ದೇವದುರ್ಗ: ಪ್ರಸಕ್ತ ಶೈಕ್ಷಣಿಕ ವರ್ಷ ಮೇ 29ರಿಂದ ಆರಂಭವಾಗಲಿದ್ದು, ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಸ್ವಾಗತಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳು ಅಗತ್ಯ ಸಿದ್ಧತಾ ಕಾರ್ಯದಲ್ಲಿ ತೊಡಗಿದ್ದಾರೆ. ಮಕ್ಕಳನ್ನು ಸೆಳೆಯಲು ಕ್ಲಸ್ಟರ್ ಮಟ್ಟದಲ್ಲಿ ಜಾಗೃತಿ ಜಾಥಾ ನಡೆಸಲಾಗುತ್ತಿದೆ.
ಪಠ್ಯಪುಸ್ತಕ ಪೂರೈಕೆ: ಸರಕಾರಿ ಶಾಲೆಗಳು ಮೇ 29ರಂದು ಆರಂಭವಾಗಲಿವೆ. ಈಗಾಗಲೇ ಶಾಲೆಗಳಿಗೆ ಪಠ್ಯಪುಸ್ತಕ ಪೂರೈಕೆ ಆರಂಭವಾಗಿದ್ದು, ಕೆಲ ಶಾಲೆಗಳಿಗೆ ತಲುಪಿವೆ. 1 ಮತ್ತು 2ನೇ ತರಗತಿ ಮಕ್ಕಳಿಗೆ ಪುಸ್ತ್ತಕಗಳನ್ನು ಸರಬರಾಜು ಮಾಡಲಾಗಿದೆ. 3ನೇ ತರಗತಿ ಕನ್ನಡ, ಇಂಗ್ಲಿಷ್, ಗಣಿತ ಸೇರಿ ಇತರೆ ವಿಷಯಗಳ ಪುಸ್ತಕ ಸರಬರಾಜು ಮಾಡಲಾಗಿದೆ. ಪರಿಸರ ವಿಷಯ ಪಠ್ಯಪುಸ್ತಕ ಪೂರೈಕೆ ಬಾಕಿ ಇದೆ. 5ನೇ ತರಗತಿಯ ಎಲ್ಲ ವಿಷಯಗಳ ಪುಸ್ತಕಗಳನ್ನು ಪೂರೈಸಲಾಗಿದೆ. 6ನೇ ತರಗತಿ ಕನ್ನಡ, ಇಂಗ್ಲಿಷ್, ಗಣಿತ, ಸಮಾಜ, ಹಿಂದಿ, ದೈಹಿಕ ಶಿಕ್ಷಣ ಪುಸ್ತಕಗಳನ್ನು ಒದಗಿಸಿದ್ದು, ವಿಜ್ಞಾನ, ಸಮಾಜ, ಗಣಿತ ಭಾಗ-2 ಪುಸ್ತಕಗಳು ಪೂರೈಕೆಯಾಗಿಲ್ಲ. 7, 8, 9ಮತ್ತು 10ನೇ ತರಗತಿ ಗಣಿತ, ಸಮಾಜ, ವಿಜ್ಞಾನ ಭಾಗ-2 ವಿಷಯ ದೈಹಿಕ ವಿಷಯ ಪುಸ್ತಕಗಳ ಪೂರೈಕೆ ವಿಳಂಬವಾಗಿದೆ. ಉಳಿದ ಎಲ್ಲ ವಿಷಯ ಪುಸ್ತಕಗಳನ್ನು ಸರ್ಕಾರ ಪೂರೈಸಿದೆ. ಶಾಲಾ ಆರಂಭಗೊಂಡ ನಂತರ ಎರಡ್ಮೂರು ದಿನಗಳಲ್ಲಿ ಬಾಕಿ ಪುಸ್ತಕಗಳು ಪೂರೈಕೆ ಆಗಲಿವೆ ಎಂದು ನೋಡಲ್ ಅಧಿಕಾರಿ ಚಿದಾನಂದಪ್ಪ ಶಿವಂಗಿ ತಿಳಿಸಿದರು.=
ಸಮವಸ್ತ್ರ ಪೂರೈಕೆ: ಪಟ್ಟಣ ಸೇರಿ ತಾಲೂಕಿನಾದ್ಯಂತ ಸರಕಾರಿ ಶಾಲೆಯ ಸುಮಾರು 42 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಸರ್ಕಾರ ಸಮವಸ್ತ್ರ ಪೂರೈಸಿದೆ. ಆದರೆ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿನಿಯರಿಗೆ ಚೂಡಿದಾರ ಪೂರೈಕೆಯಲ್ಲಿ ವಿಳಂಬವಾಗಿದ್ದು, ಟೆಂಡರ್ ಪ್ರಕ್ರಿಯೆ ಆಗಬೇಕಿದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ. 1ರಿಂದ 7ನೇ ತರಗತಿ ಮಕ್ಕಳಿಗೆ ಸಮವಸ್ತ್ರ ಪೂರೈಸಲಾಗಿದೆ. 25 ಕ್ಲಸ್ಟರ್‌ಗಳಿಗೆ ಈಗಾಗಲೇ ಪಠ್ಯಪುಸ್ತ್ತಕ, ಸಮವಸ್ತ್ರ ಪೂರೈಸಲಾಗಿದೆ. ಶಾಲಾ ಆರಂಭದ ದಿನವೇ ಎಲ್ಲ ಮಕ್ಕಳಿಗೆ ವಿತರಣೆ ಮಾಡುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸಂಬಂಧಿಸಿದ ಸಿಆರ್‌ಪಿಗಳಿಗೆ ಶಾಲಾ ಮುಖ್ಯಶಿಕ್ಷಕರಿಗೆ ಸೂಚನೆ ನೀಡಲಾಗಿದೆ.
ಜಾಗೃತಿ ಜಾಥಾ: ಶೈಕ್ಷಣಿಕ ವರ್ಷದಿಂದಲೇ ತಾಲೂಕಿನ 5 ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭವಾಗಲಿದೆ. ಹೀಗಾಗಿ ಶಿಕ್ಷಣ ಇಲಾಖೆಯಿಂದ 25 ಕ್ಲಸ್ಟರ್ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಗಳ ಬಲವರ್ಧನೆ ಜತೆಗೆ ಮಕ್ಕಳ ದಾಖಲಾತಿ ಹೆಚ್ಚಿಸಲು ಜಾಗೃತಿ ಜಾಥಾ ನಡೆಸಲಾಗುತ್ತಿದೆ. ಶಾಲೆಯಿಂದ ಹೊರಉಳಿದ ಮಕ್ಕಳನ್ನು ಶಾಲೆಗೆ ಕರೆತರಲು ಸಿದ್ಧತೆ ನಡೆದಿವೆ. ಶಿಕ್ಷಣ ಪಡೆಯಬೇಕಾದ ಮಕ್ಕಳನ್ನು ಹೊಲಗದ್ದೆ ಇತರೆ ಕೆಲಸಗಳಿಗೆ ಕಳಿಸದಂತೆ ಪಾಲಕರಲ್ಲಿ ಅರಿವು ಮೂಡಿಸಲಾಗುತ್ತಿದೆ.
ಬಹುತೇಕ ಪಠ್ಯಪುಸ್ತಕಗಳನ್ನು ಪೂರೈಸಲಾಗಿದೆ. ಬಾಕಿ ಇರುವ ಪುಸ್ತಕಗಳನ್ನು ಶಾಲೆ ಆರಂಭವಾದ ನಂತರ ಎರಡ್ಮೂರು ದಿನಗಳಲ್ಲಿ ಸರಬರಾಜು ಮಾಡಲಾಗುವುದು. 8, 9 ಮತ್ತು10ನೇ ತರಗತಿ ವಿದ್ಯಾರ್ಥಿನಿಯರಿಗೆ ಚೂಡಿದಾರ ಪೂರೈಕೆ ಆಗಿಲ್ಲ. ಉಳಿದ ತರಗತಿ ಮಕ್ಕಳಿಗೆ ಸಮವಸ್ತ್ರ ಸರಬರಾಜು ಮಾಡಲಾಗಿದೆ.
•
ಎಸ್.ಎಂ. ಹತ್ತಿ,
ಕ್ಷೇತ್ರ ಶಿಕ್ಷಣಾಧಿಕಾರಿ