪಾರ ಪ್ರಮಾಣದಲ್ಲಿ ನಿಂತು ಹೊಲ ಗದ್ದೆ, ಊರು-ಕೆರಿಗಳಿಗೆ ನುಗ್ಗುವಂತಾಗುತ್ತಿದೆ. ಈಗಲಾದರೂ ತುಕ್ಕು ಹಿಡಿದ ಗೇಟ್‌ಗಳನ್ನುದುರಸ್ತಿ ಮಾಡದಿದ್ದರೆ ಮುಂದಿನ ವರ್ಷ ಮತ್ತಷ್ಟು ಹಾನಿಯಾಗುವುದು ಪಕ್ಕಾ.
ತಾಲೂಕಿನ ದೊಡ್ಡ ನೀರಾವರಿ ಯೋಜನೆಯಾದ ಸೊನ್ನ ಬ್ಯಾರೇಜ್‌ನ ಗೇಟ್‌ಗಳಿಗೆ ಸಮಸ್ಯೆಯಾಗದಂತೆ ದುರಸ್ತಿ ಮಾಡಬೇಕು. ಈಗಾಗಲೇ ನೆರೆಯಿಂದಾದ ಹಾನಿಯನ್ನು ಸರ್ಕಾರ ಭರಿಸಬೇಕು. ಮುಂದೆ ಸಮಸ್ಯೆಯಾಗದಂತೆ ವ್ಯವಸ್ಥೆ ಮಾಡಿಕೊಳ್ಳಬೇಕು.
-ರಾಜೇಂದ್ರ ಪಾಟೀಲ್, ಕಾಂಗ್ರೆಸ್ ಮುಖಂಡ
ಬ್ಯಾರೇಜ್‌ನ 6 ಗೇಟ್‌ಗಳುಎತ್ತಲಾಗುತ್ತಿಲ್ಲ. ಹೀಗಾಗಿಪ್ರವಾಹದ ನೀರು ಹೊರ ಬಿಡುವಾಗ ಸ್ವಲ್ಪ ಸಮಸ್ಯೆಯಾಗಿದೆ. ಪ್ರವಾಹ ಇಳಿದ ಮೇಲೆ ಮೊದಲು ಗೇಟ್‌ಗಳನ್ನು ದುರಸ್ತಿ ಮಾಡಲಾಗುತ್ತದೆ. ಮುಂದಿನ ಸಲ ಈ ಸಮಸ್ಯೆ ಕಾಡುವುದಿಲ್ಲ.
-ಅಶೋಕ ಕಲಾಲ್, ಕೆಎನ್‌ಎನ್‌ಎಲ್ ಎಇಇ
-ಮಲ್ಲಿಕಾರ್ಜುನ ಹಿರೇಮಠ