ದೇವದುರ್ಗ: ತಾಲೂಕಿನ ಮುಷ್ಟೂರು ಗ್ರಾಮದಿಂದ ಅರಕೇರಾವರೆಗಿನ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಹಾಗೂ ಮೂಲ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಮುಷ್ಟೂರು ಗ್ರಾಮದಲ್ಲಿ ರಸ್ತೆತಡೆ ನಡೆಸಿದರು. ಈ ವೇಳೆ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ರಾಜಶೇಖರ ನಾಯಕ ತಾಲೂಕಿನಲ್ಲಿ ಅಭಿವೃದ್ಧಿ ಹೆಸರಲ್ಲಿ ಅನುದಾನ ಲೂಟಿ ಮಾಡಲಾಗುತ್ತಿದೆ. ಸುಮಾರು ವರ್ಷಗಳಿಂದ ಮುಷ್ಟೂರು-ಅರಕೇರಾ ಗ್ರಾಮದ ರಸ್ತೆ ಹದಗೆಟ್ಟಿದ್ದರೂ ರಸ್ತೆ ದುರಸ್ತಿಗೆ ಶಾಸಕರು ಮುಂದಾಗಿಲ್ಲ. ಕೆಲ ಗ್ರಾಮಗಳಿಗೆ ಇಲ್ಲಿವರೆಗೆ ಡಾಂಬರ್ ರಸ್ತೆ ನಿರ್ಮಿಸಿಲ್ಲ. ಶಾಸಕರು ಭಾಷಣದುದ್ದಕ್ಕೂ ತಾಲೂಕು ಸಂಪೂರ್ಣ ಅಭಿವೃದ್ಧಿಯಾಗಿದೆ ಎಂದು ಹೇಳುತ್ತಾರೆ. ಆದರೆ ಕ್ಷೇತ್ರದ ಗ್ರಾಮಗಳಲ್ಲಿ ಸುಸಜ್ಜಿತ ರಸ್ತೆ, ಕುಡಿಯುವ ನೀರಿಲ್ಲದೇ ಮತ್ತು ಮೂಲ ಸೌಲಭ್ಯವಿಲ್ಲದೇ ಜನ ನರಕಯಾತನೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.
ಬೇಡಿಕೆಗಳು: ಮುಷ್ಟೂರು ಗ್ರಾಮದಿಂದ ಅರಕೇರಾ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಿಸಬೇಕು. ಮುಷ್ಟೂರು ಗ್ರಾಮದಲ್ಲಿ ಪದವಿ ಪೂರ್ವ ಕಾಲೇಜು, ವಸತಿ ನಿಲಯ ಸ್ಥಾಪಿಸಬೇಕು. ಗೆಜ್ಜೆಬಾವಿ, ಶಾಖಾಪುರ, ಶಿವಂಗಿ, ಹುನಗುಂದಾ ಬಾಡ, ಶಿವಂಗಿ, ನಾಗೋಲಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಿಸಬೇಕು. ಮುಷ್ಟೂರು ಮತ್ತು ಹುನುಗುಂದಾಬಾಡ ಗ್ರಾಮದಲ್ಲಿ ಮಹಿಳೆಯರಿಗೆ ಶೌಚಾಲಯ ನಿರ್ಮಿಸಬೇಕು. ಗೆಜ್ಜೆಬಾವಿ ಗ್ರಾಮದಲ್ಲಿ ಗ್ರಂಥಾಲಯ ನಿರ್ಮಿಸಬೇಕು. ಹಾಲಜಾಡಲದಿನ್ನಿ, ಹುನುಗುಂದ ಬಾಡ, ಶಿವಂಗಿ ಸೇರಿ ಇತರೆ ಗ್ರಾಮಗಳಲ್ಲಿನ ರುದ್ರಭೂಮಿ ಸಮಸ್ಯೆ ಬಗೆಹರಿಸಬೇಕು. ಚಂದ್ರನಾಯಕ ತಾಂಡಾದಲ್ಲಿ ವಿದ್ಯುತ್ ಕಂಬ ಅವಳಡಿಸಬೇಕು. ಜರದಬಂಡಿ ಗ್ರಾಮದಲ್ಲಿ ಕುಡಿಯುವ ನೀರು ಹಾಗೂ ಶಾಲೆ, ಅಂಗನವಾಡಿ ಕಟ್ಟಡ ನಿರ್ಮಿಸಬೇಕು. ತಾಲೂಕಿನಾದ್ಯಂತ ಸಮಸ್ಯೆಯಲ್ಲಿರುವ ಗ್ರಾಮಗಳಲ್ಲಿ ಅಗತ್ಯ ಮೂಲ ಸೌಲಭ್ಯ ಸೇರಿ ಇತರೆ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿದರು.
ಕಾಂಗ್ರೆಸ್ ಮುಖಂಡರಾದ ಭೀಮನಗೌಡ ನಾಗಡದಿನ್ನಿ, ಅಬ್ದುಲ್ ಅಜೀಜ್, ಲಕ್ಷ್ಮ ಣ ಜ್ಯೋತಿ, ರಂಗಪ್ಪ ಗೋಸಲ್, ಪುರಸಭೆ ಸದಸ್ಯರಾದ ಮಾನಪ್ಪ ಮೇಸ್ತ್ರಿ, ವೆಂಕಟೇಶ ಮಕ್ತಾಲ್, ಚಂದ್ರಕಾಂತ್ ಬಿಲ್ಲವ್, ಬೂತಪ್ಪ ಹೇರುಂಡಿ, ಆದನಗೌಡ ಬುಂಕಲದೊಡ್ಡಿ, ಮಹಾದೇವ ಚಿಕ್ಕಬೂದೂರು, ಅಜೀಮ್ ಉದ್ದಾರ, ಬಸವರಾಜ ಮಡಿವಾಳ ಸೇರಿ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.