ನಾಗರಾಜ ತೇಲ್ಕರ್
ದೇವದುರ್ಗ: ಪಟ್ಟಣ ಸೇರಿ ಜಾಲಹಳ್ಳಿ ಗ್ರಾಮದಲ್ಲಿ ನಿರ್ಮಿಸಲಾದ ಶಾದಿಮಹಲ್ ಕಾಮಗಾರಿ ಅಪೂರ್ಣವಾಗಿದ್ದು, ಜಾಲಿ ಗಡಿಗಳ ಮಧ್ಯೆ ಕಟ್ಟಡಗಳು ಮುಚ್ಚಿ ಹೋಗಿವೆ.
ಆರೇಳು ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಂಡು ಮುಸ್ಲಿಂ ಸಮುದಾಯದ ಮದುವೆ, ಸಭೆ ಸಮಾರಂಭಕ್ಕೆ ಅನುಕೂಲ ಕಲ್ಪಿಸಬೇಕಾದ
ಜನಪತ್ರಿನಿಧಿಗಳು ಮತ್ತು ಅಧಿಕಾರಿಗಳು ಕಣ್ಣೆತ್ತಿ ನೋಡದೇ ಇರುವುದರಿಂದ ಸಮಾಜಕ್ಕೆ ಅನಾನುಕೂಲವಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಅಲ್ಪಸಂಖ್ಯಾತರ ಮದುವೆ, ಸಭೆ ಸಮಾರಂಭಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದ ಹಿನ್ನೆಲೆಯಲ್ಲಿ ಜಾಲಹಳ್ಳಿ ಗ್ರಾಮದ ಹೊರವಲಯದಲ್ಲಿ ಶಾದಿಮಹಲ್ ಕಟ್ಟಡ ಸುಮಾರು ವರ್ಷಗಳಿಂದ ಪೂರ್ಣಗೊಳ್ಳದೇ ಅಪೂರ್ಣ ಸ್ಥಿತಿಯಲ್ಲಿದೆ. ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ ತಮ್ಮ ಅಧಿಕಾರ ಅವಧಿಯಲ್ಲಿ ಶಾದಿಮಹಲ್ ಕಾಮಗಾರಿಗೆ ಚಾಲನೆ ನೀಡಿದ್ದರು. ಬದಲಾದ ಸರಕಾರಗಳು ಕಾಮಗಾರಿ ಪೂರ್ಣಗೊಳಿಸಲು ಅನುದಾನ ನೀಡದೇ ಇರುವುದರಿಂದ ಇದೀಗ ಶಾದಿಮಹಲ್ ಜಾಲಿಗಿಡಗಳ ಮಧ್ಯ ಅನಾಥವಾಗಿದೆ. 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಶಾದಿಮಹಲ್ ಕಾಮಗಾರಿ ಶೇ.75ರಷ್ಟು ಪೂರ್ಣವಾಗಿದೆ. ಉಳಿದ ಕೆಲಸ ಮುಗಿಸಲು ಅನುದಾನ ನೀಡುವಂತೆ ಸಂಬಂಧಪಟ್ಟವರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಮತ್ತು ಅಧಿಕಾರಿಗಳ ಬೇಜವಾಬ್ದಾರಿಯಿಂದ ಇದೀಗ ಕಟ್ಟಡ ನಿರುಪಯುಕ್ತವಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಹಟ್ಟಿ ಚಿನ್ನದ ಗಣಿ ಕಂಪನಿ ವತಿಯಿಂದ 50 ಲಕ್ಷ ರೂ. ಅನುದಾನದಲ್ಲಿ ಪಟ್ಟಣದ ಮಾಳಗಡ್ಡಯಲ್ಲಿ ಶಾದಿಮಹಲ್ ನಿರ್ಮಾಣ ಜವಾಬ್ದಾರಿಯನ್ನು ಲ್ಯಾಂಡ್‌ಆರ್ಮಿ ಸಂಸ್ಥೆಗೆ ವಹಿಸಲಾಗಿತ್ತು. ಶಾದಿಮಹಲ್ ಕಟ್ಟಡ ಪೂರ್ಣಗೊಳ್ಳುವ ಮೊದಲೇ ಅನುದಾನ ಖರ್ಚಾಗಿದೆ ಎನ್ನಲಾಗುತ್ತಿದೆ. ಕಟ್ಟಡ ಸುತ್ತಲೂ ಜಾಲಿಗಿಡಗಳು ಬೆಳೆದು ನಿಂತಿವೆ. ಶೇ.90ರಷ್ಟು ಕೆಲಸ ಪೂರ್ಣವಾಗಿದೆ. ಆರೇಳು ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಮುಗಿಯುತ್ತದೆ. ವಿದ್ಯುತ್, ಸುಣ್ಣಬಣ್ಣ ಇತರೆ ಸಣ್ಣಪುಟ್ಟ ಕೆಲಸಗಳು ಬಾಕಿ ಇದ್ದು, ಸಮಾಜದ ಮುಖಂಡರು ಶಾದಿಮಹಲ್ ಕಾಮಗಾರಿ ಮುಗಿಸುವಂತೆ ಜನಪತ್ರಿನಿಧಿಗಳು ಮತ್ತು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿಕೊಂಡು ಗಮನಹರಿಸುತ್ತಿಲ್ಲ ಎನ್ನಲಾಗುತ್ತಿದೆ.
ಪಟ್ಟಣ ಸೇರಿ ಜಾಲಹಳ್ಳಿ ಗ್ರಾಮದಲ್ಲಿ ನಿರ್ಮಿಸಲಾದ ಎರಡು ಶಾದಿಮಹಲ್ಗಳು ವರ್ಷಗಳೇ ಗತಿಸಿದರೂ ಪೂರ್ಣವಾಗಿಲ್ಲ. ಮದುವೆ, ಸಭೆ ಸಮಾರಂಭ ಮಾಡಲು ಸಾವಿರಾರ ರೂ. ವೆಚ್ಚ ಭರಿಸಬೇಕಾಗುತ್ತಿದೆ. ಆದ್ದರಿಂದ ಅಗತ್ಯ ಅನುದಾನ ನೀಡಿ ಬೇಗನೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸಮಾಜದ ಮುಖಂಡ ಮಹ್ಮದ್ ಜಾನಿ ಆಗ್ರಹಿಸಿದ್ದಾರೆ.
ಜಾಲಹಳ್ಳಿ ಗ್ರಾಮದ ಹೊರವಲಯದಲ್ಲಿ ನಿರ್ಮಾಣ ಹಂತದಲ್ಲಿರುವ ಶಾದಿಮಹಲ್ ಪೂರ್ಣಗೊಳಿಸಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇಲ್ಲಿನ ಶಾದಿಮಹಲ್ ಕಾಮಗಾರಿ ಪೂರ್ಣಗೊಳಿಸಿ ಸಭೆ, ಸಮಾರಂಭ ನಡೆಸಲು ಬಡ ಕುಟುಂಬಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಹಾಜಿ ಮಲ್ಲಿಕ್ ಅಹ್ಮದ್, ನೂರು ಮಹ್ಮದ್ ಬಳಿಗಾರ ಒತ್ತಾಯಿಸಿದ್ದಾರೆ.
ವಿದ್ಯುತ್, ಸುಣ್ಣಬಣ್ಣ ಇತರೆ ಸಣ್ಣಪುಟ್ಟ ಕೆಲಸಗಳು ಬಾಕಿ ಉಳಿದಿವೆ. ಮಾಜಿ ಸಂಸದ ಬಿ.ವಿ. ನಾಯಕ ಅವರಿಗೆ ಹಲವು ಬಾರಿ ಅನುದಾನ ನೀಡಿ ಮುಸ್ಲಿಂ ಸಮುದಾಯಕ್ಕೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ.
•
ಫಾರುಕ್ ಅಹ್ಮದ್,
ಶಾದಿಮಹಲ್ ಕಮಿಟಿ ಅಧ್ಯಕ್ಷ