ದೇವದುರ್ಗ: ಇಲ್ಲಿನ ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಕಳೆದ ಮೂರು ತಿಂಗಳಿಂದ ಸರಿಯಾಗಿ ಕಚೇರಿಗೆ ಬಾರದೇ ಇರುವುದರಿಂದ ಕಡತಗಳ ವಿಲೇವಾರಿ ಮತ್ತು ಯೋಜನೆಗಳ ಅನುಷ್ಠಾನಕ್ಕೆ ಹಿನ್ನಡೆ ಆಗುತ್ತಿದೆ.
ಸಾಮಾಜಿಕ ವಲಯ ಅರಣ್ಯ ಇಲಾಖೆಯಡಿ ವಿವಿಧೆಡೆ ಸಸಿ ನೆಡುವ ಯೋಜನೆ ರೂಪಿಸಲಾಗಿದೆ. ಅಲ್ಲದೇ ಇದರ ಖರ್ಚು ವೆಚ್ಚದ ಕಡತಗಳನ್ನು ವಿಲೇವಾರಿ ಮಾಡಬೇಕಿದೆ. ಆದರೆ ಸಾಮಾಜಿಕ ವಲಯ ಅರಣ್ಯಾಧಿಕಾರಿ ಮೂರು ತಿಂಗಳಿಂದ ಕಚೇರಿಗೆ ಬಾರದ್ದರಿಂದ ಮತ್ತು ಅಧಿಕಾರಿ ಸಹಿ ಇಲ್ಲದೇ ಕಡತಗಳ ವಿಲೇವಾರಿ, ಬಿಲ್ಗಳ ಪಾವತಿಗೆ ವಿಳಂಬವಾಗುತ್ತಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವುದು, ನರೇಗಾದಡಿ ಶಾಲಾ-ಕಾಲೇಜು ದೇವಸ್ಥಾನ, ಮಠಗಳಲ್ಲಿ ಸಸಿಗಳನ್ನು ನೆಡುವ ಯೋಜನೆ ರೂಪಿಸಲಾಗಿದೆ. ಸಾಮಾಜಿಕ ವಲಯ ಅರಣ್ಯ ಯೋಜನೆಯಿಂದ ಸಸಿ ನೆಡಲು ಗುಂಡಿ ತೋಡುವ ಯೋಜನೆ ಜಾರಿಯಲ್ಲಿದೆ. ಹಸಿರು ಕರ್ನಾಟಕ ಯೋಜನೆಯಡಿ ಶಾಲಾ-ಕಾಲೇಜು, ಪ್ರಸಿದ್ದ ತಾಣಗಳಲ್ಲಿ ಸಸಿಗಳನ್ನು ನೆಟ್ಟು ಬೆಳೆಸಬೇಕಿದೆ. ಹೀಗೆ ಒಂದಿಲ್ಲೊಂದು ಯೋಜನೆ ಅರಣ್ಯ ಇಲಾಖೆಯಿಂದ ಜಾರಿಯಲ್ಲಿವೆ. ಆದರೆ ಅಧಿಕಾರಿ ಸರಿಯಾಗಿ ಕಚೇರಿಗೆ ಬಾರದ್ದರಿಂದ ಈ ಯೋಜನೆಗಳ ಅನುಷ್ಠಾನದಲ್ಲಿ ಹಿನ್ನಡೆ ಆಗುತ್ತಿದೆ ಎಂದು ರೈತರು ದೂರಿದ್ದಾರೆ.
ತಾಲೂಕಿನ ಜಾಲಹಳ್ಳಿ, ವೀರಗೋಟ, ಚಿಂಚೋಡಿ, ಗಬ್ಬೂರು, ಅರಕೇರಾ ಸೇರಿ ಇತರೆ ಗ್ರಾಮಗಳಲ್ಲಿ ಸಸಿಗಳನ್ನು ನೆಡಲಾಗಿದೆ. ಅವುಗಳ ಸಂರಕ್ಷಣೆಯ ಉಸ್ತುವಾರಿ ನೋಡಿಕೊಳ್ಳಬೇಕಾದ ಅಧಿಕಾರಿಯೇ ಕಚೇರಿಗೆ ಬರುತ್ತಿಲ್ಲ. ಸಿಬ್ಬಂದಿ ಕೂಡ ಸಸಿಗಳಿಗೆ ನೀರು ಹಾಯಿಸಲು ನಿರ್ಲಕ್ಷ್ಯ ವಹಿಸಿದ್ದರಿಂದ ಗಿಡಗಳು ಬಾಡಲು ಆರಂಭಿಸಿವೆ ಎನ್ನಲಾಗುತ್ತಿದೆ. ಇನ್ನು ಯೋಜನೆಗಳ ಕುರಿತು ರೈತರು ಮಾಹಿತಿಗಾಗಿ ಕಚೇರಿಗೆ ತೆರಳಿದರೆ ಅಧಿಕಾರಿ ಲಭ್ಯವಿಲ್ಲದ್ದರಿಂದ ಬರಿಗೈಲಿ ವಾಪಸ್ ಬರಬೇಕಿದೆ. ಉದ್ಯೋಗ ಖಾತ್ರಿ ಯೋಜನೆ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಸಸಿಗಳನ್ನು ನೆಡುವ ಕಾರ್ಯ ಸ್ಥಗಿತಗೊಂಡಿದೆ. ಇಲ್ಲಿನ ಅಧಿಕಾರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿದರೂ ಕರೆ ಸ್ವೀಕರಿಸುತ್ತಿಲ್ಲ. ಜನಸಾಮಾನ್ಯರ ದೂರವಾಣಿ ಕರೆ ಇರಲಿ ಕಚೇರಿ ಸಿಬ್ಬಂದಿ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ. ಕಳೆದ ಮೂರು ತಿಂಗಳಿಂದ ಸರಿಯಾಗಿ ಕಚೇರಿಗೆ ಬಾರದ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಕೆಆರ್‌ಎಸ್ ಸಂಘಟನೆ ತಾಲೂಕು ಅಧ್ಯಕ್ಷ ಮಲ್ಲಯ್ಯ ಕಟ್ಟಿಮನಿ ಆಗ್ರಹಿಸಿದ್ದಾರೆ.
ಜಾಲಹಳ್ಳಿ ಭಾಗದಲ್ಲಿ ಸಂರಕ್ಷಣೆ ಮತ್ತು ನೀರು ಹಿಲ್ಲದೇ ಗಿಡಗಳು ಒಣಗುತ್ತಿವೆ. ಹಲವು ಬಾರಿ ಕಚೇರಿಗೆ ಹೋದರೆ ಅಧಿಕಾರಿ ಸಿಗುತ್ತಿಲ್ಲ. ಇಂಥ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳದೇ ಹಿಂದೇಟು ಹಾಕಿದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ.
•
ನರಸಣ್ಣ ನಾಯಕ,
ಜಾಲಹಳ್ಳಿ ಪ್ರಾಂತ ರೈತ ಸಂಘದ ಅಧ್ಯಕ್ಷ
ಸಾಮಾಜಿಕ ವಲಯ ಅರಣ್ಯಾಧಿಕಾರಿ ಕಚೇರಿಗೆ ಸರಿಯಾಗಿ ಹೋಗುತ್ತಿಲ್ಲ ಎಂಬ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಕಾರಣ ಕೇಳಿ ನೋಟಿಸ್ ಜಾರಿ ಮಾಡುತ್ತೇನೆ. ವಿಳಂಬ ಮಾಡಿದಲ್ಲಿ ಅಮಾನತು ಮಾಡಬೇಕಾಗುತ್ತದೆ.
•
•ಜೆ.ನಾರಾಯಣಪ್ಪ,
ಅರಣ್ಯ ಸಂರಕ್ಷಣೆ ಅಧಿಕಾರಿ ಸಾಮಾಜಿಕ ಅರಣ್ಯ ವಿಭಾಗ
ರಾಯಚೂರು