Advertisement

ತಾಪಂ ಅಧ್ಯಕ್ಷರ ವಿರುದ್ಧ ಸದಸ್ಯರ ಅಸಮಾಧಾನ

03:08 PM Jan 25, 2020 | Naveen |

ದೇವದುರ್ಗ: ತಾಲೂಕು ಪಂಚಾಯಿತಿ ಲಿಂಕ್‌ ಡಾಕುಮೆಂಟ್‌ ಯೋಜನೆಯ ಅನುದಾನ 73.87 ಲಕ್ಷ ರೂ.ಗಳ ಕ್ರಿಯಾ ಯೋಜನೆಯನ್ನು ಸದಸ್ಯರ ಗಮನಕ್ಕೆ ತಾರದೇ ಅಧ್ಯಕ್ಷರು ರೂಪಿಸಿದ್ದಾರೆ ಎಂದು ಕಾಂಗ್ರೆಸ್‌ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲಿಂಕ್‌ ಡಾಕುಮೆಂಟ್‌ ಯೋಜನೆಯಡಿ 73.87 ಲಕ್ಷ ರೂ. ಮೊತ್ತದ ಕ್ರಿಯಾಯೋಜನೆ ತಯಾರಿ ವೇಳೆ ಕಾಂಗ್ರೆಸ್‌ ಸದಸ್ಯರ ಕ್ಷೇತ್ರಗಳನ್ನು ಕಡೆಗಣಿಸಿ ಬಿಜೆಪಿ ಸದಸ್ಯರ ಕ್ಷೇತ್ರಕ್ಕೆ ಆದ್ಯತೆ ನೀಡಲಾಗಿದೆ.

Advertisement

ಕ್ರಿಯಾಯೋಜನೆ ತಯಾರಿಸುವಾಗ ತಾಪಂ ಸರ್ವ ಸದಸ್ಯರ ಅಭಿಪ್ರಾಯ ಪಡೆದು ಆರೂಪಿಸಬೇಕು. ಆದರೆ ತಾಪಂ ಅಧ್ಯಕ್ಷ ಹನುಮಂತ ಕಟ್ಟಿಮನಿ ಕಾಂಗ್ರೆಸ್‌ ಸದಸ್ಯರ ಗಮನಕ್ಕೇ ತಾರದೇ ಕ್ರಿಯಾಯೋಜನೆ ರೂಪಿಸಿದ್ದಾರೆ. ಈ ಕ್ರಿಯಾಯೋಜನೆ ರದ್ದು ಮಾಡುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರಲು ಕೆಲ ಸದಸ್ಯರು ಮುಂದಾಗಿದ್ದಾರೆ ಎನ್ನಲಾಗಿದೆ.

73.87 ಲಕ್ಷ ರೂ. ಅನುದಾನ: ತಾಲೂಕು ಪಂಚಾಯಿತಿ 2019-20ನೇ ಸಾಲಿನ ಲಿಂಕ್‌ ಡಾಕುಮೆಂಟ್‌ ಯೋಜನೆಯಡಿ 73.87 ಲಕ್ಷ ರೂ. ಅನುದಾನವನ್ನು ಸರಕಾರದ ವಿವಿಧ ಇಲಾಖೆ ಕಟ್ಟಡಗಳ ಸಣ್ಣಪುಟ್ಟ ದುರಸ್ತಿಗಾಗಿ ಮೀಸಲಿಡಲಾಗಿದೆ. ಸೇರ್ಪಡೆ ಮತ್ತು ಮಾರ್ಪಾಡಿಗಾಗಿ ಶಿಕ್ಷಣ ಇಲಾಖೆಗೆ 26 ಲಕ್ಷ ರೂ. ಸರಕಾರಿ ಆರೋಗ್ಯ ಕೇಂದ್ರಗಳ ಕಟ್ಟಡ ದುರಸ್ತಿಗೆ 6 ಲಕ್ಷ 37 ಸಾವಿರ. ಪರಿಶಿಷ್ಟ ಪಂಗಡ ಮೆಟ್ರಕ್‌ ನಂತರ ಸರಕಾರಿ ವಿದ್ಯಾಭ್ಯಾಸ ವಸತಿ ನಿಲಯಗಳ ಅಭಿವೃದ್ಧಿಗೆ 16.50 ಲಕ್ಷ ರೂ. ಮೀಸಲಿದೆ. ಬಿಸಿಎಂ ವಸತಿ ನಿಲಯಕ್ಕೆ 6 ಲಕ್ಷ 20 ಸಾವಿರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 9 ಲಕ್ಷ 60 ಸಾವಿರ, ರಸ್ತೆ ಮತ್ತು ಸಣ್ಣಪುಟ್ಟ ಸಿಡಿ ನಿರ್ಮಾಣಕ್ಕೆ 8 ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ.

ಯಾವ ಕಾಮಗಾರಿ: ಲಿಂಕ್‌ ಡಾಕುಮೆಂಟ್‌ ಅನುದಾನದಲ್ಲಿ ಶಿಥಿಲಗೊಂಡ ಸರಕಾರಿ ಶಾಲೆ, ಅಂಗನವಾಡಿ ಕೇಂದ್ರ ಕಟ್ಟಡಗಳ ದುರಸ್ತಿ, ಸುಣ್ಣಬಣ್ಣ, ಕುಡಿಯುವ ನೀರಿನ ಸೌಕರ್ಯ ಒದಗಿಸುವುದು. ವಸತಿ ನಿಲಯಗಳ ನಿರ್ವಹಣೆ, ಸುಣ್ಣಬಣ್ಣ, ಸಣ್ಣಪುಟ್ಟ ದುರಸ್ತಿ, ಗ್ರಾಮಗಳಲ್ಲಿ ಕಿತ್ತಿ ಹೋದ ರಸ್ತೆಗಳಿಗೆ ಮರಂ ಹಾಕಲು, ಸಿಡಿಗಳ ನಿರ್ಮಾಣಕ್ಕೆ ಅನುದಾನ ಬಳಸಬಹುದಾಗಿದೆ. ಈ ಹಿಂದೆ ತಾಪಂ ಸಾಮಾನ್ಯ ಸಭೆಯಲ್ಲಿ ಲಿಂಕ್‌ ಡಾಕುಮೆಂಟ್‌ ಅನುದಾನವನ್ನು ಎಲ್ಲ ಸದಸ್ಯರ ಕ್ಷೇತ್ರಕ್ಕೆ ಮೀಸಲಿಡಲು ತೀರ್ಮಾನಿಸಲಾಗಿತ್ತು. ಆದರೆ ಈಗ ಕಾಂಗ್ರೆಸ್‌ ಸದಸ್ಯರ ಕ್ಷೇತ್ರಗಳನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿಬರುತ್ತಿದ್ದು, ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಕ್ರಿಯಾಯೋಜನೆ ರೂಪಿಸಬೇಕೆಂದು ಕಾಂಗ್ರೆಸ್‌ ಸದಸ್ಯರು ಆಗ್ರಹಿಸಿದ್ದಾರೆ.

ಲಿಂಕ್‌ ಡಾಕುಮೆಂಟ್‌ ಅನುದಾನ ಎಲ್ಲಿ ಅವಶ್ಯಕತೆ ಇದೆಯೋ ಅಲ್ಲಿ ಬಳಸಲಾಗುತ್ತಿದೆ. ಎಲ್ಲ ಸದಸ್ಯರ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಮೀಸಲಿಡಲಾಗಿದೆ. ಇಲ್ಲಿ ಯಾರನ್ನೂ ಕಡೆಗಣಿಸಿಲ್ಲ.
. ಹಾಲಸಿದ್ದಪ್ಪ ಪೂಜೇರಿ,
ತಾಪಂ ಇಒ

Advertisement

ಸದಸ್ಯರ ಗಮನಕ್ಕೆ ತರದೇ ಶಾಸಕರ ಆಪ್ತರ ಸೂಚನೆಯಂತೆ ಅಧ್ಯಕ್ಷರೇ ಏಕಪಕ್ಷೀಯ ನಿರ್ಧಾರದಿಂದ ಕ್ರಿಯಾಯೋಜನೆ ರೂಪಿಸಿದ್ದಾರೆ. ಕಾಂಗ್ರೆಸ್‌ ಸದಸ್ಯರ ಕ್ಷೇತ್ರಗಳನ್ನು ಕಡೆಗಣಿಸಿ ತಾರತಮ್ಯ ನೀತಿ ಅನುಸರಿಸಿದ್ದಾರೆ.
.ಗೋವಿಂದರಾಜ ನಾಯಕ,
ಕೊತ್ತದೊಡ್ಡಿ ತಾ.ಪಂ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next