ದೇವದುರ್ಗ: ಪಟ್ಟಣ ಸೇರಿ ತಾಲೂಕಿನಾದ್ಯಂತ 476 ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು ಖರೀದಿಸಿದ ಮೊಟ್ಟೆಯ ಅನುದಾನ ನಾಲ್ಕು ತಿಂಗಳಿಂದ ಬಿಡುಗಡೆಯಾಗಿಲ್ಲ. ಸೆಪ್ಟೆಂಬರ್ ತಿಂಗಳಿಂದ ಡಿಸೆಂಬರ್‌ವರೆಗೆ ಕಾರ್ಯಕರ್ತೆಯರೇ ಖರೀದಿಸಿದ್ದಾರೆ. ಜನವರಿ ತಿಂಗಳು ಸಿರವಾರ ಮೂಲದ ಖಾಸಗಿ ವ್ಯಕ್ತಿಯೊಬ್ಬರು ಮೊಟ್ಟೆಗಳು ಪೂರೈಸಿದ್ದಾರೆ. ಜನವರಿ ತಿಂಗಳು ಅನುದಾನ 21 ಲಕ್ಷ ಇದೀಗ ಬಾಲ ವಿಕಾಸ ಸಂಸ್ಥೆಯ ಖಾತೆಗೆ ಜಮಾ ಆಗಿದೆ. ನಾಲ್ಕು ತಿಂಗಳ ಬಾಕಿ ಹಣ ಬಾರದೇ ಜನವರಿ ತಿಂಗಳ ಅನುದಾನ ಹೇಗೆ ಬಂತು ಕಾರ್ಯಕರ್ತೆಯರು ಹಣ ಡ್ರಾ ಮಾಡಿ ಖಾಸಗಿ ವ್ಯಕ್ತಿಗೆ ನೀಡದೇ ಹಿಂದೇಟು ಹಾಕುವುದರಿಂದ ಇದೀಗ ಗೊಂದಲ ಶುರುವಾಗಿದೆ.
ನಿಯಮ ಉಲ್ಲಂಘನೆ: ತಾಲೂಕಿನ 476 ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ, ಗರ್ಭಿಣಿ ಮತ್ತು ಬಾಣಂತಿಯರಿಗೆ ಪೂರೈಸುವ ಮೊಟ್ಟೆಗಳು ಕಾರ್ಯಕರ್ತೆಯರೇ ಖರೀದಿಸಬೇಕು. ಸರಕಾರ ಬಾಲ ವಿಕಾಸ ಸಂಸ್ಥೆಯ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ. ಸಿರವಾರದ ವ್ಯಕ್ತಿಯೊಬ್ಬರು ನಿಯಮ ಮೀರಿ ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆಗಳು ಪೂರೈಸುತ್ತಿದ್ದಾರೆ. ನಿಯಮ ಇಲ್ಲದಿದ್ದರು ಅಧಿಕಾರಿಗಳೇ ಹಣ ಡ್ರಾ ಮಾಡಿ ಪೂರೈಸಿದ ವ್ಯಕ್ತಿಯೊಬ್ಬರಿಗೆ ಹಣ ನೀಡುವಂತೆ ಕಾರ್ಯಕರ್ತೆಯರಿಗೆ ಹೇಳುತ್ತಿದ್ದಾರೆ ಎನ್ನಲಾಗುತ್ತಿದೆ.
ಏನಿದು ಯೋಜನೆ?: ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ, ಗರ್ಭಿಣಿ ಮತ್ತು ಬಾಣಂತಿಯರಿಗೆ ಪೂರೈಸುವ ಮೊಟ್ಟೆಗಳು ಕಾರ್ಯಕರ್ತೆಯರೇ ಖರೀದಿಸಬೇಕು. ಪ್ರತಿ ತಿಂಗಳು ಮಕ್ಕಳ ಮತ್ತು ಬಾಣಂತಿಯರ ಗರ್ಭಿಣಿ ಸಂಖ್ಯೆಗೆ ಅನುಗುಣವಾಗಿ ವರದಿ ನೀಡಬೇಕು. ಬಾಲ ವಿಕಾಸ ಸಂಸ್ಥೆ ಹೆಸರಲ್ಲಿ ಬ್ಯಾಂಕ್‌ನಲ್ಲಿ ಕಾರ್ಯಕರ್ತೆ ಮಕ್ಕಳ ತಾಯಿ ಜಂಟಿ ಖಾತೆ ತೆಗೆಯಬೇಕು. ಸರಕಾರ ತಿಂಗಳ ಖರೀದಿಸಿದ ಮೊಟ್ಟೆದ ಹಣವನ್ನು ಖಾತೆ ಜಮಾ ಮಾಡಲಾಗುತ್ತಿದೆ. ತಾಲೂಕಿನಲ್ಲಿ ಈ ಯೋಜನೆ ಬಹುತೇಕ ನಿಯಮ ಪಾಲನೆ ಆಗುತ್ತಿಲ್ಲ.
ಲಕ್ಷಾಂತರ ರೂ. ಬಾಕಿ: ತಾಲೂಕಿನ 476 ಅಂಗನವಾಡಿ ಕೇಂದ್ರಗಳಿಗೆ ಕಾರ್ಯಕರ್ತೆಯರು ಖರೀದಿಸಿರುವ ಮೊಟ್ಟೆಗಳ ಹಣ ಸರಕಾರ ನಾಲ್ಕು ತಿಂಗಳವಾದರೂ ಜಮಾ ಮಾಡದೇ ಮೀನಮೇಷ ಎಣಿಸುತ್ತಿರುವ ಹಿನ್ನೆಲೆ ಕಚೇರಿಗೆ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ತಿಂಗಳಿಗೆ 18 ಲಕ್ಷದಿಂದ 20ಲಕ್ಷವರೆಗೆ ಮೊಟ್ಟೆ ಬಿಲ್ ಆಗುವುದರಿಂದ 62 ಲಕ್ಷದಿಂದ 80 ಲಕ್ಷವರೆಗೆ ಬರಬೇಕಾದ ಬಾಕಿ ಹಣ ನಾಲ್ಕು ತಿಂಗಳಿಂದ ಸರಕಾರ ಬಿಡುಗಡೆ ಮಾಡುತ್ತಿಲ್ಲ.
ಬಾಡಿಗೆ ಕಟ್ಟಡಕ್ಕೆ ಹಣ ಇಲ್ಲ: ಪಟ್ಟಣ ಸೇರಿ ತಾಲೂಕಿನಾದ್ಯಂತ 100ಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಗ್ರಾಮೀಣ ಪ್ರದೇಶದ ಕೇಂದ್ರಕ್ಕೆ ತಿಂಗಳಿಗೆ 750 ರೂ. ಪಟ್ಟಣದಲ್ಲಿರುವ ಕೇಂದ್ರಗಳಿಗೆ ತಿಂಗಳ 2 ಸಾವಿರ ನಿಗದಿ ಮಾಡಲಾಗಿದೆ. ವರ್ಷಕ್ಕೆ ಒಂದೇ ಬಾರಿ ಹಣ ಜಮಾ ಮಾಡಲಾಗುತ್ತದೆ. ಮಾರ್ಚ್ ಮುಗಿದು ಮೇ ತಿಂಗಳು ಆರಂಭವಾಗುತ್ತಿದ್ದು, ಇಲ್ಲಿವರೆಗೆ ಬಾಡಿಗೆ ಹಣ ಜಮಾ ಮಾಡಲು ಅಧಿಕಾರಿಗಳು ಹಿಂಜರಿಯುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಕಾರ್ಯಕರ್ತೆ ತಿಳಿಸಿದರು.
ಜನವರಿ ತಿಂಗಳು ಕೇಂದ್ರಗಳಿಗೆ ಪೂರೈಸಿದ ಮೊಟ್ಟೆಯ ಅನುದಾನ 21 ಲಕ್ಷ ಬಿಡುಗಡೆಯಾಗಿದೆ. ಸರಬರಾಜು ಮಾಡಿದ ವ್ಯಕ್ತಿಗೆ ಹಣ ನೀಡುವಂತೆ ಕಾರ್ಯಕರ್ತೆಯರಿಗೆ ಸೂಚನೆ ನೀಡಲಾಗಿದೆ. ಗ್ರಾಮೀಣ ಮತ್ತು ಪಟ್ಟಣದ ಕೇಂದ್ರಗಳ ಬಾಡಿಗೆ ಹಣ ವಾರದಲ್ಲಿ ಜಮಾ ಮಾಡುತ್ತೇವೆ.
•ಹೊಸಮನಿ, ಪ್ರಭಾರಿ ಸಿಡಿಪಿಒ
ಸಿಬ್ಬಂದಿ ಕೊರತೆ ಹಿನ್ನೆಲೆ ನಿಗದಿತ ಅವಧಿಗೆ ಸಾರ್ವಜನಿಕರ ಕೆಲಸ ಕಾರ್ಯಗಳು ಆಗುತ್ತಿಲ್ಲ. ಕಚೇರಿಗೆ ಅಲೆಯಬೇಕಾಗಿದೆ. ಕೇಂದ್ರಗಳಿಗೆ ಮೂಲ ಸೌಲಭ್ಯಗಳ ಕೊರತೆ ಹೆಚ್ಚಿದೆ.
•
ವೀರಮ್ಮ ಅಗಳಕೇರ,
ಹೈ.ಕ ವಿಮೋಚನಾ ಮಹಿಳಾ ಘಟಕ ಅಧ್ಯಕ್ಷೆ.