Advertisement

ಪರಿಹಾರಕ್ಕೆ ಬಾಧಿತರ ಅಲೆದಾಟ

12:01 PM Jun 10, 2019 | Team Udayavani |

ದೇವದುರ್ಗ: ತಾಲೂಕಿನಲ್ಲಿ ವಿವಿಧ ಗ್ರಾಮಗಳಲ್ಲಿ ಆಕಸ್ಮಿಕ ಬೆಂಕಿ ತಗುಲಿ ಜಾನುವಾರು ಸಾವು, ಗುಡಿಸಲು, ಮೇವಿನ ಬಣವಿ ಭಸ್ಮ ಮತ್ತು ಸಿಡಿಲಿಗೆ ಜಾನುವಾರು ಸಾವು ಪ್ರಕರಣಗಳಲ್ಲಿ ಈವರೆಗೆ ಸರ್ಕಾರ ಪರಿಹಾರ ವಿತರಿಸದ್ದರಿಂದ ಬಾಧಿತರು ತಹಶೀಲ್ದಾರ್‌ ಕಚೇರಿ, ಕೃಷಿ ಇಲಾಖೆಗೆ ಅಲೆದಾಡುವಂತಾಗಿದೆ.

Advertisement

2017-18ನೇ ಸಾಲಿನಲ್ಲಿ ಎಚ್.ಎನ್‌.ತಾಂಡಾದಲ್ಲಿ ರಾಠೊಡ, ದಾನಪ್ಪ ಎಂಬವರ ಬಣವಿಗಳಿಗೆ ಬೆಂಕಿ ತಗುಲಿ ಲಕ್ಷಾಂತರ ರೂ. ಹಾನಿ ಆಗಿತ್ತು. ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಪರಿಹಾರಕ್ಕಾಗಿ ಜಿಲ್ಲಾಡಳಿತ ವರದಿ ನೀಡಿದ್ದರು. ಈವರೆಗೆ ಪರಿಹಾರ ಬಾರದ್ದರಿಂದ ಸಂತ್ರಸ್ತರು ನಿತ್ಯ ತಹಶೀಲ್ದಾರ್‌ ಕಚೇರಿ ಅಲೆದಾಡುವಂತಾಗಿದೆ.

ಒಂದು ವಾರದ ಹಿಂದೆ ಗಬ್ಬೂರು ಗ್ರಾಮದಲ್ಲಿ ಬಸಲಿಂಗಯ್ಯ ಸಿದ್ರಾಮಯ್ಯ ಚಿಕ್ಕಮಠ ಎಂಬವರಿಗೆ ಸೇರಿದ ಮೇವಿನ ಬಣವಿಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಕಂದಾಯ ಅಧಿಕಾರಿಗಳು ಮಹಜರು ನಡೆಸಿ ಪರಿಹಾರಕ್ಕಾಗಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸುವುದಾಗಿ ಭರವಸೆ ನೀಡಿದ್ದಾರೆ.

ಕಳೆದ ವಾರ ದೇವರಗುಡ್ಡ ಗ್ರಾಮದಲ್ಲಿ ಬೆಂಕಿ ತಗುಲಿ ರೈತ ಬಸವರಾಜ ಎಂಬವರ ಬಣವಿ ಕೂಡ ಭಸ್ಮವಾಗಿದೆ. ಕಳೆದ ವರ್ಷ ಹೂವಿನಹೆಡಗಿ ಗ್ರಾಮದಲ್ಲಿ ಬಸಲಿಂಗಮ್ಮ ಗುರುಬಸವ, ಬಸಲಿಂಗಮ್ಮ ಗೂಳಪ್ಪ ಎಂಬವರಿಗೆ ಸೇರಿ ಎರಡು ಎಮ್ಮೆಗಳು ಸಿಡಿಲಿಗೆ ಬಲಿಯಾಗಿವೆ. ಕಂದಾಯ ಇಲಾಖೆ ಪರಿಶೀಲಿಸಿ ಸಂಬಂಧಪಟ್ಟ ಇಲಾಖೆಗೆ ವರದಿ ನೀಡಿದೆ. ಆದರೆ ಈವರೆಗೆ ನೊಂದವರಿಗೆ ಪರಿಹಾರ ಸಿಕ್ಕಿಲ್ಲ.

ಮಂಡಲಗುಡ್ಡ ಗ್ರಾಮದಲ್ಲಿ ನರಸಪ್ಪ ಶಿವಪ್ಪ ಅವರ ಎತ್ತು ಸಿಡಿಲಿಗೆ ಮೃತಪಟ್ಟಿದೆ. ಇದಲ್ಲದೇ 2018-19ರಲ್ಲಿ 46 ಆಕಸ್ಮಿಕ ಬೆಂಕಿ ಪ್ರಕರಣಗಳಲ್ಲಿ ಬಣವಿ, ಗುಡಿಸಲು, ಪಾನ್‌ಶಾಪ್‌ ಸೇರಿ ಇತರೆ ಆಸ್ತಿಪಾಸ್ತಿ ಹಾನಿಯಾಗಿದೆ. ಈ ಪ್ರಕರಣಗಳಲ್ಲಿ ಯಾರೊಬ್ಬರಿಗೂ ಪರಿಹಾರ ಬಂದಿಲ್ಲ.

Advertisement

ನೈಸರ್ಗಿಕ ವಿಕೋಪದಡಿ ಹಾನಿ ಸಂಭವಿಸಿದರೆ ತಾಲೂಕು ಆಡಳಿತ ಪರಿಹಾರ ಮಂಜೂರಿಗೆ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸುತ್ತದೆ. ಆಕಸ್ಮಿಕ ಬೆಂಕಿ ಪ್ರಕರಣಗಳು ಸಂಭವಿಸಿದ ಹಳ್ಳಿಗಳಿಗೆ ಪರಿಶೀಲನೆಗಾಗಿ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ, ಬೆಂಕಿ ನಂದಿಸಲು ಅಗ್ನಿಶಾಮಕ ಠಾಣೆ ಸಿಬ್ಬಂದಿ ತೆರಳುತ್ತಾರೆ. ಇವರು ವರದಿ ನೀಡಿದರೂ ಕಂದಾಯ ಇಲಾಖೆಯಿಂದ ಯಾವುದೇ ಪರಿಹಾರ ಬರುವುದಿಲ್ಲ. ಮೇವಿನ ಬಣವಿ, ಬೆಳೆ ಹಾನಿ ಪ್ರಕರಣಗಳಲ್ಲಿ ಇಲಾಖೆ ಅಧಿಕಾರಿಗಳು ಸಂಬಂಧಪಟ್ಟ ಕೃಷಿ ಇಲಾಖೆಗೆ ನಷ್ಟದ ವರದಿ ನೀಡುತ್ತಾರೆ. ಆದರೆ ಕಂದಾಯ, ಕೃಷಿ ಅಧಿಕಾರಿಗಳ ಮಧ್ಯೆ ಸಮನ್ವಯ ಕೊರತೆಯಿಂದ ಬಹುತೇಕ ನೊಂದವರಿಗೆ ಪರಿಹಾರ ಲಭಿಸುತ್ತಿಲ್ಲ. ಹೀಗಾಗಿ ಬಾಧಿತರು ನಿತ್ಯ ಕಚೇರಿಗೆ ಅಲೆದಾಡುವಂತಾಗಿದೆ ಎಂದು ಆರೋಪಿಸಿರುವ ಕೆಆರ್‌ಎಸ್‌ ತಾಲೂಕು ಅಧ್ಯಕ್ಷ ಮಲ್ಲಯ್ಯ ಕಟ್ಟಿಮನಿ, ಸಂತ್ರಸ್ತರಿಗೆ ಕೂಡಲೇ ಪರಿಹಾರ ವಿತರಿಸಲು ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.

ನೈಸರ್ಗಿಕ ವಿಕೋಪದಡಿ ಯಾವುದೇ ಹಾನಿ ಉಂಟಾದಲ್ಲಿ ಜಿಲ್ಲಾಡಳಿತ ಪರಿಹಾರ ನೀಡಲಾಗುತ್ತಿದೆ. ಆಕಸ್ಮಿಕ ಬೆಂಕಿಗೆ ಆಹುತಿಯಾಗುವ ಬಣವಿ, ಗುಡಿಸಲುಗಳಿಗೆ ಕೃಷಿ ಇಲಾಖೆಯಿಂದ ಪರಿಹಾರ ನೀಡಲಾಗುತ್ತದೆ.
••ಮಲ್ಲಿಕಾರ್ಜುನ ಅರಕೇರಿ,
ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next