ದೇವನಹಳ್ಳಿ: ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೊದಲ ಅವಧಿಯು ಮುಗಿದು ಐದಾರು ತಿಂಗಳಾದರೂ ಎರಡನೇ ಅವಧಿಗೆ ಮೀಸಲಾತಿ ಪ್ರಕಟಿಸಲು ರಾಜ್ಯ ಸರ್ಕಾರ ಮುಂದಾಗದ ಕಾರಣ ಪಟ್ಟಣದ ಅಭಿವೃದ್ಧಿಗೆ ತೊಡಕಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 5 ತಿಂಗಳಾಗಿದೆ.
ಆದರೂ, ಎರಡನೇ ಅವಧಿಗೆ ಮೀಸಲಾತಿ ಪ್ರಕಟವಾಗಿಲ್ಲ. ಪಟ್ಟಣದ ಅಭಿವೃದ್ಧಿಗೆ ಪೂರಕವಾದ ಯಾವುದೇ ಕ್ರಮಗಳು ಅಧಿಕಾರಿಗಳು ಕೈಗೊಳ್ಳುತ್ತಿಲ್ಲ ಇದರಿಂದ ಪಟ್ಟಣದ ಅಭಿವೃದ್ಧಿಗೆ ಸಾಕಷ್ಟು ಹಿಂದುಳಿಯುತ್ತಿದೆ. ಪುರಸಭೆಗೆ ಮೊದಲ ಅವಧಿಗೆ ಹಿಂದುಳಿದ ವರ್ಗ ಎ ಮಹಿಳೆ ಹಾಗೂ ಉಪಾಧ್ಯಕ್ಷ ಸಾಮಾನ್ಯ ಮಹಿಳೆ ಮೀಸಲಾಗಿತ್ತು. ದೇವನಹಳ್ಳಿ ಪುರಸಭೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಯಲ್ಲಿ ಅಧಿಕಾರ ಮಾಡಿದೆ. ಮೇ 5ಕ್ಕೆ ಪುರಸಭೆಯ ಮೊದಲ ಅವಧಿಯ ಆಡಳಿತ ಮಂಡಳಿ ಅಂತ್ಯಗೊಂಡಿದ್ದು, ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಇಲ್ಲದಿರುವುದರಿಂದ ಯಾವುದೇ ಗಮನಾರ್ಹ ಕೆಲಸಗಳು ಪಟ್ಟಣದಲ್ಲಿ ಆಗುತ್ತಿಲ್ಲ. ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿಯನ್ನು ಸರ್ಕಾರ ಆಡಳಿತ ಅಧಿಕಾರಿಯಾಗಿ ನೇಮಿಸಿದ್ದಾರೆ.
ದೇವನಹಳ್ಳಿ ಪುರಸಭೆಯಲ್ಲಿ 23 ಸದಸ್ಯ ಸ್ಥಾನ ಹೊಂದಿದ್ದು, ಅದರಲ್ಲಿ ಕಾಂಗ್ರೆಸ್ 10, ಜೆಡಿಎಸ್ 7, ಪಕ್ಷೇತರರು 3, ಬಿಜೆಪಿ2, ಬಿ ಎಸ್ ಪಿ 1 ಸ್ಥಾನಗಳನ್ನು ಗೆದ್ದಿದ್ದವು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಯ ಇಬ್ಬರು , ಹಾಗೂ ಬಿಎಸ್‌ಪಿಯ ಒಂದು ಇಬ್ಬರು ಪಕ್ಷೇತರರು ಕಾಂಗ್ರೆಸ್ಸಿಗೆ ನಿಲುವು ತೋರಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ 13 ಸ್ಥಾನಗಳು ಬೇಕಿದೆ. ಕಳೆದೈದು ವರ್ಷದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳನ್ನು ನಡೆಸಿದ್ದರು. ಮೊದಲ ಅವಧಿಯಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ ಜೆಡಿಎಸ್ ಉಪಾಧ್ಯಕ್ಷರಾಗಿದ್ದರು. 15 ತಿಂಗಳ ಅವಧಿಗೆ ಜೆಡಿಎಸ್ಸಿಗೆ ಅಧ್ಯಕ್ಷ ಸ್ಥಾನ ಹಾಗೂ ಕಾಂಗ್ರೆಸ್ಸಿಗೆ ಉಪಾಧ್ಯಕ್ಷ ಸ್ಥಾನ ನೀಡಲಾಗಿತ್ತು. ಕೋರ್ಟ್‌ನಲ್ಲಿ ವಿವಿಧ ಪುರಸಭೆಗಳು ಮೀಸಲಾತಿ ವಿಚಾರವಾಗಿ ನ್ಯಾಯಾಲಯದಲ್ಲಿ ಪ್ರಕರಣವಿದ್ದು, ಈ ಪ್ರಕರಣವನ್ನು ಕೂಡಲೇ ಇತ್ಯರ್ಥ ಪಡಿಸಿ. ಸ್ಥಳೀಯ ಸಂಸ್ಥೆಗಳಿಗೆ ತುರ್ತಾಗಿ ಚುನಾವಣೆ ನಡೆಸಿ ಅಧ್ಯಕ್ಷ ಉಪಾಧ್ಯಕ್ಷರನ್ನು ನೇಮಕ ಮಾಡುವ ಮೂಲಕ ಪಟ್ಟಣ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. ಚುನಾಯಿತ ಜನಪ್ರತಿನಿಧಿಗಳು ಆಡಳಿತ ಇಲ್ಲದ ಕಾರಣ ಪುರಸಭೆಗಳಲ್ಲಿ ತಮ್ಮ ಕೆಲಸ ಕಾರ್ಯಗಳಾಗದೆ ಸಾರ್ವಜನಿಕರು ಪರದಾಡುತ್ತಿದ್ದು. ಪಪಂ ಅಧಿಕಾರವೆಲ್ಲವೂ ಅಧಿಕಾರಿಗಳು ಹಿಡಿತಕ್ಕೆ ಸಿಲುಕಿದ್ದು ಸಾರ್ವಜನಿಕರ ಅಹವಾಲುಗಳನ್ನು ಪರಿಹರಿಸಲು ಕಷ್ಟಸಾಧ್ಯವಾಗಿದೆ. ಪಟ್ಟಣದ ಅಭಿವೃದ್ಧಿಗೆ ಪೂರಕವಾದ ಯಾವುದೇ ಕ್ರಮಗಳು ಅಧಿಕಾರಿಗಳು ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಈ ಬಾರಿ ಅಧ್ಯಕ್ಷ ಸ್ಥಾನ ಯಾವ ಮೀಸಲಾತಿ ಬರುತ್ತದೆ ಎಂದು ಹಲವಾರು ಆಕಾಂಕ್ಷಿಗಳು ಕಾತುರದಿಂದ ಕಾಯುತ್ತಿದ್ದಾರೆ. ಕೊಟ್ಟರೆಯಾಗಿ ಸರ್ಕಾರ ಅಧ್ಯಕ್ಷ ಹಾಗು ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲಾತಿ ನಿಗದಿ ಮಾಡಲು ಮುಂದಾಗದಿ ರುವುದರಿಂದ ಅಧಿಕಾರಿಗಳಿಂದ ದರ್ಬಾರ್ ಆಗಿದೆ. ಉಪ ವಿಭಾಗಾಧಿಕಾರಿ ಪುರಸಭೆಯ ಆಡಳಿತ ಅಧಿಕಾರಿಯಾಗಿದ್ದು. ಆದರೆ ಅವರಿಗೆ ಇರುವ ಕಾರ್ಯಒತ್ತಡದಲ್ಲಿ ಪುರಸಭೆ ಕಡೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಸರ್ಕಾರ ಕೂಡಲೇ ಪುರಸಭೆಗೆ ಮೀಸಲಾತಿಯನ್ನು ನಿಗದಿ ಮಾಡಲು ಮುಂದಾಗಬೇಕು. ಪಟ್ಟಣದಲ್ಲಿರುವ ಸಮಸ್ಯೆಗಳ ಕುರಿತು ಈಗಾಗಲೇ ಎರಡು ಮೂರು ಸಭೆ ನಡೆಸಲಾಗಿದೆ.
ಪಟ್ಟಣದ ಅಭಿವೃದ್ಧಿಗೆ ಆಗಬೇಕಾಗಿರುವ ಕೆಲಸಗಳ ಬಗ್ಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತಿದೆ.
– ಶ್ರೀನಿವಾಸ್, ಪುರಸಭೆ ಆಡಳಿತ ಅಧಿಕಾರಿ
ಸರ್ಕಾರ ಕೂಡಲೇ ಪುರಸಭಾಧ್ಯಕ್ಷರು ಹಾಗೂ ಉಪಾಧ್ಯಕ್ಷರ ಮೀಸಲಾತಿ ನಿಗದಿ ಮಾಡಲು ಕ್ರಮ ಕೈಗೊಳ್ಳಬೇಕು. ಅಧ್ಯಕ್ಷರು ಉಪಾಧ್ಯಕ್ಷರ ಮೀಸಲಾತಿ ಬರುವುದರಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಪಟ್ಟಣದಲ್ಲಿ ಆಗುತ್ತದೆ. ಇಲ್ಲದಿದ್ದರೆ ಅಭಿವೃದ್ಧಿ ಕುಂಠಿತವಾಗುತ್ತದೆ.
● ಜಿ.ಎ.ರವೀಂದ್ರ ಪುರಸಭಾ ಸದಸ್ಯರು
– ಎಸ್ .ಮಹೇಶ್