ದೇವದುರ್ಗ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ದೇವದುರ್ಗ ಸಾರಿಗೆ ಘಟಕವು ನಷ್ಟದತ್ತ ಸಾಗಿದೆ. ಪರಿಣಾಮ ವಿವಿಧ ಮಾರ್ಗಗಳ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ನಷ್ಟದಲ್ಲಿ ಸಾರಿಗೆ ಇಲಾಖೆ: ದೇವದುರ್ಗ ಸಾರಿಗೆ ಘಟಕವು 2019ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ 4.44 ಕೋಟಿ ರೂ. ನಷ್ಟ ಅನುಭವಿಸಿದೆ. ಒಂದು ಕಿ.ಮೀ. ಬಸ್ ಓಡಾಟಕ್ಕೆ 34.80 ರೂಪಾಯಿ ವೆಚ್ಚ ಭರಿಸಲಾಗುತ್ತಿದೆ. ಡೀಸೆಲ್, ಚಾಲಕರ ದಿನದ ವೇತನ, ಬ್ಯಾಟರಿ ಸೇರಿ ಇತರೆ ಸಾಮಗ್ರಿಗಳಿಗೆ ಹಣ ನೀಡಲಾಗುತ್ತಿದೆ. ಆದರೆ ಒಂದು ಕಿ.ಮೀ.ಗೆ 28ರಿಂದ 29 ರೂ. ಆದಾಯ ಬರುತ್ತಿದ್ದು, ಪ್ರತಿನಿತ್ಯ 5 ರಿಂದ 6 ಲಕ್ಷ ರೂ. ನಷ್ಟವಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.
ನಗರಕ್ಕೆ ಬಸ್ ಬೇಡಿಕೆ: ದೇವದುರ್ಗ ಸಾರಿಗೆ ಘಟಕದಲ್ಲಿ 80 ಬಸ್‌ಗಳಿವೆ. ಅದರಲ್ಲೂ ಬಹುತೇಕವಾಗಿ ಗುಜರಿಗೆ ಹಾಕಬೇಕಾದ ಬಸ್‌ಗಳನ್ನೇ ಓಡಿಸಲಾಗುತ್ತಿದೆ. ದೇವದುರ್ಗ ಪಟ್ಟಣದಿಂದ ಹುಬ್ಬಳ್ಳಿ, ಮಂಗಳೂರು, ಹೈದರಾಬಾದ್, ಧರ್ಮಸ್ಥಳ ಸೇರಿ ಇತರೆ ನಗರಕ್ಕೆ ಬಸ್ ಓಡಿಸಲು ಪ್ರಯಾಣಿಕರಿಂದ ಬೇಡಿಕೆ ಇದೆ. ಇಲ್ಲಿಂದ ಬಸ್ ಸೌಲಭ್ಯವಿಲ್ಲದ್ದರಿಂದ ವ್ಯಾಪಾರಸ್ಥರು ರಾಯಚೂರಿನಿಂದ ಹೈದರಾಬಾದ್‌ಗೆ ಹೋಗುತ್ತಿದ್ದಾರೆ. ಇನ್ನು ಧರ್ಮಸ್ಥಳ, ಹುಬ್ಬಳ್ಳಿ, ಮಂಗಳೂರು ಜಿಲ್ಲೆಯ ಶಿಕ್ಷಕ-ಶಿಕ್ಷಕಿಯರು ತಾಲೂಕಿನ ವಿವಿಧೆಡೆಯ ಸರಕಾರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಸ್ ಸೌಲಭ್ಯವಿಲ್ಲದ್ದರಿಂದ ಇರುವುದ್ದರಿಂದ ತಿಂಥಣಿ ಬ್ರಿಜ್ ಗೆ ಹೋಗಿ ಅಲ್ಲಿಂದ ಬಸ್ ಹಿಡಿಯುತ್ತಾರೆ. ಇನ್ನು ಆದಾಯ ತರದ ಮಾರ್ಗ ಬಾಗಲಕೋಟೆ ಸೇರಿ ಇತರೆ ಮಾರ್ಗದಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.
ಉದ್ಘಾಟನೆ ಕಾಣದ ಹೈಟೆಕ್ ಬಸ್ ನಿಲ್ದಾಣ: ಕೋಟ್ಯಂತರ ರೂ. ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಇನ್ನು ಕೆಲ ಸಣ್ಣಪುಟ್ಟ ಕಾಮಗಾರಿ ಬಾಕಿ ಇದ್ದು, ವಿಶೇಷ ಅಭಿವೃದ್ಧಿ ಯೋಜನೆಯಡಿ 90 ಲಕ್ಷ ರೂ ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಮುಗಿದಿದೆ. ಬಸ್ ನಿಲ್ದಾಣ ಸುತ್ತಲೂ ಕಾಂಪೌಂಡ್, ಹೈಟೆಕ್ ಶೌಚಾಲಯ, ಸಿಸಿ ರಸ್ತೆ, ಶುದ್ಧ ಕುಡಿವ ನೀರು, ವಿದ್ಯುತ್ ಸೌಲಭ್ಯ ಕಲ್ಪಿಸಲಾಗುತ್ತಿದೆ. ಅವಧಿ ಮುಗಿದ ಬಸ್ ಸಂಚಾರ: ಸಾರಿಗೆ ನಿಯಮದಂತೆ 9 ಲಕ್ಷಕ್ಕೂ ಹೆಚ್ಚು ಕಿ.ಮೀ. ಓಡಿದ ಬಸ್‌ಗಳನ್ನು ರಸ್ತೆಗೆ ಇಳಿಸಬಾರದು ಎಂಬ ನಿಯಮ ಇದೆ. ಇಲ್ಲಿನ ಸಾರಿಗೆ ಘಟಕದಲ್ಲಿ 80 ಬಸ್‌ಗಳಿದ್ದು, ಅದರಲ್ಲಿ 20ಕ್ಕೂ ಹೆಚ್ಚು ಬಸ್‌ಗಳು 9 ಲಕ್ಷ ಕಿ.ಮೀ. ಓಡಿದ್ದು ಅವಧಿ ಮುಗಿದಿವೆ. ಇಂತಹ ಬಸ್‌ಗಳನ್ನೇ ಗ್ರಾಮೀಣ ಭಾಗಕ್ಕೆ ಓಡಿಸಲಾಗುತ್ತಿದೆ. ಈ ಬಸ್ ಗಳಿಗೆ ಕಿಟಕಿ, ಬಾಗಿಲುಗಳಿಲ್ಲ. ಸೀಟುಗಳು ಹರಿದಿವೆ. ಕೆಲವೊಮ್ಮೆ ಮಾರ್ಗ ಮಧ್ಯೆ ಕೆಟ್ಟು ನಿಲ್ಲುತ್ತಿವೆ. ಇಂತಹ ಸಮಸ್ಯೆಗಳ ಮಧ್ಯೆ ಪ್ರಯಾಣಿಕರು ಸಂಚರಿಸಬೇಕಿದೆ.
ಶೌಚಕ್ಟೆ ಹೆಚ್ಚು ಹಣ ವಸೂಲಿ: ಇನ್ನು ಇಲ್ಲಿನ ಬಸ್ ನಿಲ್ದಾಣದಲ್ಲಿ ಶೌಚಕ್ಕೆ ಮಾತ್ರ ಪ್ರಯಾಣಿಕರಿಂದ ಹಣ ಪಡೆಯಬೇಕು. ಆದರೆ ನಿರ್ವಹಣೆಗೆ ಟೆಂಡರ್ ಪಡೆದವರು ಇಲ್ಲಿ ಮೂತ್ರ ವಿಸರ್ಜನೆಗೂ 2 ರೂ. ವಸೂಲಿ ಮಾಡುತ್ತಾರೆ, ಶೌಚಕ್ಕೆ 2 ರೂ. ಪಡೆಯಬೇಕಿದ್ದು, 7 ರೂ. ವಸೂಲಿ ಮಾಡುತ್ತಿದ್ದಾರೆ. ಈ ಕುರಿತು ಸಾರಿಗೆ ಘಟಕದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಪ್ರಯಾಣಿಕರು.
ದೇವದುರ್ಗ ಸಾರಿಗೆ ಘಟಕ ಏಳು ತಿಂಗಳಲ್ಲಿ 4 ಕೋಟಿ 44 ಲಕ್ಷ ರೂ.
ನಷ್ಟ ಅನುಭವಿಸಿದೆ. ಹೈಟೆಕ್ ಬಸ್ ನಿಲ್ದಾಣದ ಎರಡನೇ ಹಂತದ ಕಾಮಗಾರಿಗೆ 90 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ದೇವದುರ್ಗ ಘಟಕದಿಂದ ಹುಬ್ಬಳಿ, ಹೈದರಾಬಾದ್, ಮಂಗಳೂರು ಜಿಲ್ಲೆಗೆ ಬಸ್ಸಿನ ಬೇಡಿಕೆ ಇದೆ. ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮವಹಿಸಲಾಗುತ್ತದೆ.
ಹಸನ್ ಅಲಿ,
ದೇವದುರ್ಗ ಸಾರಿಗೆ ಘಟಕ ವ್ಯವಸ್ಥಾಪಕ
ನಾಗರಾಜ ತೇಲ್ಕರ್