Advertisement

ಶೂ-ಸಾಕ್ಸ್‌ ಪೂರೈಕೆಗೆ ಪೈಪೋಟಿ

01:39 PM Sep 05, 2019 | Team Udayavani |

ನಾಗರಾಜ ತೇಲ್ಕರ್‌
ದೇವದುರ್ಗ
: ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಶೂ-ಸಾಕ್ಸ್‌ಗಳನ್ನು ಶಾಲಾ ಹಂತದಲ್ಲೇ ಖರೀದಿಸಬೇಕಿರುವುದರಿಂದ ಪೂರೈಕೆಗೆ ಅಂಗಡಿಯವರು ನಾ ಮುಂದು, ತಾ ಮುಂದು ಎಂದು ಪೈಪೋಟಿಗೆ ಬಿದ್ದಿದ್ದು, ರಾಜಕೀಯ ಒತ್ತಡ ತರುತ್ತಿದ್ದಾರೆ. ಹೀಗಾಗಿ ಶಾಲಾ ಮಕ್ಕಳಿಗೆ ಶೂ-ಸಾಕ್ಸ್‌ ಪೂರೈಕೆ ವಿಳಂಬವಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

Advertisement

ರಾಜ್ಯ ಸರ್ಕಾರ ಶೂ ಸಾಕ್ಸ್‌ ಖರೀದಿಗೆ ತಾಲೂಕಿಗೆ 1.27 ಕೋಟಿ ಅನುದಾನ ಬಿಡುಗಡೆ ಮಾಡಿದೆ. ತಾಲೂಕಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಸೇರಿ 347 ಶಾಲೆಗಳಿವೆ. ಆಯಾ ಶಾಲೆಗಳ ತರಗತಿವಾರು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅನುದಾನ ಶಾಲೆಗೆ ಬಿಡುಗಡೆ ಆಗಿದೆ. 1ರಿಂದ 5ನೇ ತರಗತಿ ಮಕ್ಕಳಿಗೆ 265ರೂ. 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ 295ರೂ. 9ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ 325 ರೂ. ಅನುದಾನ ನೀಡಲಾಗಿದೆ. ಎಸ್‌ಡಿಎಂಸಿ ಮತ್ತು ಮುಖ್ಯ ಶಿಕ್ಷಕರನ್ನೊಳಗೊಂಡ ಸಮಿತಿ ಅಂಗಡಿಕಾರರಿಂದ ಮೂರು ಕೊಟೇಶನ್‌ ಪಡೆಯಬೇಕು. ಇದರಲ್ಲಿ ಯಾರು ದರ ಕಡಿಮೆ ನಮೂದಿಸಿರುತ್ತಾರೋ ಅವರ ಬಳಿ ಶೂ-ಸಾಕ್ಸ್‌ ಖರೀದಿಸಬೇಕೆಂಬುದು ಶಿಕ್ಷಣ ಇಲಾಖೆ ನಿಯಮ.

ರಾಜಕೀಯ ಒತ್ತಡ: ಆದರೆ ಶೂ-ಸಾಕ್ಸ್‌ ಪೂರೈಕೆಗೆ ಅಂಗಡಿಕಾರರು ಪೈಪೋಟಿ ನಡೆಸಿದ್ದಾರಲ್ಲದೇ ರಾಜಕೀಯ ನಾಯಕರ ಮೂಲಕ ಮುಖ್ಯ ಶಿಕ್ಷಕರ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ರಾಯಚೂರು ಮೂಲದ ಖಾಸಗಿ ಅಂಗಡಿಯೊಬ್ಬರಿಗೆ ಶೂ ಸಾಕ್ಸ್‌ ಪೂರೈಸಲು ಪ್ರಭಾವಿ ನಾಯಕರೊಬ್ಬರು ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ. ರಾಯಚೂರು ಜಿಪಂ ಅಧ್ಯಕ್ಷರ ಬೆಂಬಲಿಗರು ಶೂ ಸಾಕ್ಸ್‌ ಪೂರೈಸಲು ದುಂಬಾಲು ಬಿದ್ದಿದ್ದಾರೆ ಎನ್ನಲಾಗುತ್ತಿದೆ.

ಶಾಲಾ ಹಂತದಲ್ಲೇ ಶೂ-ಸಾಕ್ಸ್‌ ಖರೀದಿಸಬೇಕಿದೆ. ಅಂಗಡಿಗಳವರು ಶೂ ಸಾಕ್ಸ್‌ ಪೂರೈಕೆಗೆ ಪೈಪೋಟಿ ನಡೆಸಿದ್ದು, ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಇನ್ನು ಗ್ರಾಮೀಣ ಶಾಲೆಗಳ ಮುಖ್ಯ ಶಿಕ್ಷಕರ ಮೇಲೆ ತಾಪಂ, ಗ್ರಾಪಂ ಸದಸ್ಯರು ಇಂಥವರ ಬಳಿಯೇ ಖರೀದಿಸಬೇಕೆಂಬ ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿವೆ. ಕಳೆದ ವರ್ಷವೂ ರಾಜಕೀಯ ಒತ್ತಡದಿಂದಾಗಿ ಕಳಪೆ ಗುಣಮಟ್ಟದ ಶೂ-ಸಾಕ್ಸ್‌ಗಳನ್ನು ಶಾಲೆಗಳಿಗೆ ಪೂರೈಸಲಾಗಿತ್ತು. ಇವು ಆರೇಳು ತಿಂಗಳಲ್ಲೇ ಕಿತ್ತು ಹೋಗಿದ್ದವು. ಇಷ್ಟೆಲ್ಲ ಅವಾಂತರ ಸೃಷ್ಠಿಯಾದರೂ ಬಡಮಕ್ಕಳ ಶೂ ಸಾಕ್ಸ್‌ ಖರೀದಿಯಲ್ಲಿ ರಾಜಕೀಯ ಕರಿನೆರಳು ಬೀರುತ್ತಿರುವುದು ದುರಂತ ಸಂಗತಿ.

Advertisement

Udayavani is now on Telegram. Click here to join our channel and stay updated with the latest news.

Next