ದೇವದುರ್ಗ: ಪಟ್ಟಣಕ್ಕೆ 24×7 ನೀರು ಪೂರೈಸುವ ಘಟಕದಲ್ಲಿ ನಿರ್ವಹಣೆ ಮತ್ತು ನೀರು ಶುದ್ಧೀಕರಣಕ್ಕೆ ಆಲಂ ಬ್ಲಿಚಿಂಗ್ ಪೌಡರ್ ಬಳಕೆ ಇಲ್ಲದ್ದರಿಂದ ಪಟ್ಟಣದ 23 ವಾರ್ಡ್‌ಗಳಲ್ಲಿ ಅಶುದ್ಧ ನೀರೇ ಪೂರೈಕೆಯಾಗುತ್ತಿದ್ದು, ಇದರಿಂದ ಪಟ್ಟಣದ ಜನತೆ ಹಲವು ಆರೋಗ್ಯ ಸಮಸ್ಯೆ ಎದುರಿಸುವಂತಾಗಿದೆ.
ರಾಯಚೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಸ್ಥಳೀಯ ಪುರಸಭೆ ಮಧ್ಯೆ ಸಮನ್ವಯ ಕೊರತೆಯಿಂದಾಗಿ ಪಟ್ಟಣದ ಜನರು ಅಶುದ್ಧ ನೀರು ಸೇವಿಸುವಂತಾಗಿದೆ. ಪಟ್ಟಣದ ಶಂಭುಲಿಂಗೇಶ್ವರ ಬೆಟ್ಟದ ಹತ್ತಿರ ನಿರ್ಮಿಸಲಾದ 24×7 ಕುಡಿಯುವ ನೀರಿನ ಘಟಕದಲ್ಲಿ ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ. ನೀರು ಶುದ್ಧೀಕರಿಸಲು ಆಲಂ ಬ್ಲಿಚಿಂಗ್ ಪೌಡರ್ ಬಳಸುತ್ತಿಲ್ಲ. ಹೀಗಾಗಿ 23 ವಾರ್ಡ್‌ಗಳಿಗೆ ಅಶುದ್ಧ ನೀರು ಪೂರೈಕೆಯಾಗುತ್ತಿದೆ. ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಪುರಸಭೆ ಅಧಿಕಾರಿಗಳು ಒಬ್ಬರತ್ತ ಮತ್ತೂಬ್ಬರು ಬೊಟ್ಟು ಮಾಡುತ್ತ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ.
ಗೂಗಲ್ ಬ್ರಿಜ್ ಬ್ಯಾರೇಜ್‌ನಲ್ಲಿ ಸಂಗ್ರಹಿಸಿದ ನೀರನ್ನು ಶುದ್ಧೀಕರಣ ಘಟಕಕ್ಕೆ ಪೂರೈಸಲಾಗುತ್ತದೆ. ಅಲ್ಲಿ ನೀರು ಶುದ್ಧೀಕರಿಸಿ ಪಟ್ಟಣದ 23 ವಾರ್ಡ್‌ಗಳಿಗೆ ಸರಬರಾಜು ಮಾಡಬೇಕು. ಆದರೆ ಕಳೆದ ಆರೇಳು ತಿಂಗಳಿಂದ ಆಲಂ ಬ್ಲಿಚಿಂಗ್ ಪೌಡರ್ ಬಳಸದೇ ನೀರನ್ನು ನೇರವಾಗಿ ಟ್ಯಾಂಕ್‌ಗಳಿಗೆ ಸರಬರಾಜು ಮಾಡಿ ಅಲ್ಲಿಂದ ನಲ್ಲಿಗಳ ಮೂಲಕ ಪಟ್ಟಣದ ಜನತೆಗೆ ಪೂರೈಸಲಾಗುತ್ತಿದೆ. ಹೀಗಾಗಿ ಕೆಲವೊಮ್ಮೆ ನಲ್ಲಿಗಳಲ್ಲಿ ಗಢುಸಾದ ನೀರು, ನೊರೆಯುಕ್ತ ನೀರು ಬರುತ್ತದೆ. ನೀರನ್ನು ಒಂದು ದಿನ ಬಿಟ್ಟರೆ ವಾಸನೆ ಬರುತ್ತದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಇನ್ನು ಶುದ್ಧೀಕರಣದ ಘಟಕದಲ್ಲಿ ಸಣ್ಣಪುಟ್ಟ ದುರಸ್ತಿಗೆ ಹಣದ ಕೊರತೆ ಎದುರಾಗಿದೆ ಎನ್ನಲಾಗಿದೆ. ನೀರು ಶುದ್ಧೀಕರಿಸಲು ಆಲಂ ಬ್ಲಿಚಿಂಗ್ ಪೌಡರ್ ಬಳಸುವಂತೆ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸಿಲ್ಲ ಎಂದು ಪುರಸಭೆ ಸದಸ್ಯರು ದೂರಿದ್ದಾರೆ.
ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇಲಾಖೆ ಅಧಿಕಾರಿಗಳು ಶುದ್ಧ ಕುಡಿಯುವ ನೀರಿನ ಘಟಕವನ್ನು ಪುರಸಭೆಗೆ ಇನ್ನೂ ಹಸ್ತಾಂತರಿಸಿಲ್ಲ. ಆದರೂ ಪುರಸಭೆಯಿಂದ ಶುದ್ಧ ನೀರು ಘಟಕವನ್ನು ನಿರ್ವಹಣೆ ಮಾಡಲಾಗುತ್ತಿದೆ. ಆದರೆ ಇಲ್ಲಿನ ಅಧಿಕಾರಿಗಳು ಘಟಕ ನಿರ್ವಹಣೆಗೆ ಕಾಳಜಿ ವಹಿಸುತ್ತಿಲ್ಲ. ಪಟ್ಟಣಕ್ಕೆ 24×7 ಕುಡಿಯುವ ನೀರಿನ ಯೋಜನೆ ಜಾರಿಗೆ ತಂದ ಶಾಸಕ ಕೆ. ಶಿವನಗೌಡ ನಾಯಕ ಅವರು ಕೂಡ ಈ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಹೀಗಾಗಿ ಮಹತ್ವಾಕಾಂಕ್ಷಿ ಯೋಜನೆ ಹಳ್ಳ ಹಿಡಿಯುತ್ತಿದ್ದು, ಪಟ್ಟಣದ ಜನತೆ ಅಶುದ್ಧ ನೀರು ಕುಡಿಯುವಂತಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಘಟಕದಿಂದ ಪಟ್ಟಣದ 23 ವಾರ್ಡ್‌ಗಳಿಗೆ ನೀರು ಸರಬುರಾಜು ಮಾಡುವ ಸಿಬ್ಬಂದಿ ಸಣ್ಣಪುಟ್ಟ ದುರಸ್ತಿ ಸಮಸ್ಯೆ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ನಿರ್ವಹಣೆಗೆ ಹಣದ ಕೊರತೆ ಎಂಬ ನೆಪ ಹೇಳುತ್ತಿದ್ದಾರೆ. ಹೀಗಾಗಿ ನೀರು ಶುದ್ಧೀಕರಣ ಘಟಕದ ಒಳಗಡೆ ಏನೇ ಸಮಸ್ಯೆ ಎದುರಾದರೂ ಅಧಿಕಾರಿಗಳ ಗಮನಕ್ಕೆ ತರುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ.
ವಿದ್ಯುತ್ ಬಿಲ್ ಬಾಕಿ: ನೀರು ಶುದ್ಧೀಕರಣ ಘಟಕದ ವಿದ್ಯುತ್ ಬಿಲ್ ಕೂಡ ಬಾಕಿ ಇದೆ. ಜೆಸ್ಕಾಂಗೆ ಕೋಟ್ಯಂತರ ರೂ. ಬಾಕಿ ಕಟ್ಟಬೇಕಿದೆ. ಈ ಕುರಿತು ಜೆಸ್ಕಾಂ ಅಧಿಕಾರಿಗಳು ಹಲವು ಬಾರಿ ನೋಟಿಸ್ ನೀಡಿದ್ದರೂ ಪುರಸಭೆ ಸ್ಪಂದಿಸುತ್ತಿಲ್ಲ. ಹೀಗಾಗಿ ಜೆಸ್ಕಾಂ ಅಧಿಕಾರಿಗಳು ನೀರು ಶುದ್ಧೀಕರಣ ಘಟಕಕ್ಕೆ ವಿದ್ಯುತ್ ಸ್ಥಗಿತಗೊಳಿಸಿದಲ್ಲಿ ಕೊಳವೆಬಾವಿ ನೀರು ಕುಡಿಯವ ಪರಿಸ್ಥಿತಿ ಬಂದರೂ ಅಚ್ಚರಿಪಡಬೇಕಿಲ್ಲ.