Advertisement

Devanahalli: ಜಿಪಂ, ತಾಪಂನಲ್ಲಿ ಮಹಿಳೆಯರ ದರ್ಬಾರ್‌

01:03 PM Jan 01, 2024 | Team Udayavani |

ದೇವನಹಳ್ಳಿ: ಜಿಪಂ- ತಾಪಂ ಚುನಾಯಿತ ಸದಸ್ಯ ಸ್ಥಾನಗಳಿಗೆ ಮೀಸಲು ನಿಗದಿಪಡಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಬೆಂ. ಗ್ರಾಮಾಂತರ ಜಿಪಂನ 25 ಕ್ಷೇತ್ರಗಳ ಪೈಕಿ 13 ಹಾಗೂ ತಾಪಂ 72 ಕ್ಷೇತ್ರಗಳ ಪೈಕಿ 37 ಸ್ಥಾನಗಳು ಮಹಿಳೆಯರಿಗೆ ಮೀಸಲಿಸಿದಿ ಆದೇಶ ಹೊರಡಿಸಿದೆ.

Advertisement

ಜಿಪಂ-ತಾಪಂ ಚುನಾಯಿತ ಸದಸ್ಯರ ಕ್ಷೇತ್ರಗಳ ಸೀಮಾ ಗಡಿ ಹಾಗೂ ಚುನಾಯಿತರಾಗಬೇಕಾದ ಸದಸ್ಯರ ಸಂಖ್ಯೆಯನ್ನು ನಿರ್ಧರಿಸಿ ಆಯೋಗ ಶಿಫಾರಸು ಮಾಡಿರುವ ವರದಿಯನ್ನು ಅಂಗೀಕರಿಸಿರುವ ರಾಜ್ಯ ಸರ್ಕಾರ ಮೀಸಲು ನಿಗದಿಪಡಿಸಿ ಈ ಅಧಿಸೂಚನೆ ಹೊರಡಿಸಿದೆ. ಸದ್ಯ ಜಿಪಂ- ತಾಪಂ ಕ್ಷೇತ್ರಗಳ ಮೀಸಲು ನಿಗದಿಪಡಿಸಿರುವ ಸರ್ಕಾರ ಅಂತಿಮ ಆದೇಶ ಹೊರಡಿ ಸಿದೆ.

ಇತ್ತೀಚೆಗೆ ಶೀಘ್ರ ಚುನಾವಣೆ ನಡೆಸುವ ಸಂಬಂಧ ಹೈಕೋರ್ಟಿಗೆ ಭರವಸೆ ನೀಡಿರುವ ಬೆನ್ನಲ್ಲೇ ರಾಜ್ಯದಲ್ಲಿ ಜಿಪಂ- ತಾಪಂ ಕ್ಷೇತ್ರ ಚುನಾವಣೆ ಶೀಘ್ರ ನಡೆಯುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಗೆ ಪಕ್ಷಗಳು ಸಿದ್ಧವಾಗಿವೆ. ಇದರ ನಡುವೆ ಜಿಪಂ- ತಾಪಂ ಕ್ಷೇತ್ರಗಳಿಗೆ ಸರ್ಕಾರ ಮೀಸಲು ನಿಗದಿಪಡಿಸಿರುವುದು ಆಕಾಂಕ್ಷಿಗಳ ನಿದ್ದೆಗೆಡಿಸಿದೆ.

ಬೆಂ. ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸೀಮಾ ನಿರ್ಣಯದ ಅನ್ವಯ ಜಿಲ್ಲೆಯಲ್ಲಿ 21 ಜಿಪಂ ಕ್ಷೇತ್ರಗಳಿಗೆ ನಾಲ್ಕು ಹೆಚ್ಚುವರಿ ಕ್ಷೇತ್ರಗಳನ್ನು ಸೃಷ್ಟಿಸಿ 25ಕ್ಕೆ ಏರಿಸಲಾಗಿದೆ. ತಾಪಂನಲ್ಲಿ 77 ಕ್ಷೇತ್ರಗಳನ್ನು ಮರುವಿಂಗಡಣೆ ಮಾಡಿ 72ಕ್ಕೆ ಇಳಿಕೆ ಮಾಡಿದೆ. ಈ ಎಲ್ಲಾ ಕ್ಷೇತ್ರಗಳಿಗೂ ಆಯ್ಕೆ ಆಗಬೇಕಿರುವ ಸದಸ್ಯರ ಸಂಖ್ಯೆಗಳಿಗೆ ಪುರುಷ ಮತ್ತು ಮಹಿಳೆಯರ ಸಂಖ್ಯೆ ವಿಂಗಡಿಸಲಾಗಿದೆ.

ಜಿಪಂ 4 ತಾಲೂಕುಗಳಿಗೆ ಒಟ್ಟು 25 ಸ್ಥಾನಗಳು ನಿಗದಿಯಾಗಿದ್ದು. ಅದರಲ್ಲಿ 13 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿದೆ. ಅನುಸೂಚಿತ ಜಾತಿಗೆ ಆರು ಸ್ಥಾನಗಳು ನೀಡಿದ್ದು. ಅದರಲ್ಲಿ 3 ಮಹಿಳೆಯರಿಗೆ ಮೀಸಲಿಟ್ಟಿದೆ. ಅನುಸೂಚಿತ ಪಂಗಡ ಎರಡು ಸ್ಥಾನಗಳಲ್ಲಿ ಒಂದು ಮಹಿಳೆಗೆ. ಹಿಂದುಳಿದ ವರ್ಗ (ಆ) ದಲ್ಲಿರುವ ಒಟ್ಟು ಮೂರು ಸ್ಥಾನಗಳಲ್ಲಿ ಎರಡು ಮಹಿಳೆಯರಿಗೆ ಹಾಗೂ ಹಿಂದುಳಿದ ವರ್ಗ (ಬಿ) ಒಂದು ಸ್ಥಾನವನ್ನು ಪುರುಷರಿಗೆ ಮೀಸಲಿಡಲಾಗಿದೆ. ಸಾಮಾನ್ಯ ಸ್ಥಾನಗಳನ್ನು ಒಟ್ಟು 13 ಸ್ಥಾನ ಇದ್ದು ಅದರಲ್ಲಿ ಏಳು ಸ್ಥಾನಗಳು ಮಹಿಳೆಯರಿಗೆ ಮೀಸಲಿಟ್ಟಿದೆ.

Advertisement

ಜಿಲ್ಲೆಯ 4 ತಾಪಂಗಳಲ್ಲಿ ಒಟ್ಟು ಇರುವ 72 ಸ್ಥಾನಗಳ ಪೈಕಿ ಮಹಿಳೆಯರಿಗೆ 37 ಸ್ಥಾನಗಳು ನಿಗದಿಯಾಗಿದೆ. ದೇವನಹಳ್ಳಿ ಮತ್ತು ನೆಲಮಂಗಲದ ತಾಪಂ ತಲಾ 15 ಸ್ಥಾನಗಳ ಪೈಕಿ ಮಹಿಳೆಯರಿಗೆ 8 ಸ್ಥಾನಗಳು, ದೊಡ್ಡಬಳ್ಳಾಪುರ ತಾಪಂನಲ್ಲಿ 20 ಸ್ಥಾನಗಳ ಪೈಕಿ ಮಹಿಳೆಯರಿಗೆ 10 ಹಾಗೂ ಹೊಸಕೋಟೆ ತಾಪಂ 22 ಸ್ಥಾನಗಳಲ್ಲಿ 11 ಸ್ಥಾನಗಳು ಮಹಿಳೆಯರಿಗೆ ಮೀಸಲಿದೆ.

ಜಿಪಂ- ತಾಪಂ ಚುನಾವಣೆಗೆ ಪೂರಕವಾಗಿ ಕ್ಷೇತ್ರ ಪುನರ್‌ ವಿಂಗಡಣೆ ಮಾಡಿ ಕ್ಷೇತ್ರದ ಸಂಖ್ಯೆಯಲ್ಲಿ ಹೆಚ್ಚು ಕಡಿಮೆ ಮಾಡಿದ್ದು ಆದರೆ ಈ ಪುನರ್‌ ವಿಂಗಡನೆ ಕಾರ್ಯ ಸರಿಯಾಗಿ ನಡೆದಿಲ್ಲ ಎಂದು ರಾಜ್ಯ ಸರ್ಕಾರವೇ ಆಕ್ಷೇಪ ವ್ಯಕ್ತಪಡಿಸಿತ್ತು. ಬಳಿಕ ಕಾನೂನು ತಿದ್ದುಪಡಿ ತಂದ ರಾಜ್ಯ ಸರ್ಕಾರ ಜಿಪಂ- ತಾಪಂ ಕ್ಷೇತ್ರಗಳ ಪುನರ್‌ ವಿಂಗಡಣೆಗೆ ಕರ್ನಾಟಕ ಪಂಚಾಯತ್‌ ರಾಜ್‌ ಸೀಮಾ ನಿರ್ಣಯ ಆಯೋಗ ರಚಿಸಿತ್ತು. ಈ ಆಯೋಗವು ಹಿಂದಿನ ಜನಗಣತಿಯಲ್ಲಿ ಖಚಿತಪಡಿಸಿದ

ಜನಸಂಖ್ಯೆಯ ಆಧಾರದ ಮೇಲೆ ಜಿಪಂ- ತಾಪಂ ಗೆ ಚುನಾಯಿಸಬೇಕಾದ ಒಟ್ಟು ಸದಸ್ಯರ ಸಂಖ್ಯೆ, ಕ್ಷೇತ್ರಗಳ ವಿಂಗಡಣೆ ಹಾಗೂ ಕ್ಷೇತ್ರದ ಗಡಿಗಳನ್ನು ನಿರ್ಧರಿಸಿ ಶಿಫಾರಸು ಮಾಡಿತ್ತು. ಈ ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಿ ಮೀಸಲು ನಿಗದಿ ಪಡಿಸಿ ಅಧಿಸೂಚನೆ ಹೊರಡಿಸಿದೆ. ಬೆಂ. ಗ್ರಾಮಾಂತರ ಜಿಲ್ಲೆಯಲ್ಲಿ ಕ್ಷೇತ್ರಗಳ ಸದಸ್ಯರ ಸಂಖ್ಯೆ ಸಿದ್ಧತೆ ಮಾಡಿ ಆದೇಶ ಹೊರ ಬೀಳುತ್ತಿದ್ದಂತೆ ಆಕಾಂಕ್ಷಿಗಳಲ್ಲಿ ರಾಜಕೀಯ ಜಾತಿವಾರು ಹಾಗೂ ಕ್ಷೇತ್ರವಾರು ಸ್ಥಿತಿಗತಿಗಳ ಲೆಕ್ಕಾಚಾರ ಶುರುವಾಗಿದೆ. ಯಾವ ಕ್ಷೇತ್ರದಲ್ಲಿ ಹೇಗಿದೆ. ಚಿತ್ರಣ ಎಂಬ ಮಾಹಿತಿಯನ್ನು ಮುಖಂಡರು ಕಲೆ ಹಾಕುತ್ತಿದ್ದಾರೆ.

-ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next