Advertisement

ಕೃಷಿ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿಗೆ ಆಕ್ರೋಶ

07:20 PM Sep 06, 2019 | Naveen |

ದೇವದುರ್ಗ: ಕೃಷಿ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿಗೆ ತಾಪಂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ಗುರುವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಜರುಗಿತು.

Advertisement

ತಾಪಂ ಅಧ್ಯಕ್ಷ ಹನುಮಂತಪ್ಪ ಕಟ್ಟಿಮನಿ ಮಿಯ್ನಾಪುರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾಪಂ ಸದಸ್ಯರಾದ ಗೋವಿಂದರಾಜ ನಾಯಕ, ಮಲ್ಲಿನಾಥಗೌಡ ಪಲಕನಮರಡಿ, ಹನುಮಯ್ಯ ಭೂಮನಗುಂಡ ಇತರರು ಮಾತನಾಡಿ, ಕೃಷಿ ಇಲಾಖೆಯಲ್ಲಿ ಅರ್ಹ ರೈತರಿಗೆ ಸೌಲಭ್ಯಗಳು ಸಿಗುತ್ತಿಲ್ಲ. ಮಧ್ಯವರ್ತಿಗಳಿಗೆ ಸಾವಿರಾರು ರೂ. ಲಂಚ ಕೊಟ್ಟರೆ ಮಾತ್ರ ಕೃಷಿ ಉಪಕರಣಗಳು ಸಿಗುತ್ತವೆ ಎಂದು ದೂರಿದರು. ಆನ್‌ಲೈನ್‌ ಅರ್ಜಿ ಸಲ್ಲಿಸಬೇಕೆನ್ನುತ್ತಿರಿ. ಆದರೆ ಮಧ್ಯವರ್ತಿಗಳಿಗೆ ಅದ್ಹೇಗೆ ನಿಗದಿತ ಅವಧಿಯೊಳಗೆ ಸೌಲಭ್ಯ ಒದಗಿಸುತ್ತಿರಿ ಎಂದು ಕೃ ಇಲಾಖೆ ಸಹಾಯಕ ಅಧಿಕಾರಿ ಸಿದ್ದಾರೆಡ್ಡಿ ಅವರನ್ನು ಪ್ರಶ್ನಿಸಿದರು.

60 ವರ್ಷ ಆದ ಅಂಗನವಾಡಿ ಕಾಯಕರ್ತೆಯರು ಮತ್ತು ಸಹಾಯಕಿಯರಿಗೆ ನಿವೃತ್ತಿ ನೀಡಲಾಗುವುದು. ಈಗಾಗಲೇ ಈ ಕುರಿತು ಎಲ್ಲ ಅಂಗನವಾಡಿ ಕೇಂದ್ರಗಳ ಸಿಬ್ಬಂದಿ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಮೊಟ್ಟೆ ಖರಿದೀಸಿ ವಿತರಿಸುವುದು ಕಾರ್ಯಕರ್ತೆಯರ ಕರ್ತವ್ಯ. ಮೊಟ್ಟೆ ಖರೀದಿ ಮೊತ್ತವನ್ನು ಬಾಲವಿಕಾಸ ಸಮಿತಿ ಖಾತೆಗೆ ಜಮೆ ಮಾಡಲಾಗುವುದು ಎಂದು ಸಿಡಿಪಿಒ ಇಲಾಖೆ ಮೇಲ್ವಿಚಾರಕಿ ಲತಾ ಸಭೆಗೆ ತಿಳಿಸಿದರು.

ಸದಸ್ಯ ಮಹಾದೇವಪ್ಪ ಮಾತನಾಡಿ, ಬಹುತೇಕ ಅಂಗನವಾಡಿಗಳಲ್ಲಿ ಮೊಟ್ಟೆ ವಿತರಿಸುತ್ತಿಲ್ಲ. ಬುದ್ದಿನ್ನಿ ಗ್ರಾಮದಲ್ಲಿ 2 ಅಂಗನವಾಡಿ ಕೇಂದ್ರಗಳಿದ್ದರೂ ಸರಿಯಾಗಿನಡೆಯುತ್ತಿಲ್ಲ. ಮಕ್ಕಳಿಗೆ, ಗರ್ಭಿಣಿಯರಿಗೆ ಏನೂ ಕೊಡುತ್ತಿಲ್ಲ ಎಂದು ದೂರಿದರು.

ತಾಪಂ ಅಧ್ಯಕ್ಷ ಹನುಮಂತಪ್ಪ ಕಟ್ಟಿಮನಿ ಮಿಯ್ನಾಪುರ ಮಾತನಾಡಿ, ಎಜಿ ಕಾಲೋನಿ, ಹೇಮನೂರ ಗ್ರಾಮಗಳ ಅಂಗನವಾಡಿ ಕೇಂದ್ರಗಳ ಹುದ್ದೆ ಭರ್ತಿ ವಿಳಂಬವಾಗುತ್ತಿದೆ. ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಕೇಂದ್ರಗಳ ಮಂಜೂರಾತಿಗೆ ಮೇಲಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.

Advertisement

ತಾಪಂ ಸದಸ್ಯ ಗೋಪಾಲಪ್ಪಗೌಡ ಮಾತನಾಡಿ, ಶಿಕ್ಷಣ ಇಲಾಖೆಯಲ್ಲಿ ಶಾಲಾ ಕಟ್ಟಡಗಳಿಗೆ ಅನುದಾನ ಇದ್ದರೂ ಪ್ರಯೋಜನವಿಲ್ಲ ದಂತಾಗಿದೆ. ಶಾಸಕ ಕೆ.ಶಿವನಗೌಡ ನಾಯಕ ಸೂಚನೆ ನೀಡಿದರೂ ಕಟ್ಟಡದ ಹಣವನ್ನು ಜಿಪಂ ಇಂಜನೀಯರಿಂಗ್‌ ವಿಭಾಗಕ್ಕೆ ವರ್ಗಾಯಿಸಿಲ್ಲ ಎಂದು ಸಭೆ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಬಿಇಒ ಡಾ| ಎಸ್‌. ಎಂ. ಹತ್ತಿ, ಇಲಾಖೆಯಲ್ಲಿ ಇಂಜಿನೀಯರಿಂಗ್‌ ವಿಭಾಗವಿಲ್ಲ. ಅನುದಾನ ವರ್ಗಾಯಿಸಲು ನಮಗೆ ಅಧಿಕಾರವಿಲ್ಲ. ಮೇಲಕಾರಿಗಳ ಗಮನಕ್ಕೆ ತರಲಾಗಿದೆ ಎಂದರು.

ತಾಲೂಕಿನಲ್ಲಿ ಶಿಕ್ಷಕರು ಹೊಂದಾಣಿಕೆ ಮೇರೆಗೆ ಅನಧಿಕೃತವಾಗಿ ರಜೆ ಮಾಡುತ್ತಿದ್ದಾರೆ. ಶಾಲೆಯಲ್ಲಿ ಮೊಬೈಲ್ ಬಳಸಬಾರದೆಂಬ ನಿಯಮ ಪಾಲನೆ ಆಗುತ್ತಿಲ್ಲ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಬಿಇಒಗೆ ಸೂಚಿಸಲಾಯಿತು.

ಶೂ ಮತ್ತು ಸಾಕ್ಸ್‌ ಖರೀದಿಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಸದಸ್ಯರು ಬಿಆರ್‌ಸಿ ಶಿವರಾಜ ಬಿರಾದಾರ ಅವರನ್ನು ತರಾಟೆಗೆ ತೆಗೆದುಕೊಂಡು, ಶೂ, ಸಾಕ್ಸ್‌ ಖರೀದಿಗೆ ಮುಖ್ಯಗುರು ಮತ್ತು ಎಸ್‌ಡಿಎಂಸಿಗೆ ನೇರ ಅಧಿಕಾರ ನೀಡಿ ಅವರೇ ಖರೀದಿಸಲಿ ಎಂದರು.

ಸಭೆಯಲ್ಲಿ ಕೃಷಿ, ರೇಷ್ಮೆ, ಜಿಪಂ ಇಂಜಿನೀಯರಿಂಗ್‌, ಸಮಾಜ ಕಲ್ಯಾಣ, ತೋಟಗಾರಿಕೆ, ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ, ಬಿಸಿಎಂ, ಕ್ಯಾಶುಟೆಕ್‌ ಸೇರಿ ಇತರೆ ಇಲಾಖೆಗಳ ಪ್ರಗತಿ ಪರಿಶೀಲಿಸ‌ಲಾಯಿತು.

ತಾಪಂ ಉಪಾಧ್ಯಕ್ಷೆ ರುಕ್ಮಿಣಿ ಶಿವರಾಜ ನಾಯಕ ಗಲಗ, ಇಒ ಹಾಲಸಿದ್ದಪ್ಪ ಪೂಜಾರಿ, ಪ್ರಭಾರಿ ಸಹಾಯಕ ನಿರ್ದೇಶಕ ಬಸಣ್ಣ ಹೇಮನೂರ ಸೇರಿ ಇತರೆ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next