Advertisement

ಕೋತಿಗುಡ್ಡದಲ್ಲಿ ಕೋವಿಡ್ ಪಾಸಿಟಿವ್‌

12:07 PM Jun 01, 2020 | Naveen |

ದೇವದುರ್ಗ: ತಾಲೂಕಿನ ಕೋತಿಗುಡ್ಡ ಗ್ರಾಮದ ವ್ಯಕ್ತಿಗೆ ಶನಿವಾರ ರಾತ್ರಿ ಪಾಸಿಟಿವ್‌ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

Advertisement

ಕ್ವಾರಂಟೈನ್‌ ಕೇಂದ್ರದಲ್ಲಿರುವ ಜನರಿಗೆ ಸಮಯಕ್ಕೆ ಸರಿಯಾಗಿ ತಿಂಡಿ, ಊಟ ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಪಾಸಿಟಿವ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣದಿಂದಾಗಿ ಕ್ವಾರಂಟೈನ್‌ ಕೇಂದ್ರದಲ್ಲಿರುವ ಜನರು ನಿತ್ಯ ಭಯದಲ್ಲಿಯೇ ದಿನ ದೂಡುವಂತಾಗಿದೆ. ಮಹಾರಾಷ್ಟ್ರದ ಕೋವಿಡ್ ವೈರಸ್‌ ವಿಷದ ಸೋಂಕು ತಾಲೂಕನ್ನು ಅಕ್ಷರಶಃ ನಲುಗಿಸಿದೆ. ಕ್ವಾರಂಟೈನ್‌ ಕೇಂದ್ರ ಸ್ಥಾಪಿಸಲಾದ ವಸತಿ ನಿಲಯದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಜನರನ್ನು ಸೇರಿಸಲಾಗಿದೆ. ಇಷ್ಟು ದಿನ ಕ್ವಾರಂಟೈನ್‌ಗೆ ಸೀಮಿತವಾಗಿದ್ದ ವೈರಸ್‌ ಈಗ ಗ್ರಾಮೀಣ ಭಾಗ, ದೊಡ್ಡಿ, ತಾಂಡಾಗಳಿಕ್ಕೆ ವಕ್ಕರಿಸಿ ಭೀತಿ ಹೆಚ್ಚಿಸಿದೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಮಹಾರಾಷ್ಟ್ರ, ಪುಣೆ, ಬೆಂಗಳೂರು, ಆಂಧ್ರದಿಂದ ಸುಮಾರು 25 ಸಾವಿರಕ್ಕೂ ಹೆಚ್ಚು ಜನರು ತಾಲೂಕಿಗೆ ಮರಳಿ ಬಂದಿದ್ದಾರೆ. ಆದರೆ, ಲಾಕ್‌ ಡೌನ್‌ ಸಡಿಲಿಕೆ ನಂತರ ಬಂದ ಜನರಲ್ಲಿ ಪಾಸಿಟಿವ್‌ ಕೇಸ್‌ ಪತ್ತೆಯಾಗುತ್ತಿದೆ. ಮೇ 3ರ ನಂತರ ನಿತ್ಯ ಸುಮಾರು 200ಕ್ಕೂ ಹೆಚ್ಚು ಜನರಂತೆ ಈವರೆಗೆ ಎರಡೂವರೆ ಸಾವಿರ ಜನರು ಮರಳಿ ಬಂದಿದ್ದಾರೆ. ಅವರನ್ನು ಸಮರ್ಪಕವಾಗಿ ಕ್ವಾರಂಟೈನ್‌ ಮಾಡಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ. ಪ್ರತಿ ಹಾಸ್ಟೆಲ್‌ನಲ್ಲಿ ಸೀಮಿತ ಜನರನ್ನು ಇಟ್ಟಿದ್ದರೆ ಸೋಂಕು ಏರಿಕೆ ಕಡಿಮೆ ಮಾಡಬಹುದಿತ್ತು.

35 ಹಾಸ್ಟೆಲ್‌, ಕಲ್ಯಾಣ ಮಂಟಪ ಬಳಸಿಕೊಂಡು ಕ್ವಾರಂಟೈನ್‌ ಕೇಂದ್ರ ಹೆಚ್ಚಿಸಿ ಕಡಿಮೆ ಜನರನ್ನು ಸಾಮಾಜಿಕ ಅಂತರದಲ್ಲಿ ಇರಿಸಿದ್ದರೆ ವೈರಸ್‌ ನಿಯಂತ್ರಣಕ್ಕೆ ಬರಬಹುದಿತ್ತು. ಆದರೆ, ಮರಳಿ ಬಂದಿರುವ ಎರಡು ಸಾವಿರ ಜನರನ್ನು ಆರಂಭದಲ್ಲಿ ಪಟ್ಟಣದ 6 ಸೇರಿ 14 ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ ಮಾಡಲಾಗಿದೆ. ಪ್ರತಿ ಕ್ವಾರಂಟೈನಲ್ಲಿ 150-200 ಜನರನ್ನು ಇರಿಸಲಾಗಿದೆ. ಪ್ರತಿ ಕೊಠಡಿಗೆ 20-25 ಜನರನ್ನು ಇರಿಸಲಾಗಿದೆ. ತಾಲೂಕಿನಲ್ಲಿ ವಿವಿಧ ಇಲಾಖೆಗೆ ಸೇರಿದ 35ಕ್ಕೂ ಹೆಚ್ಚು ವಸತಿ ನಿಲಯಗಳು, ಹತ್ತಕ್ಕೂ ಹೆಚ್ಚು ಕಲ್ಯಾಣ ಮಂಟಪಗಳು, 15ಕ್ಕೂ ಹೆಚ್ಚು ಕಾಲೇಜುಗಳು, ದೊಡ್ಡದೊಡ್ಡ ಖಾಸಗಿ ಕಟ್ಟಡಗಳಿವೆ. ಪಾಸಿಟಿವ್‌ ಕಂಡುಬಂದ ವ್ಯಕ್ತಿಗಳ ಜತೆ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕ ಹೊಂದಿದವರನ್ನು ಪ್ರತೇಕವಾಗಿ ಇರಿಸಿಲ್ಲ. ಅವರನ್ನು ಅದೇ ಹಾಸ್ಟೆಲ್‌ನಲ್ಲಿ ಕೂಡಿ ಹಾಕಿರುವುದು ವೈರಸ್‌ ಹರಡಲು ಕಾರಣ ಎನ್ನಲಾಗಿದೆ. ಇದರಿಂದ ಪ್ರತಿ ಕೇಂದ್ರದಿಂದ ಕೇಸ್‌ಗಳು ಬರುತ್ತಿವೆ. ಅವರನ್ನು ಪ್ರತ್ಯೇಕಿಸಿದ್ದರೆ ಸೋಂಕು ಹರಡುವುದನ್ನು ತಡೆಯಬಹುದಿತ್ತು ಎನ್ನುತ್ತಾರೆ ಪ್ರಜ್ಞಾವಂತ ನಾಗರಿಕರು.

ನಮಗೆ ಲಭ್ಯವಾದ ಸೌಲಭ್ಯ, ವ್ಯವಸ್ಥೆ ಆಧಾರದಲ್ಲಿ ಕ್ವಾರಂಟೈನ್‌ ಕೇಂದ್ರ ತೆರೆಯಲಾಗಿತ್ತು. ನಿರೀಕ್ಷೆಗೆ ಮೀರಿ ಜನರು ಮರಳಿ ಬಂದಿದ್ದಾರೆ. ಜನರು ಸಹ ಸ್ವಲ್ಪ ಜಾಗೃತಿ ವಹಿಸಬೇಕಾಗಿತ್ತು. ಕೊರೊನಾ ನಿಯಂತ್ರಣಕ್ಕೆ ಅಧಿಕಾರಿಗಳು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಅಗತ್ಯ ಕ್ರಮಕೈಗೊಳ್ಳಲಾಗಿದೆ.
ಮಧುರಾಜ ಯಾಳಗಿ,
ತಹಶೀಲ್ದಾರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next