ದೇವನಹಳ್ಳಿ: ತಾಲೂಕಿನ ಅಭಿವೃದ್ಧಿಯೇ ನನ್ನ ಅಜೆಂಡಾ ಆಗಿದೆ. ಗ್ರಾಮಗಳಲ್ಲಿ ರಾತ್ರಿ ವೇಳೆ ಬೆಳಕಾಗಿರಲು ಹೈಮಾಸ್ಟ್ ದೀಪಗಳಿಗೆ ಹೆಚ್ಚಿನ ಒತ್ತನ್ನು ಕೊಡಲಾಗುತ್ತಿದೆ ಎಂದು ಶಾಸಕ ಎಲ್. ಎನ್.ನಾರಾಯಣಸ್ವಾಮಿ ತಿಳಿಸಿದರು.
ತಾಲೂಕಿನ ಜಾಲಿಗೆ ಗ್ರಾಪಂ ವ್ಯಾಪ್ತಿಯ ಜುಟ್ಟನಹಳ್ಳಿ ಗ್ರಾಮದಲ್ಲಿ ಹೈಮಾಸ್ಟ್ ದೀಪವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕುಮಾರಸ್ವಾಮಿ ಅವರ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಆದ ಮೇಲೆ ಪ್ರತಿ ಗ್ರಾಮದ ಲ್ಲಿರುವ ಸಮಸ್ಯೆ ಅರಿತು ಎಸ್‌ಸಿಪಿ, ಟಿಎಸ್‌ಪಿಗಳಲ್ಲಿ ಸರ್ಕಾರ ದಿಂದ ಅನುದಾನ ಬರುತ್ತಿದ್ದವು. ಸಾಮಾನ್ಯ ವರ್ಗದ ವರ ಮನೆಗಳ ಹತ್ತಿರ ಸಿಸಿ ರಸ್ತೆ ಕೊಡುವುದೇ ರೇರ್ ಆಗಿತ್ತು. ಮೊದಲನೇ ಬಾರಿಗೆ ಕುಂದಾಣ ಹೋಬಳಿ ಯಿಂದಲೇ ಒಂದು ಕೋಟಿ ರೂ. ವರೆಗೆ ಕಾಂಕ್ರೀಟ್ ರಸ್ತೆ ಕಾಮಗಾರಿ ಪ್ರಾರಂಭಿಸಲಾಗಿತ್ತು ಎಂದರು.
ಅಭಿವೃದ್ಧಿ ಕೆಲಸಕ್ಕೆ ಒಗಟ್ಟು ಮುಖ್ಯ: 2023ರಲ್ಲಿ ಕುಮಾರಸ್ವಾಮಿ ಸಿಎಂ ಆದರೆ ನನ್ನ ಕನಸನ್ನು ನನಸಾಗಿ ಮಾಡುತ್ತೇನೆ. ಒಬ್ಬ ಮನೆ ಮಗನಾಗಿ ತಾಲೂಕಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಯಾವುದೇ ಅಭಿವೃದ್ಧಿ ಕೆಲಸ ಮಾಡಬೇಕಾದರೆ ಒಗ್ಗಟ್ಟಿನಿಂದ ಹೋದರೆ ಎಲ್ಲಾ ಕೆಲಸ ಆಗುತ್ತವೆ. ನನಗೆ ಸೇವೆ ಮಾಡುವ ಭಾಗ್ಯ ಕೊಟ್ಟಿರುವುದರಿಂದ ನಿಮಗೆ ಚಿರಋಣಿ ಆಗಿರುತ್ತೇನೆ. ಜುಟ್ಟನಹಳ್ಳಿ ಗ್ರಾಮದಲ್ಲಿ ಹೈಮಾಸ್ಟ್ ದೀಪ ಅಳವಡಿಕೆ ಮಾಡಲಾಗಿದೆ ಎಂದರು.
ಎಲ್ಲೆಡೆ ಕಾಂಕ್ರೀಟ್ ರಸ್ತೆಗಳ ಕಾಮಗಾರಿ ಮುಗಿದಿದೆ. ಒಂದಿಷ್ಟು ಹಣವನ್ನು ಗ್ರಾಮಗಳಿಗೆ ಹೈಮಾಸ್ಟ್ ದೀಪಗಳಿಗೆ ನೀಡುತ್ತಿದ್ದೇನೆ. ನನ್ನ ಅನುದಾನದಲ್ಲಿ ಎಲ್ಲೇ ಹೋದರೂ ಕತ್ತಲೇ ಇಲ್ಲದಂತೆ ಯಾವುದೇ ಗ್ರಾಮದಲ್ಲಿ ಬೆಳಕಾಗಿರಲು ಹೈಮಾಸ್ಟ್ ದೀಪಗಳನ್ನು ನೀಡುವುದರ ಮೂಲಕ ಅನುಕೂಲ ಆಗುತ್ತಿದೆ. ನಮ್ಮ ಗ್ರಾಮಕ್ಕೆ ಆಗಿದೆ. ನಮ್ಮ ಗ್ರಾಮಕ್ಕೆ ಆಗಿಲ್ಲ ಎನ್ನುವ ತಾರತಮ್ಯ ಬೇಡ ಎಂದು ಹೇಳಿದರು.
ಹೈಮಾಸ್ಟ್ ದೀಪ ಮಂಜೂರಾತಿ: ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸೊಣ್ಣಪ್ಪ ಮಾತನಾಡಿ, ಶಾಸಕರು ಉತ್ತಮ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ. ನಮ್ಮ ಜಾಲಿಗೆ ಗ್ರಾಪಂ ವ್ಯಾಪ್ತಿಯಿಂದಲೇ ಕಾಂಕ್ರೀಟ್ ರಸ್ತೆಗಳ ಕಾಮಗಾರಿಗೆ ಚಾಲನೆ ನೀಡಿ ಎಲ್ಲೆಡೆ ಕಾಂಕ್ರೀಟ್ ರಸ್ತೆ ಮಾಡಿಸಿ ದ್ದಾರೆ. ಅನೇಕ ಶಾಸಕರನ್ನು ನೋಡಿದ್ದೇನೆ. 5 ಲಕ್ಷ ರೂ.ವರೆಗೆ ಕಾಂಕ್ರೀಟ್ ರಸ್ತೆಗಳಿಗೆ ನೀಡುತ್ತಿದ್ದೆವು. ಆದರೆ, ನಾರಾಯಣಸ್ವಾಮಿ ಅವರು ಶಾಸಕರಾದ ಮೇಲೆ ಒಂದೊಂದು ಗ್ರಾಮಕ್ಕೆ 50 ಲಕ್ಷ ರೂ.ದಿಂದ ಕೋಟಿವರೆಗೆ ಅನುದಾನವನ್ನು ಕೊಟ್ಟಿದ್ದಾರೆ. ಗ್ರಾಮಗಳಿಗೆ ಹೈಮಾಸ್ಟ್ ದೀಪ ಮಂಜೂರಾತಿ ನೀಡುತ್ತಿದ್ದಾರೆ ಎಂದರು.
ಗ್ರಾಪಂ ಉಪಾಧ್ಯಕ್ಷ ಬಾಲಸುಬ್ರಮಣ್ಯಂ, ಸದಸ್ಯ ಸುಬ್ರಮಣಿ, ಸಮಾಜಸೇವಕ ಜುಟ್ಟನಹಳ್ಳಿ ಚೇತನ್ ಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ಆರ್. ಮುನೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ತಾಲೂಕು ಸೊಸೈಟಿ ನಿರ್ದೇಶಕ ಕಾಮೇನಹಳ್ಳಿ ರಮೇಶ್, ತಾಪಂ ಮಾಜಿ ಸದಸ್ಯ ಗೋಪಾಲಸ್ವಾಮಿ, ವಿಎಸ್‌ಎಸ್‌ಎನ್ ಅಧ್ಯಕ್ಷ ರಾಜಣ್ಣ, ಮುಖಂಡ ಬಾಬು, ತಮ್ಮಣ್ಣ, ಆಂಜಿನಪ್ಪ, ವೆಂಕಟಸ್ವಾಮಿ, ಆನಂದ್, ಕೆಂಪರಾಜು ಹಾಗೂ ಗ್ರಾಮಸ್ಥರು ಇದ್ದರು.