Advertisement

ವಸತಿ ನಿಲಯಕ್ಕೆ ವಿದ್ಯಾರ್ಥಿಗಳ ಆಯ್ಕೆಗೆ ಹಿನ್ನಡೆ

10:57 AM Jul 26, 2019 | Naveen |

ನಾಗರಾಜ ತೇಲ್ಕರ್‌
ದೇವದುರ್ಗ:
ಶಾಲಾ-ಕಾಲೇಜು ಆರಂಭವಾಗಿ ಎರಡು ತಿಂಗಳಾಗುತ್ತ ಬಂದರೂ ಈವರೆಗೆ ವಸತಿ ನಿಲಯಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡದ್ದರಿಂದ ಗ್ರಾಮೀಣ ವಿದ್ಯಾರ್ಥಿಗಳು ಮನೆಯಿಂದ ಶಾಲಾ-ಕಾಲೇಜಿಗೆ ಅಲೆದಾಡುವಂತಾಗಿದೆ.

Advertisement

ವಸತಿ ನಿಲಯಗಳಿಗೆ ವಿದ್ಯಾರ್ಥಿಗಳ ಆಯ್ಕೆ ಸಮಿತಿಗೆ ಶಾಸಕರೇ ಅಧ್ಯಕ್ಷರಾಗಿದ್ದಾರೆ. ವಿದ್ಯಾರ್ಥಿಗಳ ಆಯ್ಕೆ ಪಟ್ಟಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಕೈಯಲ್ಲಿದ್ದರೂ ಶಾಸಕರ ಅಂಕಿತವಿಲ್ಲದೇ ಆಯ್ಕೆ ಅಂತಿಮಗೊಳ್ಳುತ್ತಿಲ್ಲ ಎನ್ನಲಾಗಿದೆ.

ಸಮಾಜ ಕಲ್ಯಾಣ, ಬಿಸಿಎಂ ಇಲಾಖೆ, ಅಲ್ಪಾಸಂಖ್ಯಾತರ, ಎಸ್‌ಟಿ ಇಲಾಖೆಗಳ ವಸತಿ ನಿಲಯಕ್ಕೆ ಪ್ರವೇಶ ಕೋರಿ ಅರ್ಜಿ ಸಲ್ಲಿಸಿದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಆಯ್ಕೆ ಪ್ರಕ್ರಿಯೆಗಾಗಿ ಕಾಯುತ್ತಿದ್ದಾರೆ. ಬಿಸಿಎಂ ವಸತಿ ನಿಲಯ, ಮೆಟ್ರಕ್‌ ನಂತರ ಬಾಲಕರ ವಸತಿ ನಿಲಯಕ್ಕೆ 188 ಅರ್ಜಿಗಳು ಬಂದಿವೆ. 93 ಬಾಲಕಿಯರ ಅರ್ಜಿಗಳು ಬಂದಿದ್ದು, ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಲಾಗಿದೆ. ಆದರೆ ಬಾಲಕರ ಆಯ್ಕೆಯನ್ನು ಶಾಸಕರು ಅಂತಿಮ ಮಾಡಬೇಕಾದ ಹಿನ್ನೆಲೆಯಲ್ಲಿ ಆಯ್ಕೆ ಪ್ರಕ್ರಿಯೆ ವಿಳಂಬವಾಗಿದೆ.

ಹಿಂದುಳಿದ ವರ್ಗ ಅಲ್ಪಸಂಖ್ಯಾತರ ಇಲಾಖೆಯ ಎರಡೇ ವಸತಿ ನಿಲಯಗಳಿವೆ. ಕಡಿಮೆ ವಿದ್ಯಾರ್ಥಿಗಳು ಅರ್ಜಿ ಹಾಕಿದ್ದರಿಂದ ಅಧಿಕಾರಿಗಳೇ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಮೆಟ್ರಕ್‌ ನಂತರದ ಎರಡು ವಸತಿ ನಿಲಯಗಳಿವೆ. ಜು.31ರವರೆಗೆ ಪ್ರವೇಶಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಈಗಾಗಲೇ ನೂರಾರು ಅರ್ಜಿ ಬಂದಿವೆ. ಆಯ್ಕೆ ಸಮಿತಿ ಅಧ್ಯಕ್ಷರಾದ ಶಾಸಕ ಶಿವನಗೌಡ ನಾಯಕ ಅವರು ಬಂದ ಬಳಿಕ ವಿದ್ಯಾರ್ಥಿಗಳ ಆಯ್ಕೆ ಅಂತಿಮವಾಗಲಿದೆ ಎನ್ನುತ್ತಾರೆ ಅಧಿಕಾರಿಗಳು. ಹೀಗಾಗಿ ನೂರಾರು ವಿದ್ಯಾರ್ಥಿಗಳು ನಿತ್ಯ ಮನೆಯಿಂದ ಶಾಲಾ-ಕಾಲೇಜಿಗೆ ಅಲೆದಾಡುತ್ತಿದ್ದಾರೆ.

ಸಮಾಜ ಕಲ್ಯಾಣ ಖಾತೆ ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಮಂಜೂರಾತಿಗಿಂತ ಹೆಚ್ಚು ವಿದ್ಯಾರ್ಥಿಗಳನ್ನು ಆಯ್ಕೆ ಮಾಡದಂತೆ ಆದೇಶ ಹೊರಡಿಸಿದ್ದರು. ಅವರ ಆದೇಶದಿಂದ ಬಹುತೇಕ ವಿದ್ಯಾರ್ಥಿಗಳಲ್ಲಿ ಆತಂಕ ಶುರುವಾಗಿತ್ತು. ಕಳೆದ ವಾರದ ಹಿಂದೆ ಪ್ರವೇಶ ಕೋರಿ ಅರ್ಜಿ ಸಲ್ಲಿಸಿದ ಹೆಚ್ಚುವರಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವಂತೆ ಸರ್ಕಾರ ಆದೇಶಿಸಿದ್ದರಿಂದ ವಿದ್ಯಾರ್ಥಿಗಳಲ್ಲಿನ ಆತಂಕ ದೂರವಾಗಿದೆ. ಆದರೆ ಶಾಸಕರು ಬರುವವರೆಗೆ ಆಯ್ಕೆ ವಿಳಂಬವಾಗಲಿದೆ ಎನ್ನಲಾಗಿದೆ.

Advertisement

ಆಯ್ಕೆ ಸಮಿತಿ ಅಧ್ಯಕ್ಷರಾದ ಶಾಸಕರು ಇಲ್ಲದೇ ಇರುವುದರಿಂದ ಮೆಟ್ರಿಕ್‌ ಪೂರ್ವ ವಸತಿ ನಿಲಯದಲ್ಲಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ 6ರಿಂದ 10ನೇ ತರಗತಿ ವಿದ್ಯಾರ್ಥಿಗಳನ್ನು ಶಾಸಕರ ಆಪ್ತರೇ ಆಯ್ಕೆ ಮಾಡಿ ಅನುಕೂಲ ಮಾಡಿಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಕೂಡಲೇ ಆಯ್ಕೆ ಸಮಿತಿ ಅಧ್ಯಕ್ಷರಾದ ಶಾಸಕರು ವಸತಿ ನಿಲಯಗಳ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ಚುರುಕಾಗಿ ಮಾಡಬೇಕು ಎಂದು ವಿದ್ಯಾರ್ಥಿ ವಿನೋದಕುಮಾರ, ಸಂಜೀವ ಆಗ್ರಹಿಸಿದ್ದಾರೆ.

ಶಾಲಾ-ಕಾಲೇಜು ಶುರುವಾಗಿ ಎರಡು ತಿಂಗಳು ಕಳೆಯುತ್ತಿದೆ. ಶಾಸಕರು ರಾಜಕೀಯದಲ್ಲಿ ಬಿಜಿ ಆಗಿದ್ದರಿಂದ ಹಾಸ್ಟೇಲ್ ಪ್ರವೇಶಕ್ಕೆ ಅರ್ಜಿ ಹಾಕಿದ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ವಿಳಂಬವಾಗಿದೆ. ವಿದ್ಯಾರ್ಥಿಗಳು ನಿತ್ಯ ಅಲೆದಾಡುವಂತಾಗಿದೆ.
ಲಿಂಗಣ್ಣ ಮಕಾಶಿ,
ಎಸ್‌ಎಫ್‌ಐ ತಾಲೂಕು ಅಧ್ಯಕ್ಷ

ಹಾಸ್ಟೇಲ್ ಪ್ರವೇಶ ಬಯಸಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿನಿಯರ ಅರ್ಜಿ ಪರಿಶೀಲಿಸಿ ಆಯ್ಕೆ ಮಾಡಲಾಗಿದೆ. ಬಾಲಕರನ್ನು ಶಾಸಕರ ಗಮನಕ್ಕೆ ತಂದು ಅಂತಿಮ ಮಾಡಲಾಗುತ್ತದೆ.
ದೇವಪ್ಪ ಯಂಕಂಚಿ,
ಬಿಸಿಎಂ ವಿಸ್ತಾರಣಾಧಿಕಾರಿ

ಹಾಸ್ಟೇಲ್ಗಳಲ್ಲಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಜು.31ರವರೆಗೆ ಅವಕಾಶವಿದೆ. ಈಗಾಗಲೇ ಅರ್ಜಿ ಸಲ್ಲಿಸಿದವರ ಪಟ್ಟಿ ತಯಾರಿಸಲಾಗಿದೆ. ಆಯ್ಕೆ ಸಮಿತಿ ಸೂಚನೆಯಂತೆ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.
ಫಕ್ಕೀರಪ್ಪ ಹಾಲವರ,
ಸಮಾಜ ಕಲ್ಯಾಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next